Sunday 29 November 2015

ಮಾನವ – ವನ್ಯಜೀವಿ ಸಂಘರ್ಷ


ಕಳೆದೊಂದು ವಾರದಿಂದ ಎಚ್.ಡಿ. ಕೋಟೆ ತಾಲ್ಲೂಕಿನ ಕಾಡಂಚಿನ ಗ್ರಾಮಗಳಿಂದ ಮನುಷ್ಯರ ಮೇಲಿನ ಹುಲಿದಾಳಿಯ ಬಗೆಗಿನ ಸುದ್ದಿಗಳು, ನಂತರ ಹುಲಿಯ ಹತ್ಯೆಯ ಸುದ್ದಿ ಎಲ್ಲಾ ಪ್ರಮುಖ ಪತ್ರಿಕೆಗಳಲ್ಲೂ ಮಹತ್ವದ ಸ್ಥಾನ ಪಡೆದಿವೆ. ಹೆಡಿಯಾಲ ಅರಣ್ಯ ವ್ಯಾಪ್ತಿಯಲ್ಲಿ ಗುಂಡಿಗೆ ಆಹುತಿಯಾದ ಹುಲಿಯು ನರಭಕ್ಷಕ ಎಂದು ಮರಣೋತ್ತರ ಪರೀಕ್ಷೆಯಲ್ಲಿ ಸಾಬೀತಾಗಿದೆ.
ಹುಲಿ ಎರಗಿದ್ದು ಯಾರ ಮೇಲೆ? ಹುಲಿಗೆ ಬಲಿಯಾದದ್ದು ಎಂತಹ ಸ್ಥಳದಲ್ಲಿ? ಹುಲಿಯನ್ನು ಕೊಂದವರಾರು? ಹುಲಿಯನ್ನು ಕೊಲ್ಲದೆಯೂ ದಾಳಿಯಿಂದ ಮುಕ್ತಿ ಪಡೆಯಬಹುದಿತ್ತೆ? ಎಂಬೆಲ್ಲಾ ಪ್ರಶ್ನೆಗಳು ಮೂಡುತ್ತವೆ.
ಹುಲಿದಾಳಿಗೆ ಬಲಿಯಾದ ವ್ಯಕ್ತಿಗಳು ರೈತರು ಇಲ್ಲವೆ ದನಗಾಹಿಗಳು. ಅವರು ದಾಳಿಗೆ ಒಳಗಾದ ಪ್ರದೇಶ ಊರಾಚೆ, ಕಾಡಂಚಿನ ಸ್ಥಳಗಳು. ಈ ಸ್ಥಳಗಳು ಬಹುತೇಕವಾಗಿ ಕಾಡಿಗೇ ಸೇರಬೇಕಾದ ಜಾಗಗಳು. ರಕ್ಷಿತಾರಣ್ಯದ ಸುತ್ತಲೂ ಹಲವಾರು ಒತ್ತುವರಿ ಪ್ರಕರಣಗಳು ಇಂದಿಗೂ ಜೀವಂತವಿರಬಹುದು . ಸಂಕುಚಿತವಾದ ಆವಾಸಸ್ಥಾನದಿಂದಾಗಿ ದೊಡ್ಡ ಮಾಂಸಾಹಾರಿ ವನ್ಯಜೀವಿಗಳು ಆಹಾರ ಮತ್ತು ಆವಾಸಗಳ ಅಭಾವವನ್ನೆದುರಿಸುತ್ತವೆ. ಅಂತಹ ಒತ್ತಡವೊಂದು ಬಲಿಯಾದ ಹುಲಿಗೂ ಇದ್ದಿತೆಂಬುದು ಸ್ಪಷ್ಟ. ಏಕೆಂದರೆ ಆ ಹುಲಿಯ ಮೈಮೇಲೆ ಮತ್ತೊಂದು ಹುಲಿ ದಾಳಿ ಮಾಡಿದ, ಹೋರಾಟ ನಡೆಸಿದ ಕುರುಹುಗಳಿದ್ದುದ್ದಾಗಿ ತಿಳಿದು ಬಂದಿದೆ.  ಜಿಮ್ ಕಾರ್ಬೆಟ್, ಕೆನೆತ್ ಆಂಡರ್ಸನ್ ರ ಕಾಲದಿಂದ ಹಿಡಿದು ಇಂದಿಗೂಹುಲಿ ನರಭಕ್ಷಕನಾಗಲು ಕಾರಣಗಳೇನು ಎಂಬುದು ಊಹೆಯಾಗಿಯೇ ಉಳಿದಿದೆ. ಜಾನುವಾರುಗಳನ್ನಾಗಲೀ, ಮಾನವರನ್ನಾಗಲೀ ಭಕ್ಷಿಸಿದ ಹುಲಿಗೆ ಏನು ಮಾಡಬಹುದೆಂಬ ಪ್ರಶ್ನೆಯೆದ್ದಾಗ ಎರಡು ಮಾರ್ಗಗಳನ್ನು ಅನುಸರಿಸಿರುವುದು ಕಂಡುಬರುತ್ತದೆ.

ಮೊದಲನೆಯದು, ಜೀವಿಸುವ ಹಕ್ಕು ಎಲ್ಲಾ ಜೀವಿಗಳಿಗೂ ಇದೆ, ಅದರಂತೆ ನರಭಕ್ಷಕ ಹುಲಿಯನ್ನು ಸೆರೆಹಿಡಿದು ಮತ್ತೊಂದು ಸಂರಕ್ಷಿತ ಪ್ರದೇಶದಲ್ಲೋ, ಮೃಗಾಲಯಗಳಲ್ಲೋ ನೆಲೆಯೊದಗಿಸಬಹುದು ಎಂಬ ವಾದ. ಇದು ಸಂಕೀರ್ಣವಾದ ಉಪಾಯ.ನರಭಕ್ಷಕ ಹುಲಿಗಳು ಸಾಮಾನ್ಯವಾಗಿ ಕುಟಿಲ ಜಂತುಗಳು. ನೈಸರ್ಗಿಕವಾಗಿ ಹುಲಿಗಿರಬೇಕಾದ ವರ್ತನೆ ನರಭಕ್ಷಕಗಳಲ್ಲಿ ವಿರಳ. ಸಂಚಿನ, ಕಪಟದ ಚಾತುರ್ಯವೇ ಹೆಚ್ಚು. ಹೀಗಾಗಿ, ಸ್ಥಳಾಂತರ ಮಾರಕವಾಗಿಯೂ ಪರಿಣಮಿಸಬಹುದು. ನರಭಕ್ಷಕ ಹುಲಿಗಳು ಮೃಗಾಲಯಗಳಿಗೆ ಹೊಂದಿ ಬದುಕಿದ ಉದಾಹರಣೆಗಳು ಅಪರೂಪ. ಅಪಾಯವೇ ಹೆಚ್ಚಾಗಿರುವ ನರಭಕ್ಷಕ ಹುಲಿಯ ಸೆರೆ ಅಷ್ಟೊಂದು ಬುದ್ಧಿವಂತಿಕೆಯೆ ಹಾದಿಯಾಗಿ ಹೆಚ್ಚಿನ ಜನರಿಗೆ ಕಾಣುವುದಿಲ್ಲ. ಆದರೂ ರಾಕೆಟ್ ತಂತ್ರಜ್ನಾನದ ಈ ಯುಗದಲ್ಲಿ ಹುಲಿಗೂ ಬದುಕಲು ಅವಕಾಶವಿರುವ ಮಾರ್ಗವನ್ನು ಅನುಸರಿಸಬೇಕಿತ್ತೆಂದು ಅನಿಸದಿರದು.

ಎರಡನೆಯ ಮಾರ್ಗ ನರಭಕ್ಷಕ ಹುಲಿಯ ಹತ್ಯೆ. ಗುಂಡಿಕ್ಕಿಯೋ, ಉರುಳು – ಬೋನುಗಳಿಗೆ ಸಿಲುಕಿಸಿಯೋ, ವಿಷಪ್ರಾಶನ ಮಾಡಿಯೋ ಕೊಲ್ಲುವುದು. ಗಡಿಯೊಳಗೆ ನುಸುಳಿದ ನೆರೆದೇಶದ ಮನುಷ್ಯರನ್ನೂ, ಪ್ರಾಣಿಗಳನ್ನೂ ( ಹಾರುವ ಪಕ್ಷಿಗಳಿಗೆ ಅನ್ವಯಿಸಲಾರದು!) ಏನು ಮಾಡುವರು? ಶಿಕ್ಷೆಗೊಳಪಡಿಸುವರಲ್ಲವೆ? ವನ್ಯಜೀವಿಗಳಿಗೂ ಬಹುಶಃ ಅದೇ ಮಾನವ ನಿರ್ಮಿತ, ಮಾನವ ಕೇಂದ್ರಿತ ಕಾನೂನು. ಸಂರಕ್ಷಿತಾರಣ್ಯದಿಂದ ಹೊರಗೆ ಕಾಣಿಸಿಕೊಂಡರೆ ಶಿಕ್ಷೆ. ನರಭಕ್ಷಕನಾದರೆ ಮರಣದಂಡನೆ. ಅರಣ್ಯದ ಪರಿಧಿಯೊಳಗೆಯೇ ಒತ್ತಡದ ನಡುವೆಯೇ ಜೀವಿಸಲು ಕಲಿತ ವನ್ಯಜೀವಿಗಳಿಗೆ ಅವಕಾಶ. ಅರಣ್ಯದಿಂದ ಹೊರಬಂದವುಗಳ ವಿನಾಶ, ಬಿ.ಎಫ್. ಸ್ಕಿನ್ನರನ ಶಿಕ್ಷಾನಿಯಂತ್ರಣ ಸಿದ್ಧಾಂತದಂತೆ.

ಎರಡನೆಯ ಮಾರ್ಗ ಹೆಚ್ಚಾಗಿ ಪಾಶ್ಚಾತ್ಯ ಪ್ರಣೀತವಾದದ್ದು. ಬಂಡೀಪುರ ರಾಷ್ಟ್ರೀಯ ಉದ್ಯಾನದ ಹೆಡಿಯಾಲದಲ್ಲಿ ಕೊಲ್ಲಲಾದ ನರಭಕ್ಷಕ ಹುಲಿಯ ಹತ್ಯೆ ಕ್ರೌರ್ಯವೆ? ಅಥವಾ ನಿಸರ್ಗದತ್ತ ನಿಯಮಕ್ಕೆ ತಕ್ಕುದಾದುದೆ? ಬಂಡೀಪುರದಲ್ಲಿ ಸದರಿ ಅರಣ್ಯ ಅಧಿಕಾರಿಗಳು ಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡಿರುವ ಚಿಣ್ಣರ ಅರಣ್ಯ ದರ್ಶನದಂತಹ ಕಾರ್ಯಕ್ರಮಗಳಲ್ಲಿ ಪ್ರಚುರಪಡಿಸುತ್ತಿರುವ ಮಾಂಸಾಹಾರ ತ್ಯಜಿಸುವ, ಶಾಖಾಹಾರ ಪ್ರೋತ್ಸಾಹಿಸುವ ಮಾತುಗಳಲ್ಲಿ ಕಾಣುವ ಪ್ರಾಣಿದಯೆ ನರಭಕ್ಷಕ ಹುಲಿಗೆ ಏಕಿಲ್ಲವೆಂಬ ಸಂಕೀರ್ಣ ಪ್ರಶ್ನೆ ಹಾಗೆಯೇ ಉಳಿದುಬಿಡುತ್ತದೆ. ಇತಿಹಾಸದ ಪುಟಗಳನ್ನು ತಿರುವಿದಾಗ ಹಿಂದೆಂದೂ ಕಂಡರಿಯದ ಹುಲಿಯ ದಾಳಿ ದಕ್ಷಿಣ ಭಾರತದಲ್ಲಿ ಈಗೇಕೆ ಹೆಚ್ಚಾಗಿದೆಯೆಂಬುದಕ್ಕೂ ಬೆಳಕು ಚೆಲ್ಲಲು ಇದು ಸಕಾಲ.


ಎಚ್. ಗೀತಾ