ನಮ್ಮ ಬಾದಲ್ ಈಗ ಕೇವಲ ಕಲಾವಿದ ಅಲ್ಲ, ಕತೆಗಾರ ಕೂಡ ಅನ್ನೋದು ಸಾಬೀತಾಗಿದೆ.'ಮೊರಖ ಇಲಿಗಳನ್ನು ಕೊಂದ ಕಥೆಯು' ಈತನ ಲೇಖನಿಯಿಂದ ಹೊರಬಂದ ಫ್ರೆಶ್ ಆರ್ಟ್! ಚಿತ್ರ ಅಷ್ಟೇ ಅಲ್ಲ, ಕಥೆಯೂ ಕಣ್ಣಿಗೆ ಕಾಣಬಹುದು ಅನ್ನೋದಕ್ಕೆ ಈ ಕಥೆಯೇ ಸಾಕ್ಷಿ.ಕಥೆಯಲ್ಲಿ ಬರುವ ಮೊರಖ ನಮ್ಮ ಮದ್ಯೆಯೇ ಎಲ್ಲೋ ಇರುವ ಅನುಭವ. ಮೊರಖ ಎನ್ನುವ ಹೆಸರಲ್ಲೇ ವಿಶೇಷ ಕಾಣುತ್ತದೆ. ವಿಚಿತ್ರ ಎನ್ನಿಸಿದರೂ ಮೂರ್ಖ ಶಬ್ದದ ಅಪಭ್ರಶದಂತೆ ಕಂಡರೂ ಮರಾಕ್ಕೊ ದೇಶದ ಹೆಸರಿನ ಸಾಮ್ಯತೆಗೆ ಹೋಲಿಸಿ ಲೇಖಕ ನಮ್ಮನ್ನು ಆ ಹೆಸರಿಗೆ ಅರ್ಥ ಹುಡುಕುವಂತೆ ಪ್ರೇರೇಪಿಸುತ್ತಾರೆ.ಸಮುದಾಯ ಭವನದ ಮುಂದೆ ವಾಲಿಬಾಲ್ ಆಡುವ ಹುಡುಗರು ಸಮಾಜವನ್ನು ಪ್ರತಿನಿಧಿಸಿದರೂ ಅವರ ಆಟ, ಮಾತು ಇವುಗಳು ಅವರ ನಿರುದ್ಯೋಗವನ್ನೋ ಮತ್ತೇನನ್ನೋ ಸೂಚಿಸುತ್ತವೆ.ದಲಿತ ಸಮಾಜ ಎದುರಿಸುತ್ತಿರುವ ಹಲವು ಹತ್ತು ಸಮಸ್ಯೆಗಳನ್ನು ವ್ಯಂಗ್ಯಭರಿತ ಹಾಸ್ಯದಲ್ಲಿ ಲೇಖಕ ತರುವ ಬಗೆ ಅನನ್ಯ. ಮೊರಖನ ಜೊಲ್ಲುಸುರಿಯುವಿಕೆಯೂ ಈ ಸಮಾಜದ ರೋಗಗ್ರಸ್ತತೆಗೆ ಹಿಡಿದ ಕನ್ನಡಿಯಂತೆ ಕಾಣುತ್ತದೆ. ಮೊರಖನ ಅಮಾಯಕತೆ, ಅಸಹಾಯಕತೆ ಅವನು ಹೊಟ್ಟೆಯಲ್ಲಿ ಇವೆ ಎಂದು ನಂಬಲಾದ ಇಲಿಗಳ ಮಾತಿಂದ ಎದ್ದು ಕಾಣುತ್ತದೆ.ಇಲಿಗಳ ಸಂಭಾಷಣೆಯಲ್ಲಿ ಇಂದಿನ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ವಿದ್ಯಮಾನಗಳೂ ಕೇಳಿಸುತ್ತವೆ. ಇದು ಲೇಖಕನ ಪ್ರಸ್ತುತ ಆಲೋಚನೆ( ಕಂಟೆಂಪೋರರೀ ಥಿಂಕಿಂಗ್) ಬಿಂಬಿಸುತ್ತಿದೆ.ತಕ್ಕಡಿಯನ್ನು ಮುಟ್ಟಲೂ ಅವಕಾಶವಿಲ್ಲದಿರುವಿಕೆ ಇಂದಿಗೂ ಜೀವಂತವಿರುವ ಅಸ್ಪೃಶ್ಯತೆಯನ್ನು ಅಣಕಿಸುತ್ತವೆ. ದಲಿತ ಸಮುದಾಯಕ್ಕೆ ಇಂದಿಗೂ ದೊರೆಯದಿರುವ ಶೌಚಾಲಯದಂಥ ಕನಿಷ್ಟ ಸೌಲಭ್ಯ ಲೇಖಕನನ್ನು ಕಾಡಿವೆ ಎನ್ನುವುದಕ್ಕೆ ಆತ ತರುವ ಜಂತುಹುಳದ ಪ್ರಸಂಗವೇ ಸಾಕ್ಷಿ. ಹೆಣ್ಣುಮಕ್ಕಳ ತಂದೆಗಿರುವ ಸಾಮಾಜಿಕ ಜವಾಬ್ದಾರಿಯನ್ನು ಕೊನೆಯಲ್ಲಾದರೂ ಅರಿಯುವ ಮೊರಖ ಮಾಡಿದ್ದೇನು? ಅದು ಮೂರ್ಖತನವೇ? ಅಮಾಯಕತೆಯೇ? ಸಾವಿನಲ್ಲಾದರೂ ತಕ್ಕಡಿಯನ್ನು ಮುಟ್ಟಿದ ಪರಿಯೇ? ಇಲಿಗಳನ್ನು ಕೊಲ್ಲುವ ಉಪಾಯವೇ? ಇಲ್ಲ, ಎಲ್ಲಕ್ಕೂ ಮೀರಿ, ಇನ್ನು ಬದುಕಲಾರೆ ಎನ್ನಿಸಿತೇ? ಹಾಗಿದ್ದರೆ ಅದೇನು? ಆತ್ಮಹತ್ಯೆ??? ಲೇಖಕ ನಮ್ಮನ್ನು ಊಹಿಸಲು ಬಿಟ್ಟಿದ್ದಾನೆ.ಮೊರಖನ ಅಂತ್ಯ ಇಂದಿನ ವ್ಯವಸ್ಥೆಯ ವ್ಯಂಗ್ಯ! ಕಥೆ ಓದಿ ಮುಗಿಸಿದಾಗ ಒಂದುರೀತಿಯ ಅಸ್ವಸ್ಥತೆ ಕಾಡುತ್ತದೆ.
ಒಟ್ಟಿನಲ್ಲಿ ಹೇಳುವುದಾದರೆ ಒಬ್ಬ ಒಳ್ಳೆಯ ಕಥೆಗಾರನ ಉಗಮ ಕಾಣುತ್ತಿದೆ.
No comments:
Post a Comment