Saturday 21 March 2015

Tell it to the Birds....IE Magazine

Read here: http://epaper.newindianexpress.com/461148/The-New-Sunday-Express-Magazine/22032015#page/1/2
http://epaper.newindianexpress.com/461148/The-New-Sunday-Express-Magazine/22032015#page/2/2

ಮೈಸೂರಿನ ಕೆರೆಗಳ ಇಂದಿನ ಸ್ಥಿತಿ- ಗತಿ

ಭೂಗೋಲದ ಮುಕ್ಕಾಲುವಾಸಿ ನೀರೇ ಇರುವಾಗ ನೀರಿಗೇಕೆ ಈ ಹಾಹಾಕಾರ? ಜಲಯುದ್ಧ? ಮೂರನೇ ಮಹಾಯುದ್ಧವಾಗುವುದಾದರೆ ಅದು ನೀರಿಗಾಗಿಯೇ ಅಂತೆ! ಹಾಗಿರುವಾಗ ಸಿಹಿನೀರಿನ ಸೆಲೆಗಳನ್ನು ಉಳಿಸಿಕೊಳ್ಳಬೇಕು ಅಲ್ಲವೇ? ಮೈಸೂರಿನ ಕೆರೆಗಳ ಇಂದಿನ ಸ್ಥಿತಿ-ಗತಿಗಳನ್ನೊಮ್ಮೆ ಅವಲೋಕಿಸೋಣ. ಮೈಸೂರಿನ ಪ್ರಮುಖ ಕೆರೆಗಳೆಂದರೆ ಕುಕ್ಕರ ಹಳ್ಳಿ ಕೆರೆ, ಲಿಂಗಾಂಬುದಿ ಕೆರೆ, ಕಾರಂಜಿ ಕೆರೆ, ದೇವನೂರು ಕೆರೆ ಮತ್ತು ದಳವಾಯಿ ಕೆರೆ.
ಕುಕ್ಕರಹಳ್ಳಿ ಕೆರೆ
ಈ ಕೆರೆ ಮೈಸೂರಿನ ಹೃದಯಭಾಗದಲ್ಲಿದ್ದು, ಈ ನಗರದ ಶ್ವಾಸಕೋಶವಿದ್ದಂತೆ ಇದೆ. 1864ರಲ್ಲಿ ಸುತ್ತುಮುತ್ತಲಿನ ಹಳ್ಳಿಗಳ ಕೃಷಿ ನೀರಾವರಿಗೆಂದು ಮುಮ್ಮಡಿ ಕೃಷ್ಣರಾಜ ಒಡೆಯರ್ ಕಟ್ಟಿಸಿದ್ದು, ಕ್ರಮೇಣ ನಗರದ ಮನೆಗಳಿಗೆ ಕುಡಿಯುವ ನೀರು ಪೂರೈಕೆಗೆ ಬಳಕೆಯಾಗುತ್ತಿತ್ತು. ನಗರ ಬೆಳೆದಂತೆ, ಅಭಿವೃದ್ಧಿಗೊಂಡಂತೆ ಕೆರೆಗೆ ಚರಂಡಿ ನೀರು, ರಾಸಾಯನಿಕಗಳು ಸೇರಲಾರಂಭಿಸಿದವು. ಇದರಿಂದ ಕೆರೆಯಲ್ಲಿ ಪಾಚಿಸಸ್ಯಗಳು, ಜೊಂಡು, ಇತ್ಯಾದಿ ಕಲೆ ಸಸ್ಯಗಳು ಸಮೃದ್ಧವಾಗಿ ಬೆಳೆಯಲಾರಂಭಿಸಿದವು. ಏಕೆಂದರೆ ಅವುಗಳಿಗೆ ಬೇಕಾದ ಪೋಷಕಾಂಶಗಳು ಹೇರಳವಾಗಿ ಚರಂಡಿ ನೀರಿನಿಂದ ದೊರಕುವುದು. ರೀತಿಯ ಯೂಟ್ರಾಫಿಕೇಶನ್ ಆಗುವುದರಿಂದ ಕೆರೆಯಲ್ಲಿ ಹೂಳು ತುಂಬುವುದು ಹೆಚ್ಚಾಯಿತು.
ಹಿನಕಲ್, ಬೋಗಾದಿ, ಕುದುರೆಮಾಳ, ಮಾನಸ ಗಂಗೋತ್ರಿ, ಮೂಲಕ ಹಾದುಹೋಗಿದ್ದ ದೀವಾನ್ ಪೂರ್ಣಯ್ಯ ನಾಲೆಕೆರೆಗೆ ನೀರನ್ನು ಹರಿಸಿ ತರುವ ಪ್ರಮುಖ ಮಾರ್ಗ. ಮಳೆನೀರಿನ ಸಂಗ್ರಹಣಾ ಪ್ರದೇಶ (ಕ್ಯಾಚ್ಮೆಂಟ್ ಏರಿಯಾ) ಸುಮಾರು 414 . ಕಿ. ಮೀ. ಹೊಂದಿರುವ ಕುಕ್ಕರಹಳ್ಳಿ ಕೆರೆಗೆ ಪ್ರದೇಶಗಳಿಂದ ನೀರು ಬರುವುದಕ್ಕೆ ತಡೆಯುಂಟಾಯಿತು. ನಗರ ಬೆಳೆದಂತೆಲ್ಲಾ ನಾಲಾಪ್ರದೇಶವೂ ಒತ್ತುವರಿಗೊಂಡು ಹೇಸನೀರು ಕೆರೆಗೆ ಪ್ರವೇಶಿಸುವುದನ್ನು ತಡೆಹಿಡಿದಂತಾಯಿತು. ಒಂದೆಡೆ ಹೂಳು, ಪಾಚಿ, ಜೊಂಡು; ಮತ್ತೊಂದೆಡೆ ಹೊಸನೀರುಬರುವ ಮಾರ್ಗ ಬಂದಾಗಿರುವುದು; ಹಳೆಯನೀರಿಗೆ ಹೊರಹಾದಿ ಇಲ್ಲದಿರುವುದು; ಇದರಿಂದ ಕೆರೆ ಸಂಪೂರ್ಣ ಅವಸಾನದೆಡೆಗೆ ಸಾಗಿತ್ತು. 1981- 2001 ನಡುವೆ ಅನೇಕ ರಾಸಾಯನಿಕ- ಜೈವಿಕ ಪರೀಕ್ಷೆಗಳನ್ನು ವೈಜ್ಞಾನಿಕವಾಗಿ ವಿವಿಧ ವಿಶ್ವ ವಿದ್ಯಾನಿಲಯಗಳಲ್ಲಿ ನಡೆಸಲಾಗಿದ್ದು, ಕೆರೆ ವಿನಾಶದತ್ತ ಸರಿಯುತ್ತಿರುವುದನ್ನು ಸಾರಿ ತಿಳಿಸಿದವು. ಆದ್ರ ಪ್ರಕಾರ, ರಾಸಾಯನಿಕ ಅಂಶಗಳು ಜೈವಿಕ ಘಟಕಗಳಿಗಿಂತಲೂ ಹೆಚ್ಚಿದ್ದವು. ಪಾಚಿ ಸಸ್ಯಗಳ ಅತ್ತೇವೆ ಬೆಳವಣಿಗೆ ( ಆಲ್ಗಲ್ ಬ್ಲೂಮ್) ಯಿಂದಾಗಿ ಹಾಗೂ ಅವಿಗಳ ವಿಘಟನೆಯಿಂದಾಗಿ ಜೀವ ರಾಸಾಯನಿಕ ಅಂಶಗಳ ಸಾಂದ್ರತೆ ಹೆಚ್ಚಿ ವಿದ್ಯುದ್ವಿಚ್ಛೇದ್ಯಗಳ ( ಎಲೆಕ್ಟ್ರೊಲಿಟ್ಸ್) ಹೆಚ್ಚುವಿಕೆ, ಕರಗಿದ ಆಮ್ಲಜನಕದ ಕೊರತೆ, ಸಾರಜನಕ ಹಾಗೂ ಫಾಸ್ಫೇಟ್ಗಳ ಹೆಚ್ಚಳ, ಪಾಚಿ ಸಸ್ಯಗಳ ಹೆಚ್ಚಳದಿಂದಾಗಿ ಮತ್ತಷ್ಟು ಯೂಟ್ರಾಫಿಕೇಶನ್ ಹೆಚ್ಚಾಯಿತು.
ಎಲ್ಲಾ ಕಾರಣಗಳಿಂದ ಮತ್ತು ಅತೀವ ಮಲಿನ ನೀರಿನ ಸೇರ್ಪಡೆಯಿಂದ ಕುಕ್ಕರಹಳ್ಳಿ ಕೆರೆಯ ನೀರು ಯಾವುದೇ ರೀತಿಯ ಬಳಕೆಗೂ ಯೋಗ್ಯವಲ್ಲದ್ದಾಯಿತು. ಹೈಡ್ರೊಜನ್ ಸಲ್ಫೈಡ್ ಅನಿಲದ ಹೆಚ್ಚಿದ ಪ್ರಮಾಣ ಮಾಲಿನ್ಯವನ್ನು ಖಚಿತಪಡಿಸುತ್ತದೆ. ಸಾಲ್ಮೊನೆಲ್ಲ, ಪ್ರೋಟಿಯಸ್, ಸಿಟ್ರೋಬಾಕ್ಟೇರ್, ಮತ್ತು ಕ್ಲೆಬ್ಸಿಎಲ್ಲ ಪ್ರಬೇಧಗಳ ಬೆಳೆಯುವಿಕೆಯೂ ಇದೆ ಅಂಶವನ್ನು ಪುಷ್ಟೀಕರಿಸುತ್ತದೆ. ಜೈವಿಕ ಸೂಚಕ ( ಬೈಯೊಲಾಜಿಕಲ್ ಇಂಡಿಕೇಟರ್ಸ್) ಗಳಾದ ಕ್ಲಾರಾಕಾಕಲ್ಸ್, ಡೆಸ್ಮಿಡ್ಗಳು, ಡಯಾಟಂಗಳು, ನೀಲಿ-ಹಸಿರು ಪಾಚಿ, ಯುಗ್ಲಿನಾಯಿಡ್ಗಳು, ನೀರಿನ ಆರೋಗ್ಯವನ್ನು ಎಷ್ಟು ಹದಗೆಟ್ಟಿದೆಯೆಂದು ಸೂಚಿಸುತ್ತವೆ. ಎಲ್ಲ ಪ್ರಬೇಧಗಳ ಇರುವಿಕೆ, ಜೀವ ರಾಸಾಯನಿಕಗಳ ಹೆಚ್ಚಳದಿಂದಾಗಿ ಕೆರೆಯ ನೀರಿನ ಜೈವಿಕ ಆಮ್ಲಜನಕದ ಬೇಡಿಕೆ( BOD) ಹೆಚ್ಚಾಗಿದೆ. BOD ಹೆಚ್ಚಿದಷ್ಟೂ ಜೀವಿಗಳಿಗೆ ಜೀವಿಸಲು ಬಲು ಕಷ್ಟ, ಅಸಾಧ್ಯ.
ಪಕ್ಷಿಗಳ ಮೇಲಿನ ಪರಿಣಾಮ
ಒಂದು ಕಾಲದಲ್ಲಿ ಸುಮಾರು 176 ಪ್ರಬೇಧಗಳಿಗೆ ಸೇರಿದ ( ವಲಸೆ ಪಕ್ಷಿಗಳೂ ಸೇರಿ) 10 ರಿಂದ 15 ಸಾವಿರ ಪಕ್ಷಿಗಳು ಚಳಿಗಾಲದಲ್ಲಿ ವಿಶ್ರಮಿಸಲು ಬರುತ್ತಿದ್ದವು. ಮ್ಯಾನ್( MAN) ಸಂಸ್ಥೆಯು ಪ್ರತಿವರ್ಷವೂ ವ್ಯವಸ್ಥಿತವಾಗಿ ಪಕ್ಷಿವೀಕ್ಷಣೆಯನ್ನು ಕೆರೆಯಲ್ಲಿ ಏರ್ಪಡಿಸುತ್ತಿತ್ತು. ಕಳೆದ ಒಂದು ದಶಕದಲ್ಲಿ ಕೆರೆಯ ಯುಟ್ರೋಫಿಕ್ ಮಟ್ಟ ಹೆಚ್ಚಾದಂತೆಯೂ ಪಕ್ಷಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖವಾಗಿದೆ, ಪಕ್ಷಿದ್ವೀಪದಲ್ಲಿ ಇಂದು ನಾವು ಸುಮಾರು 2 ಸಾವಿರ ಪಕ್ಷಿಗಳನ್ನಷ್ಟೆ ಕಾಣಬಹುದು. ಹೆಜ್ಜಾರ್ಲೆ,ನೀರುಕಾಗೆ, ಬಣ್ಣದ ಕೊಕ್ಕರೆ, ಬಾಯ್ಕಳಕ, ರಾತ್ರಿ ಬಕ, ಚಮಚದ ಕೊಕ್ಕು ಹಕ್ಕಿ, ಹಾವಕ್ಕಿ ಇವುಗಳು ಪ್ರಮುಖವಾದವು.
ಬರ್ಡ್ ಲೈಫ್ ಇಂಟರ್ನ್ಯಾಶನಲ್ ಸಂಸ್ಥೆಯು ಕೆರೆಯನ್ನು ಕರ್ನಾಟಕದ 38 ಪ್ರಮುಖ ಪಕ್ಷಿತಾಣಗಳಲ್ಲಿ ( ಇಂಪಾರ್ಟೆಂಟ್ ಬರ್ಡ್ ಏರಿಯಾ- IBA)   ಎಂದು ದಾಖಲಿಸಿದೆ. IBA ಕೋಡ್ IN-KA-20 ಹೊಂದಿದೆ. ಇಂದು ಕಾಣುವ ಪ್ರಬೇಧಗಳಲ್ಲಿ ಬಹುಪಾಲು ಅಳಿವಿನಂಚಿನಲ್ಲಿವೆಯೆಂದು ಇಂಡೋ- ಮಲೇಯನ್ ಜೀವಾವಾಸದ 12 ಪಕ್ಷಿ ಪ್ರಬೇಧಗಳ ಪೈಕಿ 5 ಮಾತ್ರ ಉಳಿದಿವೆಯೆಂದೂ, ಇದು ಪಕ್ಷಿ ಸಂರಕ್ಷಿತ ವಲಯವೆಂದೂ ಘೋಷಿಸಲಾಗಿದೆ.
ಒಂದು ಜೀವಂತ, ಆರೋಗ್ಯಕರ ಕೆರೆಗೆ ಬಂದೊದಗಿರುವ  ಆಪತ್ತು ಇದು. ಸಾಲದೆಂಬಂತೆ ಕೆರೆಯ ಒಡೆತನವನ್ನು ಹೊಂದಿರುವ ಮೈಸೂರು ವಿಶ್ವ ವಿದ್ಯಾನಿಲಯವು ಜೀವ ಸಂರಕ್ಷಣಾ ಕಾರ್ಯಗಳಿಗೆ ಬದಲಾಗಿ, ಜನಪ್ರಿಯ ಪ್ರವಾಸಿ ತನ್ನವನ್ನಾಗಿ ಕೆರೆಯನ್ನು ಪರಿವರ್ತಿಸಲು ಹೊರಟಿದೆ. ಇದರಿಂದ ಕೆರೆ ಮತ್ತಷ್ಟು ಹಾಳಾಗುವುದೇ ಹೊರತು ಖಂಡಿತ ಜೀವ ಸಂಕುಲಗಳ ಆವಾಸವಾಗಲಾರದು.
ಲಿಂಗಾಂಬುದಿ ಕೆರೆ
1828ರಲ್ಲಿ ಗ್ರಾಮೀಣ ಕೆರೆಯಾಗಿ ಇದನ್ನು ನೀರಾವರಿ ಹಾಗೂ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮುಮ್ಮಡಿ ಕೃಷ್ಣರಾಜ ಒಡೆಯರ್- ಲಿಂಗರಾಜಮ್ಮಣ್ಣಿ ದಂಪತಿಗಳು ಕಟ್ಟಿಸಿದರು. ನಂತರದ ದಿನಗಳಲ್ಲಿ ಮೀನುಗಾರಿಕೆಗೆ, ರಾಸು ತೊಳೆಯಲು, ಬಟ್ಟೆ ಒಗೆಯಲು, ಹೀಗೆ ಬೇರೆಯ ಉದ್ದೇಶಗಳಿಗೆ ಬಳಕೆಯಾಗಲು ಪ್ರಾರಂಭವಾಯಿತು.
ಅರಣ್ಯ ಇಲಾಖೆಗೆ ಸೇರಿದ ಕೆರೆಯ IBA ಕೋಡ್ IN-KA-22 ಆಗಿದೆ. ಅಳಿವಿನಂಚಿನಲ್ಲಿರುವ ಕೆರೆಯ ವಾಸಿಗಳಾದ ಪಕ್ಷಿ ಗೆಳೆಯರೆಂದರೆ ಹೆಜ್ಜಾರ್ಲೆ, ದೊಡ್ಡ ಮಚ್ಚೆಯುಳ್ಳ ಹದ್ದು, ಪೂರ್ವ ಸಾಮ್ರಾಜ್ಯದ ಹದ್ದು ಮತ್ತು ಇತರ ಕೆದಕಿ ಮೇಯುವ ಹಕ್ಕಿಗಳು.
MAN ಸಂಸ್ಥೆಯ ಸತತ ಪ್ರಯತ್ನದಿಂದಾಗಿ 2001ರಲ್ಲಿ ಲಿಂಗಾಂಬುದಿ ಪಕ್ಷಿ ತಾಣವೆಂದು, 2003ರಲ್ಲಿ  ಸಂರಕ್ಷಿತ ಪ್ರದೇಶವೆಂದು ಕೆರೆಯು ಘೋಷಿತವಾಯಿತು. ಇಟ್ಟಿಗೆ ಕಾರ್ಖಾನೆಗಳಂತಹ ಕಲುಷಿತಗೊಳಿಸಬಲ್ಲ 20ಕ್ಕೂ ಹೆಚ್ಚು ಉದ್ಯಮಗಳು ಮೊದಲು ಇಲ್ಲಿದ್ದವು. ಪ್ರಜ್ಞಾವಂತರ ಸಕಾಲಿಕ ಕ್ರಮಗಳಿಂದಾಗಿ ಇಂದು ಒಂದೂ ಇಲ್ಲ.
ಕಾರಂಜಿ ಕೆರೆ
ಮೈಸೂರು ಮೃಗಾಲಯದ ಸ್ವಾಮ್ಯದಲ್ಲಿರುವ ಕೆರೆ 55 ಹೆಕ್ಟೇರ್ ವೈಶಾಲ್ಯವನ್ನು ಹೊಂದಿದೆ. ಕುರುಬರಹಳ್ಳಿ, ಸಿದ್ಧಾರ್ಥನಗರಗಳಂತಹ ಸುತ್ತುಮುತ್ತಲಿನ ಬಡಾವಣೆಗಳಿಂದ ಚರಂಡಿ ನೀರು ಒಳಹರಿದು ಮಲಿನಗೊಂಡಿದ್ದರೂ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಸತತ ಪ್ರಯತ್ನದಿಂದ ಕೆರೆ ನವೀಕರಣವಾಗಿದ್ದಲ್ಲದೆ, ಅತ್ಯುತ್ತಮ ಪಕ್ಷಿಮನೆ ( ಏವಿಯರೀ), ಚಿಟ್ಟೆ ವನಗಳನ್ನು ಹೊಂದಿದೆ. ನೈಸರ್ಗಿಕವಾಗಿ ಇಲ್ಲಿಗೆ ಬರುವ ವಲಸೆ ಪಕ್ಷಿಗಳೆಂದರೆ ಹೆರೋನ್ ಮತ್ತು ಎಗ್ರೆಟ್ಗಳಂತಹವು.
ರಾಜೀವನಗರದ ಬಳಿಯ ದೇವನೂರು ಕೆರೆ ಸದ್ಯಕ್ಕೆ ಜೀವಂತವಿದ್ದರೂ, ಯೂಟ್ರಾಫಿಕೇಶನ್ ಭಯದ ನೆರಳಲ್ಲೇ ಇದೆ. N.R. ಮೊಹಲ್ಲ ಮುಂತಾದ ಸುತ್ತುಮುತ್ತಲಿನ ಪ್ರದೇಶಗಳಿಂದ ಹರಿದುಬರುತ್ತಿರುವ ಕೊಳಚೆ, ಚರಂಡಿ ನೀರು ಕೆರೆಯ ಆರೋಗ್ಯವನ್ನು ಹದಗೆಡಿಸುತ್ತಿವೆ.
ನಂಜನಗೂಡು ರಸ್ತೆಯಲ್ಲಿರುವ ದಳವಾಯಿ ಕೆರೆಯು ಇದೆ ಸ್ಥಿತಿಯಲ್ಲಿದೆ. ಅಲ್ಲಿಗೆ ಹರಿದು ಬರುತ್ತಿರುವ ಒಳಚರಂಡಿ ನೀರು ಅಧಿಕ ಪ್ರಮಾಣದಲ್ಲಿದೆ.
ಮೈಸೂರಿನ ಪ್ರಮುಖ ನೀರಿನ ವಲಯಗಳಾದ ಕೆರೆಗಳ ಸಂರಕ್ಷಣೆ ಮತ್ತು ನಿರ್ವಹಣಾ ಕಾರ್ಯಗಳು ಇಂದಿನ ತುರ್ತು. ವಿಶ್ವ ಜೌಗುಭೂಮಿದಿನ - 2015 ಘೋಷವಾಕ್ಯದಂತೆ  - " ನಮ್ಮ ಭವಿಷ್ಯಕ್ಕಾಗಿ ತೇವ ಭೂ ಪ್ರದೇಶಗಳುಎಂಬಂತೆ, ನಮ್ಮೂರಿನ ಕೆರೆಗಳನ್ನು ಉಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕಾಗಿದೆ.

 - ಗೀತಾ. ಏಚ್