Sunday 3 July 2016

ಸಾಹಿತಿಯ ಕಣ್ಣಲ್ಲಿ ಕಾಡುಬಳ್ಳಿ

-ಡಾ. ನಾ. ಡಿಸೋಜ,
ಕೃಪೆ ಪ್ರಜಾವಾಣಿ  07/03/2016
ಗಣಪೆ ಬಳ್ಳಿ : 
ಪರಿಸರ ಉಳಿಸಿಸಂಸ್ಥೆ ಏರ್ಪಡಿಸಿದ ಒಂದು ಸಮಾರಂಭ ಅದು. ಹೆಸರಿಗೆ ತಕ್ಕಂತೆ ಒತ್ತೊತ್ತಾಗಿ ಬೆಳೆದ ಕಾಡಿನ ನಡುವೆ ಒಂದು ವೇದಿಕೆ ಮಾಡಿ, ಅಲ್ಲಿ ಒಂದೆರಡು ಕುರ್ಚಿ ಇರಿಸಿ ಒಂದು ಮೈಕು ಕಟ್ಟಿ, ಕೆಲ ಚಲನಚಿತ್ರ ಗೀತೆಗಳನ್ನು ಕಿರುಚಿಸುವುದರ ಮೂಲಕ ಕಾರ್ಯಕ್ರಮಕ್ಕೆ ಅವರು ಚಾಲನೆ ನೀಡಿದ್ದರುಅವರು ವೇದಿಕೆ ಎಂದು ಮಾಡಿದ ಕಡೆ ಎರಡು ಮೂರು ಮರಗಳು ಇದ್ದವು. ಹಿಂದೆ ಮರಮುಂದೆ ಮರ. ಜನ ಕೂಡ ಮರಗಳ ನಡುವೆಯೇ ನಿಲ್ಲಬೇಕು, ಇಲ್ಲವೇ ಕುಳಿತು ಕೊಳ್ಳಬೇಕು ಅಂತಹಾ ಸ್ಥಿತಿದಟ್ಟವಾದ ಮರಗಳ ನಡುವೆ ಕುಳಿತ ನಾನು ಒಂದು ಸಂದರ್ಭದಲ್ಲಿ ಅಚಾನಕ್ಕಾಗಿ ತಲೆ ಎತ್ತಿ ನೋಡಿದಾಗ ಎಲ್ಲ ಮರಗಳ ತುದಿಗಳನ್ನ ಒಂದು ಬಳ್ಳಿ ಆವರಿಸಿಕೊಂಡು ತನ್ನ ತೆಕ್ಕೆಗೆ ತೆಗೆದುಕೊಂಡಿರುವುದನ್ನ ಗಮನಿಸಿದೆ. ಮರಗಳ ಮೇಲಿನ ತುದಿ, ಎಲೆ ರೆಂಬೆ ಕೊಂಬೆಗಳೆಲ್ಲವನ್ನ ಬಳ್ಳಿ ತನ್ನ ವಶಕ್ಕೆ ತೆಗೆದುಕೊಂಡಂತೆ ನನಗೆ ಕಂಡಿತು. ಬಳ್ಳಿ ಯುವಕನೋರ್ವನ ತೊಡೆಯ ತೋಳಿನಂತೆ ದಷ್ಟಪುಷ್ಟವಾಗಿದ್ದು ಮರಗಳನ್ನು ಹಿಡಿದ ರೀತಿ ಗಾಬರಿ ಹುಟ್ಟಿಸುವಂತಿತ್ತು.

ಮರಗಳ ರೆಂಬೆಕೊಂಬೆಗಳ ಮೂಲಕ ತನ್ನ ಮೈಯನ್ನು ಹೊರಳಿಸಿ ತನ್ನ ಬಿಗಿಯನ್ನ ಸಡಿಲಿಸದ ಹಾಗೆ ಅದು ಮರಗಳನ್ನ ಹಿಡಿದುಕೊಂಡಿತ್ತು. ಮರವನ್ನ ಹಿಡಿದುಕೊಳ್ಳಲು ಸಹಾಯಕವಾಗಲಿ ಅನ್ನುವ ಹಾಗೆ ಪಕ್ಕದಲ್ಲಿಯ ಇನ್ನೊಂದು ಮರವನ್ನ ಅಪ್ಪಿ ಹಿಡಿದು, ಇದರ ಮೇಲಿನ ಅಪ್ಪುಗೆ ಬಿಗಿಗೊಳಿಸಿತ್ತು. ಇಲ್ಲಿ ನುಗ್ಗಿ, ಅಲ್ಲಿ ಹೊರಳಿ ಇನ್ನೊಂದು ಕಡೆ ಮೈ ಚಾಚಿ, ತನ್ನ ತೋಳು ತೊಡೆಗಳ ಹಿಡಿತವನ್ನ ಬಿಗಿಗೊಳಿಸಿ ಬಳ್ಳಿ ಒಂದು ಹೆಬ್ಬಾವಿನ ಹಾಗೆ ಮರಗಳನ್ನ ತನ್ನ ವಶದಲ್ಲಿ ಇರಿಸಿಕೊಂಡಿತ್ತು. ಗಾಳಿಗೋ ಮತ್ತೊಂದಕ್ಕೋ ಮರಗಳು ಬೇರೆ ಆಗದಿರಲಿ ಅನ್ನುವಂತೆ ಬಳ್ಳಿ ಮರಗಳನ್ನ ಹಿಡಿದು ಕೊಂಡಿದೆಯೇನೋ ಎಂದು ನನಗೆ ಅನ್ನಿಸಿತು.

ಮರಗಳ ಮೇಲಿನ ಬಳ್ಳಿಯ ಮೇಲೆ ಕಣ್ಣನ್ನು ಕೇಂದ್ರೀಕರಿಸಿಕೊಂಡು ಅದನ್ನೇ ಬೆರಗಾಗಿ ನೋಡುತ್ತಿರುವುದನ್ನು ಗಮನಿಸಿದ ನನ್ನ ಬಳಿ ಕುಳಿತ ಓರ್ವರು– ‘ಅದು ಗಣಪೆಎಂದರು. ಅವರ ಮಾತು ನನಗೆ ಥಟ್ಟನೆ ಅರ್ಥವಾಗಲಿಲ್ಲ. ‘ಏನಂದ್ರಿ?’ ಎಂದು ಕೇಳಿದೆ. ‘ನೀವು ನೋಡ್ತಾ ಇದೀರಲ್ಲ... ಅದು ಒಂದು ಬಳ್ಳಿ... ಗಣಪೆ ಅಂತ ಅದರ ಹೆಸರು...’ ಎಂದು ಮತ್ತೆ ಅವರು ವಿವರ ನೀಡಿದರು. ಬಳ್ಳಿಯನ್ನ ನೋಡಿ ಅಚ್ಚರಿಯಾದ ನನಗೆ ಅದರ ಹೆಸರು ಕೇಳಿ ಮತ್ತೂ ಗಾಬರಿಯಾದಂತಾಗಿ, ‘ಗಣಪೆ ಅಂತಾನಾ?’ ಎಂದು ಮತ್ತೆ ಪ್ರಶ್ನಿಸಿದೆ. ‘ಹೌದು, ನಾವು ಇದನ್ನ ಗಣಪೆ ಬಳ್ಳಿ, ಗಣಪೆ ಬಳ್ಳಿ ಅಂತಾನೆ ಕರೆಯೋದು...’ ಎಂದು ಉತ್ಸಾಹದಲ್ಲಿ ಅವರು ಉತ್ತರ ನೀಡಿದರು.

ಹಳ್ಳಿಜನ ತಮ್ಮಲ್ಲಿಯ ವಿಶೇಷತೆಯ ಕುರಿತಂತೆ ಪಟ್ಟಣದವರಿಗೆ ಹೇಳಲು ಸದಾ ಉತ್ಸುಕರಾಗಿ ಇರುತ್ತಾರೆ. ಹೀಗೆ ಯಾರಾದರೂ ಸಿಕ್ಕರಂತೂ ಅವರ ಹುಮ್ಮಸ್ಸು ಅಧಿಕವಾಗುತ್ತದೆ. ಅದರಲ್ಲೂ ಪಟ್ಟಣದವರು, ವಿದ್ಯಾವಂತರು, ಅವರಲ್ಲಿಯ ಯಾವುದೋ ವಿಶೇಷತೆ ಕುರಿತಂತೆ ಆಸಕ್ತಿ ತೋರಿಸಿದರಂತೂ ಅವರ ಉತ್ಸಾಹ ಮೇರೆ ಮೀರುತ್ತದೆ. ಇದು ಸಹಜ ಕೂಡ. ಹೀಗೆಂದೇ ನಾನು ಅವರ ಉತ್ಸಾಹಕ್ಕೆ ಧಕ್ಕೆಯನ್ನುಂಟು ಮಾಡಬಾರದು ಅನ್ನುವ ಉದ್ದೇಶದಿಂದ, ‘ಬಳ್ಳಿ ಅಂತೀರಾ... ಮರ ಇದ್ದ ಹಾಗಿದೆಎಂದೆ. ಅವರು ರೋಮಾಂಚನಗೊಂಡರು.


ಇದು ಬೆಳೆಯೋದು ಮರವಾಗಿ, ಆದರೆ ಹಬ್ಬೋದು ಬಳ್ಳಿಯಾಗಿಎಂದರು. ಅವರು ಮಾತನ್ನ ಮುಂದುವರೆಸುತ್ತಿದ್ದರೇನೋ... ಕಾರ್ಯಕ್ರಮ ಪ್ರಾರಂಭವಾಗಿ ನನ್ನನ್ನ ವೇದಿಕೆಗೆ ಕರೆದಾಯಿತು. ನಾನು ಬರುವುದಾಗಿ ಅವರಿಗೆ ಹೇಳಿ ಎದ್ದೆ. ಎಂದಿನಂತೆ ಸ್ವಾಗತ ಇತ್ಯಾದಿ ನಡೆದು ಕಾರ್ಯಕ್ರಮ ಮುಗಿದಾಗ ಬಹಳ ಹೊತ್ತಾಗಿತ್ತು. ನಾನು ಅಲ್ಲಿಂದ ಹೊರಟಾಗ ನನ್ನ ಬಳಿ ಕುಳಿತು ಮಾತಿಗೆತೊಡಗಿದ ವ್ಯಕ್ತಿ ಎದುರಾದರು. ನಾನೇ, ‘ನಿಮ್ಮನ್ನ ಒಂದು ಸಾರಿ ಭೇಟಿ ಆಗಿ ಮಾತನಾಡಬೇಕುಎಂದೆ. ‘ಅದೇ ಗಣಪೆ ಬಳ್ಳಿ ಬಗ್ಗೆ ಅಲ್ವಾ?’ ಎಂದು ಕೇಳಿದರು. ‘ಹೌದುಎಂದೆ ನಾನು. ಅವರು ಉತ್ಸುಕತೆಯಿಂದ, ‘ಬನ್ನಿ, ನನಗೂ ಅದರ ಬಗ್ಗೆ ಮಾತನಾಡುವುದು ಇಷ್ಟಎಂದರು. ಆದರೆ ಇದಕ್ಕೆ ಅವಕಾಶ ದೊರೆತದ್ದು ಮಾತ್ರ ಕೆಲವು ತಿಂಗಳುಗಳ ನಂತರ. ಬೇರೆ ಯಾವುದೋ ಕೆಲಸಕ್ಕೆಂದು ಅದೇ ಹಳ್ಳಿಗೆ ಹೋದಾಗ ಆವತ್ತು ಸಿಕ್ಕ ಅವರ ಮನೆಗೇನೆ ಹೋಗಿ ಇಳಿದೆ. ಅವರು ಮನೆ ಬಾಗಿಲಲ್ಲಿ ನಿಂತವರು, ‘ ಬನ್ನಿಎಂದರು.
ಅವರ ಮನೆ ಜಗಲಿ ಏರಿ ಮರದ ಅಡ್ಡ ಬೆಂಚಿನ ಮೇಲೆ ಕುಳಿತು, ‘ನಾನೊಂದು ಸಾರಿ ಬಳ್ಳಿಯನ್ನ ನೋಡಬೇಕಿತ್ತುಅಂದೆ.
ಗಣಪೆ ಬಳ್ಳಿ ಅಲ್ಲ?’ ಂದು ಕೇಳಿದರು.
ಹೌದು’.
ಸರಿ ನೋಡುವ’.

ಅವರು ಕೆಲಸ ಮಾಡಲೆಂದೇ ಕಾದುಕುಳಿತ ಹಾಗೆ ಎದ್ದರು. ಸಟಸಟ ಒಳಹೋಗಿ ಒಂದು ಕೊಬ್ಬರಿ ಎಣ್ಣೆ ಬಾಟಲಿ ಹಿಡಿದು ಬಂದರು.‘ಗಣಪೆ ನೋಡಲಿಕ್ಕೆ ಅಂತ ಬಂದ ನಿಮಗೆ ಇಂಬಳದ ಕೈಲಿ ಕಡಿಸೋದಿಲ್ಲ ನಾನು. ಎಣ್ಣೇನ ಎರಡೂ ಕಾಲಿನ ಮೊಣಕಾಲ ಕೆಳಗಿನವರೆಗೆ ದಪ್ಪಗೆ ಸವರಿಕೊಳ್ಳಿ. ನಾವು ಹೋಗೋ ದಾರೀಲಿ ಸದಾ ತಂಪು. ಅಲ್ಲಿ ಇಂಬಳ ಹೆಚ್ಚು. ಎಣ್ಣೆ ಹಚ್ಚಿಕೊಂಡರೆ ಇಂಬಳ ಹತ್ತೋದಿಲ್ಲಎಂದರುನಾನು ತರಗತಿಯಲ್ಲಿ ಪಾಠ ಹೇಳುವ ಶಿಕ್ಷಕರ ಮಾತು ಕೇಳುವ ವಿದ್ಯಾರ್ಥಿಯಂತೆ ಕೈಗೆ ಎಣ್ಣೆ ಸವರಿಕೊಂಡು, ಪಂಚೆ ಎತ್ತಿ ಕಾಲಿಗೆಲ್ಲ ಬಳಿದುಕೊಂಡೆ. ಹಸಿಹಸಿ ಎಣ್ಣೆ ಕಾಲಿನಿಂದ ಇಳಿಯುವಾಗ ನನಗೆ ಒಂದು ಬಗೆ ಕಸಿವಿಸಿ ಆಯಿತು. ಅನುಭವ ನನಗೆ ಇರಲಿಲ್ಲ. ಜಿಡ್ಡುಜಿಡ್ಡಾದ ದ್ರವ ಕಾಲ ಮೇಲಿನಿಂದ ಇಳಿದಾಗ ಮತ್ತೂ ಗೊಂದಲದಲ್ಲಿ ಬಿದ್ದೆಅವರು ಅಂಗಳಕ್ಕೆ ಇಳಿದುಹೋಗುವಅಂದರು. ನಾನು ಅವರ ಹಿಂದೆ ಹೊರಟೆ.


ತುಸು ದೂರ ಕಾಲುದಾರಿಯಲ್ಲಿ ನಡೆದು ನಂತರ ಕಾಡು ಹೊಕ್ಕೆವು. ಅಲ್ಲಿ ಸಿದ್ಧ ದಾರಿ ಇರಲಿಲ್ಲ. ನಾವು ನಡೆದದ್ದೇ ದಾರಿ, ತುಳಿದದ್ದೇ ಹಾದಿ. ಹೆಜ್ಜೆ ಹೆಜ್ಜೆಗೆ ಮುಖಕ್ಕೆ ಬಡಿಯುವ ಗಿಡ ಪೊದೆ ಕೊಂಬೆರೆಂಬೆ. ದಾರಿಗೆ ಅಡ್ಡ ನಿಲ್ಲುವ ಮರ ಬಳ್ಳಿ. ಮರದ ಕೊಂಬೆ ಸರಿದಾಗ ಬೀಳುವ ಬೆಳಕು. ಒಣಗಿ ಬಿದ್ದ ಎಲೆಯ ಮೇಲೆ ಅದೇನೋ ಸರಿದ ಸದ್ದು. ಮೇಲೆ ಮರದ ರೆಂಬೆಯಲ್ಲಿ ಕುಳಿತುಕೂಹಾಕುವ ವಿವಿಧ ಪ್ರಾಣಿ ಪಕ್ಷಿಗಳು. ರೆಂಬೆಗೆ ರೆಂಬೆ ಮೈಯುಜ್ಜಿ ಹೊರಡಿಸುವ ವಿಚಿತ್ರ ಸದ್ದು. ಗಿಡ ಅಲುಗಾಡಿ ಮಾಡುವ ಧ್ವನಿ. ಗಾಳಿಗೆ ಬಾಗಿ ಹೆದರಿಸುವ ಮರ. ನಾವು ಮುಂದೆ ನಡೆದೆವು.

ನಿಮ್ಮ ಆಸಕ್ತಿ ಹೇಳಿ ಮಾರಾಯರೇಎಂದು ವ್ಯಕ್ತಿ ನನ್ನ ಜೊತೆಗೆ ಸಲುಗೆಯ ಮಾತಿಗೆ ಇಳಿದು ತಮಗೂ ಗಣಪೆಗೂ ಇರುವ ಸಂಬಂಧದ ಬಗ್ಗೆ ಹೇಳತೊಡಗಿದರು.
ನಾನೂ ಗಣಪೆ ಹುಚ್ಚು ಹತ್ತಿಸಿಕೊಂಡು ಕಾಡು ಅಲೆದಿದ್ದೇನೆ. ಅದರ ಗಾತ್ರ, ಅದು ಹಬ್ಬುವ ರೀತಿ, ಇಡೀ ಕಾಡನ್ನ ಆವರಿಸಿಕೊಳ್ಳುವ ವಿಧಾನ, ಕಾಡೇ ನನ್ನದು ಅನ್ನುವ ಹಾಗೆ ಅದು ವ್ಯಾಪಿಸಿಕೊಳ್ಳೋದು ನನಗೆ ಅಚ್ಚರಿ ತಂದಿದೆ. ಬಳ್ಳೀನ ನೋಡಿದಾಗ ಇದರಲ್ಲಿ ಏನೋ ವಿಶೇಷತೆ ಇದೆ ಅಂತ ನನಗೆ ಅನಿಸಿದೆ...’ ಎಂದರು ಅವರು.
ನನಗೂ ಹಾಗೆಯೇ ಅನಿಸುತ್ತೆ... ಈಗ ನಾನು ಬಂದಿರೋದು ಕೂಡ ಅದಕ್ಕೇನೆಎಂದೆ.

ಹೌದು, ಇಲ್ಲ ಅಂದರೆ ಒಂದು ಕಾಡುಬಳ್ಳೀನ ಹುಡುಕಿಕೊಂಡು ಪೇಟೆಯಿಂದ ಹಳ್ಳಿಗೆ ಯಾರು ಬರತಾರೆ ಹೇಳಿಎಂದು ಹೇಳಿ ಅವರು ನಕ್ಕರು
ನಾವು ನಾಲ್ಕು ಹೆಜ್ಜೆ ಬಂದಿರಲಿಕ್ಕಿಲ್ಲ, ಅವರು ತಟ್ಟನೆ ನನ್ನ ಕೈ ಹಿಡಿದುಕೊಂಡರು. ನಾನು ಗಾಬರಿಯಿಂದ ನಿಂತೆ. ಅವರು ನೆಲದತ್ತ ಬಗ್ಗಿ ಕೈ ತೋರಿಸಿದರು. ಒಂದು ಹಾವು ನಿಧಾನವಾಗಿ ತನ್ನ ದಾರಿ ಹಿಡಿದು ಸಾಗಿತ್ತು. ‘ಗಾಬರಿ ಬೇಡ. ಅದು ಮುಣ್ಣು ಮುಕ್ಕ... ಅದರ ದಾರೀಲಿ ನಾವು ಹೋಗತಿದೇವೆ. ಅದಕ್ಕೆ ದಾರಿ ಬಿಡಬೇಕಾದ್ದು ನಮ್ಮ ಕರ್ತವ್ಯ. ಏನಿದ್ರು ಕಾಡು ನಮ್ಮದಲ್ಲ, ನಾವು ಇಲ್ಲಿಗೆ ಹೊರಗಿನವರುಎಂದರು ನಕ್ಕುನಾವು ಮುಂದೆ ಸಾಗಿದೆವು. ಹತ್ತು ಮಾರು. ಕಾಡು ತಲೆಯ ಮೇಲೆ ಕಪ್ಪು ಮೋಡವಾಗಿ ಕವಿದಿತ್ತು. ಬಿಸಿಲ ಝಳ ಇರಲಿಲ್ಲ. ಅವರು ತಟ್ಟನೆ ನಿಂತರು. ‘ಈಗ ನೋಡಿಎಂದರು ತಲೆ ಎತ್ತಿ. ನೋಡಿದೆ. ಹತ್ತಾರು ಹೆಬ್ಬಾವುಗಳು ಒಂದನ್ನೊಂದು ಹೆಣೆದುಕೊಂಡ ಹಾಗೆ ಒಂದು ಗಣಪೆ ಐದಾರು ಮರಗಳನ್ನ ತನ್ನ ತೆಕ್ಕೆಗೆ ತೆಗೆದುಕೊಂಡು ತೂಗು ಬಿದ್ದಿತ್ತು. ತೋಳು ತೊಡೆ ಗಾತ್ರದ ಇದರ ಮೇಲೆ ಮೇಲಿನಿಂದ ತೂರಿ ಬಂದ ಬಿಸಿಲು ಬಿದ್ದು ಇದು ಹೊಳೆಯುತ್ತಲಿತ್ತುಅಲ್ಲಲ್ಲಿ ಅಗಲವಾದ ಎಲೆಗಳು ಕಚ್ಚಿಕೊಂಡಿದ್ದವು. ಬಳ್ಳಿ ಟಿಸಿಲು ಟಿಸಿಲಾಗಿ ಒಡೆದು ಕೊಂಡು ಪ್ರದೇಶದಲ್ಲೆಲ್ಲ ಹಬ್ಬಿಕೊಂಡಿತ್ತು. ಗಣಪೆಯ ಬೆಳವಣಿಗೆಯಿಂದಾಗಿ ಮರಗಳು ಬೆಂಡಾಗಿ ನಿಂತಿದ್ದವು. ಬಳ್ಳಿಯ ಅಪ್ಪುಗೆ ತಮಗೆ ಹಿತಕರವಾದದ್ದು ಅನ್ನುವಂತೆ ಮರಗಳು ಅದರ ತೆಕ್ಕೆಯಲ್ಲಿ ಮೈಮರೆತಿದ್ದವು.


  ಇದು ಅದ್ಭುತವಾದ ಗಣಪೆ... ನೀವು ಇದನ್ನ ನೋಡಿ ಇರಿಸಿಕೊಂಡಿರುವುದು ಹೇಳಿಎಂದು ನನ್ನ ಮೆಚ್ಚುಗೆಯನ್ನ ಅವರಿಗೆ ತಿಳಿಸಿದೆ. ‘ ಕಾಡಿನಲ್ಲಿ ಇರುವ ಎಲ್ಲ ಗಣಪೆಗಳ ಪರಿಚಯವೂ ನನಗಿದೆಎಂದರವರು. ಹಾಗೆಯೇ ಮಾತನ್ನ ಮುಂದುವರೆಸಿದರು. ‘ಯಾವ ಗಣಪೆ ಎಲ್ಲಿ ಹುಟ್ಟುತ್ತದೆ, ಎಲ್ಲಿ ಹಬ್ಬಿಕೊಂಡಿದೆ, ಎಲ್ಲಿ ಕೊನೆಯನ್ನ ಕಂಡಿದೆ ಅನ್ನುವುದನ್ನ ಅರಿತುಕೊಂಡಿದ್ದೇನೆಎಂದು ನಕ್ಕರು.

ಗಣಪೆ ಬಳ್ಳಿಯ ಇತಿಹಾಸ ಕುತೂಹಲಕರವಾಗಿದೆ ಹಾಗಾದರೆಎಂದೆ. ‘ನಿಮಗೆ ಆಸಕ್ತಿ ಇದೆ ಅಂತ ಹೇಳುತ್ತಿದ್ದೇನೆ. ಗಣಪೆಯ ಮೂಲ ಎಲ್ಲಿದೆ ಗೊತ್ತೆ?’ 
ಎಲ್ಲಿ?’

ಇದು ಬಲಕುಂದಿ ಗಣಪೆ. ಬಲಕುಂದಿ ದೇವಾಲಯದ ಹಿಂಬದಿಯ ಕಾಡಿನಲ್ಲಿ ಇದರ ಮೂಲ ಇದೆ. ಅದು ಇಲ್ಲಿಂದ ಸುಮಾರು ಎಂಟು ಮೈಲಿ ಇದೆ. ಅಲ್ಲಿ ಸಪೂರ ಆಕಾರದಲ್ಲಿ ಹುಟ್ಟಿಕೊಂಡ ಗಣಪೆ ಅಲ್ಲಿಂದ ಬಲಕುಂದಿ ದೇವರ ವನದ ಮೂಲಕ ಹಬ್ಬುತ್ತ ಹಬ್ಬುತ್ತ ಬಸ್ತಿ ಮನೆ, ದೇವಧರೆ ಗುಡ್ಡ, ಕೆಮ್ಮಣ್ಣು ಗುಂಡಿ, ಬಾಳೇ ಬೈಲು ಮೊದಲಾದೆಡೆಗಳಲ್ಲಿ ಮರಗಳ ಮೇಲೆ ಹಬ್ಬಿ, ಹತ್ತಿ ಇಳಿದು, ಮತ್ತೆ ಭೀಮನ ಮಡುವಿನ ಬಳಿ ಮರಗಳ ಮೇಲೆ ಹರಡಿಕೊಂಡು ಸುಮಾರು ಏಳು ಮೈಲಿ ದೂರದ ಕಾರ್ತಿಕದ ಮನೆಯ ಬಳಿ ಇಂತಹದ್ದೇ ದೊಡ್ಡ ರಾಶಿಯಾಗಿ ಹರಡಿ, ಆನಂದಪುರದ ಕಡೆ ತನ್ನ ಕುಡಿಯನ್ನ ಚಾಚಿದೆನಡುನಡುವೆ ಇದು ಅಲ್ಲಲ್ಲಿ ಕಾಡು ಕಿಚ್ಚಿಗೆ ಮೈ ಸುಟ್ಟುಕೊಂಡಿದೆ, ಇದರ ಟೊಂಗೆಗಳನ್ನ ಜನ ಕಡಿದಿದ್ದಾರೆ, ಇದರ ಒಂದು ಟಿಸಿಲನ್ನ ಬಿಡಿಸಿಕೊಂಡು ಹೋಗಿದ್ದಾರೆ. ಆದರೂ ಗಣಪೆ ಸತ್ತಿಲ್ಲ, ಸುರುಟಿಲ್ಲ, ಬಾಡಿಲ್ಲ, ಬತ್ತಿಲ್ಲ. ಅದೆಷ್ಟು ವರ್ಷಗಳಿಂದ ಗಣಪೆ ಇಲ್ಲಿದೆಯೋ ಕಂಡವರಿಲ್ಲ’. ಯಾವುದೇ ಉತ್ಪ್ರೇಕ್ಷೆ ಇಲ್ಲದೆ, ಸಹಜವಾಗಿ, ಆದರೆ ಅಭಿಮಾನ ಪ್ರೀತಿ ಗೌರವದಿಂದ ಅವರು ಹೇಳತೊಡಗಿದರು.
ಅವರು ಹೇಳುವುದನ್ನ ನಾನು ಕೇಳುತ್ತ ನಿಂತೆ. ನಡುನಡುವೆ ಮರದ ಮೇಲೆ ಹಬ್ಬಿದ ಗಣಪೆಯನ್ನ ನೋಡುತ್ತಲೇ ಇದ್ದೆ. ಅವರು ಒಂದು ಸಂದರ್ಭದಲ್ಲಿ ಮಾತು ನಿಲ್ಲಿಸಿದಾಗ ನಾನು ಕೇಳಿದೆ, ‘ಹೌದು, ಇದರಿಂದ ನಿಮಗೆ ಆದ ಪ್ರಯೋಜನವಾದರೂ ಏನು?’.

ಪ್ರಯೋಜನದ ಪ್ರಶ್ನೆ ಇಲ್ಲಿ ಬರೋದಿಲ್ಲ. ಉಪಯೋಗ ಏನು, ಉಪಕಾರ ಏನು ಅಂದರೆ ಏನು ಉತ್ತರ ಕೊಡೋದು. ನಮ್ಮನ್ನೆಲ್ಲ ಕಾಪಾಡೋ ಕಾಡಿನಲ್ಲಿ ಕೂತು ನಾವು ಇಂತಹಾ ಪ್ರಶ್ನೆ ಕೇಳಲೇಬಾರದು. ಮುಖ್ಯವಾಗಿ ನಾನು ಕಂಡುಕೊಂಡಿರೂ ಸತ್ಯ ದೊಡ್ಡದು. ಗಣಪೆ ಮಲೆಕಾಡಿನಲ್ಲಿ ಸುಮಾರು ಇಪ್ಪತ್ತು ಚದುರ ಮೈಲಿ ಹಬ್ಬಿಕೊಂಡಿದೆಯಲ್ಲ, ಅದರ ಹಿಂದೆ ಒಂದು ಉದ್ದೇಶ ಇದೆ ಅನಿಸುತ್ತದೆ ನನಗೆ’.

ನಾನು ಅಲ್ಲಿಯೇ ಬಿದ್ದ ಒಂದು ಮರದ ಬೊಡ್ಡೆಯ ಮೇಲೆ ಕುಳಿತುಕೊಳ್ಳುತ್ತ, ‘ಕಾಡುಬಳ್ಳಿ ಮನಸಾ ಇಚ್ಛೆ ಬೆಳೆಯುವುದರಲ್ಲೂ ಒಂದು ಉದ್ದೇಶವೇ? ಒಂದು ಗುರಿಯೇ?’ ಎಂದು ಕೇಳಿದೆ.
ಇರಬಹುದೇ ಅನ್ನುವ ಅನುಮಾನ ನನಗೆ... ಇದು ಕಾಡನ್ನ ಮಾತ್ರ ಹಬ್ಬಿಕೊಂಡಿಲ್ಲ. ಇಲ್ಲಿಯ ಕೆಲವು ಕುಟುಂಬಗಳನ್ನೂ ಒಂದಾಗಿ ಹಿಡಿದಿದೆ. ವಿಷಯ ಕುಟುಂಬಗಳಿಗೆ ಗೊತ್ತಿರಲಿಕ್ಕಿಲ್ಲ. ಆದರೆ ಇದು ಸತ್ಯ’.
ಇದು ಒಂದು ವಿಚಿತ್ರ ಅನಿಸುತ್ತದೆ ನನಗೆ’.

ನನಗೆ ಹಾಗೆ ಅನಿಸೋದಿಲ್ಲ. ಈಗ ಕೆಲವು ವರ್ಷಗಳಿಂದ ಗಣಪೇನ ಅಭ್ಯಾಸ ಮಾಡತಿರೋ ನಾನು ಕಂಡುಕೊಂಡ ಸತ್ಯ ಇದು. ಇದರ ಆಕಾರಗಾತ್ರ, ಇದು ಬೆಳೆಯುವ ರೀತಿ, ಎಲ್ಲವನ್ನ ನೋಡಿದಾಗ ನನಗೆ ಹೀಗೆ ಇರಬಹುದೆ ಅನಿಸುತ್ತಿತ್ತು. ಯಾವಾಗ ನಾನು ಇದರ ಶೋಧನೆಗೆ ತೊಡಗಿದೆನೋ ಆಗ ನನ್ನ ಊಹೆ ಸರಿ ಅನಿಸುತ್ತಿದೆ’.
ನಾನು ಮಾತನಾಡಲಿಲ್ಲ. ಆದರೆ ಅದೇನು ಊಹೆ ಎಂಬಂತೆ ಅವರ ಮುಖ ನೋಡಿದೆ. ಅವರು ನನ್ನ ಮನಸ್ಸಿನಲ್ಲಿ ಇರುವುದನ್ನ ಗ್ರಹಿಸಿದ ಹಾಗೆ ಮಾತಿಗೆ ತೊಡಗಿದರು.


ಬಲಕುಂದಿ ದೇವಾಲಯದ ಹಿಂಬದಿ ಕಾಡಿನಲ್ಲಿ ಗಣಪೆ ಮೂಲ ಇದೆ ಅಂತ ಹೇಳಿದೆನಲ್ಲ. ಅಲ್ಲೊಂದು ಹಳೆಯ ಮನೆಯಿದೆ. ಮನೆ ಹಳೆಯದಲ್ಲ, ಅಲ್ಲಿರುವ ಜನ ಪ್ರದೇಶಕ್ಕೆ ಹಳಬರು. ಅವರನ್ನ ಇಲ್ಲಿಯವರು ಕರೆಯೋದೇ ಹಳಬರು ಅಂತ. ಹಳಬರ ಕೇಶವಯ್ಯ, ಹಳಬರ ಶ್ಯಾಮ, ಹಳಬರ ರಾಮಣ್ಣ ಅಂತ ಅವರ ಹೆಸರು... ಇವರೆಲ್ಲ ನಮ್ಮ ನಿಮ್ಮ ಹಾಗೇ 40, 45, 59 ವರ್ಷದವರು ಆದರೂ ಹಳಬರು! ಇನ್ನು ದೇವಧರೆ ಗುಡ್ಡ, ಬಾಳೇ ಬೈಲು ಅಂತ ಹೇಳಿದೆನಲ್ಲಅದು ಅಲ್ಲಿಂದ ಸುಮಾರು ಮೂರು ಮೈಲಿ ದೂರ ಇರೋ ಪ್ರದೇಶ...

ಅಲ್ಲೂ ಇದೆ ಇದೇ ಗಣಪೆ. ಅಲ್ಲೊಂದು ಮನೆ ಇದೆ ಹಳೇಬೀಡವರ ಮನೆ ಅಂತ. ಬೀಡು ಅಂದರೆ ಮನೇನೆ... ಆದರೂ ಅಲ್ಲಿರೋದು ಹಳೇಬೀಡು ಶೇಷಗಿರಿರಾಯರ ಮನೆ. ಪಕ್ಕದಲ್ಲಿ ಹಳೇಬೀಡು ಸೋಮಶೇಖರ ರಾಯರ ಮನೆ. ಮುಂದೆ ಗಣಪೆ ಅಲ್ಲಿ ಮರಹತ್ತಿ ಮರದಾಟಿ, ಹಬ್ಬುತ್ತ ಹಬ್ಬುತ್ತ ಆನಂದಪುರದ ಕಡೆ ಹೊರಳುತ್ತಲ್ಲ ಅಲ್ಲಿ ಮೂರನೆಯದಾದ ಒಂದು ಮನೆಯಿದೆ. ಎಡಕುಂದೆ ಮನೆ ಅಂತ ಅದರ ಹೆಸರು. ಅಲ್ಲಿ ಎಡಕುಂದೆ ಮಂಜಪ್ಪ, ಎಡಕುಂದೆ ಸಣ್ಣಪ್ಪ, ಎಡಕುಂದೆ ಫಣಿಯಪ್ಪ ಅಂತ ಮೂರು ನಾಲ್ಕು ಕುಟುಂಬಗಳು ಇವೆ’.

ಅಲ್ಲ, ಹೀಗೆ ಎಲ್ಲ ಕಡೆ ಮಲೆಸೀಮೆನಲ್ಲಿ ಒಂದಲ್ಲಾ ಒಂದು ಕುಟುಂಬ ಇರೋದು ಸಹಜ ಮತ್ತು ಸಾಮಾನ್ಯ. ಅವನ್ನೆಲ್ಲ ನೀವು ಹೀಗೆ ಒಂದಕ್ಕೊಂದು ಗಂಟುಹಾಕುತ್ತ ಹೋದರೆ ಹೇಗೆ?’ ಎಂದು ನಾನು ತಕರಾರು ತೆಗೆದೆ. ನನ್ನ ತಕರಾರಿನಲ್ಲಿ ಸತ್ಯವಿದೆ ಅನ್ನುವುದು ನನಗೆ ಖಚಿತವಾಗಿತ್ತು. ಮಲೆನಾಡಿನಲ್ಲಿ ಸಾವಿರಾರು ವರ್ಷಗಳಿಂದ ಮನುಷ್ಯ ಬದುಕಿದ್ದಾನೆ. ಬದುಕಿನಲ್ಲಿ ಒಂದು ಹೊಂದಾಣಿಕೆ, ಕೊಟ್ಟು ಕೊಡುವಿಕೆ ಇತ್ಯಾದಿ ನಡೆದಿರಬಹುದು. ಇದನ್ನ ಯಾವುದೋ ಸಂಬಂಧಕ್ಕೆ ಗಂಟು ಹಾಕುವದು ಎಷ್ಟು ಸರಿ ಅನಿಸಿತು ನನಗೆ.
ನಾನೂ ಅದನ್ನೇ ಹೇಳುವುದುಅಂದರು ಅವರು.
ನಾನು ಗಮನಿಸಿದ ಒಂದು ವಿಷಯವನ್ನ ಹೇಳಿ ಬಿಡತೇನೆ. ಹಳಬರ ಕೇಶವಯ್ಯನ ಮನೆಯಿಂದ ಒಂದು ಹೆಣ್ಣನ್ನ ಹಳೇಬೀಡು ಶೇಷಗಿರಿ ರಾಯರ ಮನೆಗೆ ತಂದಿದಾರೆ. ಹಾಗೇನೆ ಎಡಕುಂದೆ ಮಂಜಪ್ಪನ ಮನೆಯಿಂದ ಹಳೇಬೀಡು ಸೋಮಶೇಖರ ರಾಯರ ಮನೆಗೆ ಒಂದು ಹೆಣ್ಣನ್ನ ಕೊಟ್ಟಿದಾರೆ, ಮತ್ತೆ ಇದೇ ಮನೆಯಿಂದ ಹಳೇಬೀಡು ರಂಗಪ್ಪನ ಮನೆಗೆ ಒಂದು ಹೆಣನ್ನ ಕೊಟ್ಟಿದಾರೆ.

ಕೊಟ್ಟು ತರೋ ಸಂಬಂಧ ಮನೆತನಗಳಲ್ಲಿ ಬಹಳ ತಲೆಮಾರಿನಿಂದ ನಡೆದುಕೊಂಡು ಬಂದಿರೋದು ನನ್ನ ಗಮನಕ್ಕೆ ಬಂದಿದೆ. ಜೊತೆಗೆ ಮನೆತನಗಳ ನಡುವೆ ಒಂದು ಒಳ್ಳೆಯ ಸಂಬಂಧ ಕೂಡ ಇದೆ. ಒಂದೇ ಜಾತಿಯ ಮರ ಮಲೆನಾಡಿನಲ್ಲಿ ಎಲ್ಲ ಕಡೆ ನೂರಾರು ಇವೆ. ಇದರಲ್ಲಿ ಅಚ್ಚರಿ ಇಲ್ಲ. ಆದರೆ ಗಣಪೆ ಬಳ್ಳಿ ಹಬ್ಬಿರೋ ಕಡೆ... ಬಳ್ಳಿ ಜೊತೇಲಿ ಸಂಬಂಧದ ಅಚ್ಚರಿ ಕೂಡ ಎಲ್ಲ ಕಡೆ ನಮ್ಮ ಕಣ್ಣಿಗೆ ಬೀಳುತ್ತೆ... ಕೌತುಕ ಏನಿರಬಹುದು ಯೋಚನೆ ಮಾಡಿಎಂದು ಮಾತು ಮುಗಿಸಿದರು ಅವರು.
ಅಲ್ಲ ನಿಮ್ಮ ಮಲೆನಾಡು ನಿಮಗೂ ಒಂದು ಕೌತುಕವಾಗಿದೆ ಅಂತೀರಾ?’ – ಎಂದು ಒಂದು ಘಾಸಿಗೊಳಿಸುವ ಪ್ರಶ್ನೆ ಕೇಳಿದೆ. ‘ಹೌದು ಇದು ಕೌತುಕವೇ... ಮಲೆನಾಡಿನಲ್ಲಿರೋ ಅಚ್ಚರಿಗಳಲ್ಲಿ ಒಂದು ಕಾಸಿನಷ್ಟನ್ನೂ ನಾವು ಅರ್ಥ ಮಾಡಿಕೊಂಡಿಲ್ಲ. ಇಲ್ಲಿ ಮರ, ಗಿಡ, ಪೊದೆ, ಕುರುಚಲು, ಹುಲ್ಲು, ಹಕ್ಕಿ ಪಕ್ಕಿ, ಜೀವಜಂತು, ಹಳ್ಳ, ನೀರುಹೀಗೆ ಯಾವುದೆಲ್ಲ ಇದೆ, ಅದರ ಮೂಲವೂ ನಮ್ಮ ಕೈಗೆ ಸಿಕ್ಕಿಲ್ಲ. ಕಾಡನ್ನ ಕಡಿದು ನಾಶ ಮಾಡೋದನ್ನ ನಾವು ಕಲಿತಿದ್ದೇವೆ. ಆದರೆ ಇದನ್ನ ಅರ್ಥ ಮಾಡಿಕೊಳ್ಳೋ ಯೋಗ್ಯತೆ ನಮಗೆ ಬಂದಿಲ್ಲ ಅನ್ನೋದಕ್ಕೆ ಗಣಪೆ ಒಂದು ಉದಾಹರಣೆಎಂದರು ಅವರು.

ಅದೇ ಗಣಪೆಯ ಕೆಳಗೆ ಇನ್ನೂ ತುಸು ಹೊತ್ತು ಕುಳಿತು ನಾವು ಅಲ್ಲಿಂದ ಹೊರಟೆವು. ಕೊನೆಯ ಬಾರಿ ಅನ್ನುವ ಹಾಗೆ ನಾನು ತಲೆ ಎತ್ತಿ ಗಣಪೆಯನ್ನ ನೋಡಿದಾಗ ಅದು ಎಂದಿನಂತೆ ಬಿಸಿಲಿಗೆ ಮೈಯೊಡ್ಡಿ ಮರಗಳ ಮೇಲೆ ಪವಡಿಸಿಕೊಂಡಿತ್ತು. ಅದರ ದಷ್ಟಪುಷ್ಟ ಬಾಹುಗಳು ಅಕ್ಕಪಕ್ಕದ ಮರಗಳನ್ನ ತಬ್ಬಿ ಹಿಡಿದಿದ್ದವು.
ನನ್ನ ಸ್ನೇಹಿತರು ಆಡಿದ, ತೋರಿಸಿದ ಎಲ್ಲವನ್ನ ತಲೆಯಲ್ಲಿ ತುಂಬಿಕೊಂಡು ನಾನು ನನ್ನ ಸ್ನೇಹಿತರನ್ನ ಬೀಳ್ಕೊಟ್ಟು ಪಟ್ಟಣದತ್ತ ಹೆಜ್ಜೆ ಇರಿಸಿದೆ.

No comments:

Post a Comment