ಕೃಪೆ: ಪ್ರಜಾವಾಣಿ > ಅಂಕಣಗಳು › ವಿಜ್ಙಾನ ವಿಶೇಷ | ನಾಗೇಶ್ ಹೆಗಡೆ
Thu, 09/25/2014
ಮಂಗಳನ ಕಕ್ಷೆಗೆ ಇದೀಗ ಎರಡೆರಡು ಶೋಧನೌಕೆಗಳು ಒಟ್ಟೊಟ್ಟಿಗೆ ಪ್ರವೇಶ ಮಾಡಿವೆ. ತುಸು ಮುಂದೆ ಮುಂದೆ ಅಮೆರಿಕದ ‘ಮೇವೆನ್’; ಅದರ ಹಿಂದೆ ಹಿಂದೆ ಭಾರತದ ‘ಮಂಗಳಯಾನ’. ಈ ಎರಡರ ಯಶಸ್ಸಿನ ಹಿಂದೆಯೂ ಭಾರತೀಯ ಎಂಜಿನಿಯರ್ಗಳ ಪಾತ್ರವೇ ಮಹತ್ವದ್ದಿತ್ತೆಂದು ಹೇಳಬಹುದು.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದಲ್ಲೂ ಶೇಕಡ ೩೬ರಷ್ಟು ಭಾರತೀಯರೇ ಇದ್ದಾರೆಂದು 8 ವರ್ಷಗಳ ಹಿಂದೆಯೇ ನಮ್ಮ ಸಂಸತ್ತಿನಲ್ಲಿ ಘೋಷಿಸಲಾಗಿತ್ತು. ಈಗಂತೂ ಶೇಕಡವಾರು ಇನ್ನೂ ಹೆಚ್ಚಿಗೆ ಇರಲೇಬೇಕು. ಮೇಲಾಗಿ, ಬಾಹ್ಯಾಕಾಶ ನೌಕೆಗೆ ಎಂಜಿನ್‌ಗಳು, ರಾಕೆಟ್‌ಗಳು, ಟೆಲಿಕಾಂ ಸಲಕರಣೆಗಳು ಎಷ್ಟು ಮುಖ್ಯವೋ ಅವಕ್ಕೆಲ್ಲ ಚಾಲನೆ ಕೊಡಬಲ್ಲ ಸಾಫ್ಟ್‌ವೇರ್‌ಗಳೂ ಅಷ್ಟೇ ಮುಖ್ಯವಾಗಿರುತ್ತವೆ. ಆ ಕ್ಷೇತ್ರದಲ್ಲಂತೂ ಅಮೆರಿಕದಲ್ಲೂ ಭಾರತೀಯರೇ ಮುಂಚೂಣಿಯಲ್ಲಿದ್ದಾರೆ.
ಹಾಗಾಗಿ ಈ ಎರಡೂ ನೌಕೆಗಳನ್ನು ಮಂಗಳನ ಸುತ್ತ ಸುತ್ತಿಸು ವಲ್ಲಿ ಭಾರತೀಯ ಹಸ್ತಗಳೇ ಹೆಚ್ಚಿನ ಸಂಖ್ಯೆಯಲ್ಲಿವೆ ಎಂದು ಹೇಳುತ್ತ, ನಮ್ಮ ಹೆಮ್ಮೆಯನ್ನು ಪ್ರಧಾನಿ ಹೇಳಿದ ಹಾಗೆ ಕ್ರಿಕೆಟ್‌ಗೆ ಹೋಲಿಸಿ ಬರೀ ನೂರು ಪಟ್ಟಲ್ಲ, ಇನ್ನೂರು ಪಟ್ಟು ಹಿಗ್ಗಿಸಿಕೊಳ್ಳಲು ಅಡ್ಡಿಯಿಲ್ಲ.
ಎರಡೂ ನೌಕೆಗಳ ಉದ್ದೇಶಗಳು ಮಾತ್ರ ಭಿನ್ನವಾಗಿವೆ. ನಾಸಾದ ಮೇವೆನ್ (ಮಾರ್ಸ್ ಅಟ್ಮಾಸ್ಫಿಯರ್ ವೊಲೆಟೈಲ್ ಇವೊಲ್ಯೂಶನ್) ನೌಕೆ ಮಂಗಳನ ವಾಯುಮಂಡಲದ ಕೂಲಂಕಷ ಅಧ್ಯಯನವನ್ನು ಆರಂಭಿಸುತ್ತಿದೆ. ಅದೊಂದೇ ಅದರ ಉದ್ದೇಶ.
ಆ ಗ್ರಹದಲ್ಲಿ ಭೂಮಿಯ ಹಾಗೆ ದಟ್ಟ ವಾಯುಮಂಡಲವಿಲ್ಲ. ಓಝೋನ್ ವಲಯವೂ ಇಲ್ಲ. ಮಂಗಳನ ಸುಡುಗೆಂಪು ನೆಲಕ್ಕೆ ನಿರಂತರವಾಗಿ ಅತಿನೇರಳೆ ಮತ್ತು ಸೌರಕಿರಣಗಳ ದಾಳಿ ನಡೆಯುತ್ತಿರುತ್ತದೆ. ಆ ಕೆಂಪು ನೆಲದಲ್ಲಿ ಕೆಲವೆಡೆ ಘೋರ ಶೀತ, ಇನ್ನು ಕೆಲವೆಡೆ ಉರಿಸೆಕೆ ಇರುವುದರಿಂದ ಆಗಾಗ ಪ್ರಚಂಡ ಗಾಳಿ ಬೀಸುತ್ತ, ಕೆಂದೂಳನ್ನು ಆಕಾಶಕ್ಕೆ ತೂರುತ್ತಿರುತ್ತದೆ. ಅಲ್ಲಿನ ಆಕಾಶವೆಂದರೆ ದಟ್ಟ ಸೌರಕಣ ಮತ್ತು ತೆಳುವಾದ ದೂಳುಕಣಗಳ ಚಾದರ.
ಅದನ್ನು ವಿಶ್ಲೇಷಣೆ ಮಾಡಿದರೆ ಮಂಗಳದ ದುರಂತ ಚರಿತ್ರೆ ಗೊತ್ತಾದೀತು. ನಮ್ಮ ಭೂಮಿಯ ಹಾಗೆ ೪೫೦ ಕೋಟಿ ವರ್ಷಗಳ ಹಿಂದೆ ಅಲ್ಲೂ ವಾಯುಮಂಡಲ ಇತ್ತು. ಅಲ್ಲಿನ ಆಕಾಶದಲ್ಲಿ ಆಮ್ಲಜನಕ, ಸಾರಜನಕ ಅನಿಲಗಳೂ ದಟ್ಟಣಿಸಿದ್ದುವೇನೊ. ಆದರೆ ಹಠಾತ್ತಾಗಿ ಅಥವಾ ನಿಧಾನವಾಗಿ ಇಡೀ ವಾಯುಕವಚವೇ ಸಡಿಲಗೊಂಡು ಮಾಯವಾಗಿದ್ದು ಹೇಗೆ? ಜೀವಿಗಳ ವಿಕಾಸದ ನಂತರ ವಾಯುಕವಚ ಮಾಯವಾಯಿತೆ? ನಮ್ಮ ಭೂಮಿಯ ಮೇಲಾದರೆ ಇಲ್ಲಿ ವಿಕಾಸವಾದ ಜೀವಿಗಳೇ ಇಲ್ಲಿನ ವಾಯುಮಂಡಲವನ್ನು ಭದ್ರವಾಗಿ ಕಚ್ಚಿಹಿಡಿದಿದ್ದವು ಅಷ್ಟೇ ಅಲ್ಲ, ತಮಗೆ ಬೇಕೆಂದಂತೆ ಅದನ್ನು ಬದಲಾಯಿಸಿಕೊಂಡವು.
ಆದರೆ ಅಲ್ಲಿ ಮಂಗಳನ ಜೀವಿಗಳಿಗೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ ಏಕೆ? ಈ ಪ್ರಶ್ನೆಗೆ ಉತ್ತರ ಹುಡುಕುವುದು ಅಮೆರಿಕದ ನಾಸಾ ನೌಕೆಯ ಉದ್ದೇಶ. ಈಗ ಅಲ್ಲಿರುವ ತೆಳುವಾತಾವರಣದಲ್ಲಿ ಯಾವ ಯಾವ ಅನಿಲ ಎಷ್ಟು ಪ್ರಮಾಣದಲ್ಲಿ ಇದೆಯೆಂಬುದು ಗೊತ್ತಾದರೆ ಮುಂದೆ ೨೦೩೦ರ ವೇಳೆಗೆ ಮನುಷ್ಯರು ಅಲ್ಲಿ ಸೂಕ್ತ ಸಿದ್ಧತೆಯೊಂದಿಗೆ ಇಳಿಯಬಹುದು. ಇದು ಎರಡನೆಯ ಉದ್ದೇಶ.
ಭಾರತದ ನೌಕೆಗೂ ಎರಡು ಉದ್ದೇಶಗಳಿವೆ: ನಮ್ಮ ಪ್ರಜೆಗಳ ಎದೆ ಹೆಮ್ಮೆಯಿಂದ ಉಬ್ಬುವಂತೆ ಮಾಡುವ ಮೊದಲ ಉದ್ದೇಶ ನಿನ್ನೆ ಬೆಳಿಗ್ಗೆಯೇ ಈಡೇರಿದೆ. ಎರಡನೆಯ ಉದ್ದೇಶ ಏನೆಂದರೆ ಬಾಹ್ಯಾಕಾಶ ರಂಗದಲ್ಲಿ ನಾವು ದಿಟವಾಗಿ, ದಿಟ್ಟ ಹೆಜ್ಜೆ ಇಟ್ಟಿದ್ದೇವೆಂದು ಜಗತ್ತಿಗೆ ತೋರಿಸುವುದು. ಬೇರೆ ದೇಶಗಳ ಉಪಗ್ರಹಗಳನ್ನು ಕಡಿಮೆ ಶುಲ್ಕದಲ್ಲಿ ಮೇಲೇರಿಸುತ್ತೇವೆಂದು ಜಾಹೀರು ಮಾಡುವುದು. ಬಾಹ್ಯಾಕಾಶ ‘ಉದ್ಯಮ’ದ ನಾನಾ ಬಗೆಯ ತಾಂತ್ರಿಕ ಅಗತ್ಯಗಳಿಗೆ ನಮ್ಮ ಯುವ ಜನತೆಯನ್ನು ಆಕರ್ಷಿಸುವುದು.
ಐದು ವರ್ಷಗಳ ಹಿಂದೆ ರೂಪುಗೊಂಡ ಈ ಯೋಜನೆ ಈಗ ಫಲ ಕೊಟ್ಟಿದೆ. ಈಗಿನ ಸರಕಾರದ ‘ಮೇಕ್ ಇನ್ ಇಂಡಿಯಾ’ ಘೋಷಣೆಗೆ ಸೂಕ್ತ ನೂಕುಬಲವನ್ನು ಕೊಟ್ಟಿದೆ. ಮಂಗಳನೆಂಬ ಬರಡು ಜಗತ್ತನ್ನು ರೌಂಡ್ ಹೊಡೆಯುತ್ತಿರುವ ಅವೆರಡು ನೌಕೆಗಳನ್ನು ವಿಜ್ಞಾನಿಗಳ ಪಾಲಿಗೆ ಬಿಟ್ಟು ನಮ್ಮ ನೆಲದ ಹಕೀಕತ್ತು ಏನೆಂಬುದನ್ನು ನೋಡಬೇಕಲ್ಲ? ಮೊನ್ನೆ ಭಾನುವಾರ ಪೃಥ್ವಿಯ ಆಕ್ರಂದನ ಜಗತ್ತಿನಾದ್ಯಂತ ಕೇಳಿಬಂತು.
ಭೂಮಿಯ ತಾಪಮಾನ ನಿರಂತರ ಏರುತ್ತಿದ್ದು, ಈ ಏರಿಕೆಗೆ ಬ್ರೇಕ್ ಹಾಕೋಣವೆಂದು ಇಡೀ ಮನುಕುಲವೇ ಹಕ್ಕೊತ್ತಾಯ ಮಾಡಿದ ಹಾಗೆ, 150 ದೇಶಗಳ ಸುಮಾರು ೨,೫೦೦ ತಾಣಗಳಲ್ಲಿ ಜನರು ಮಡುಗಟ್ಟಿದರು. ನ್ಯೂಯಾರ್ಕಿನಲ್ಲಿ ಅಂದಾಜು ಮೂರುವರೆ ಲಕ್ಷ ಜನರ ಭಾರೀ ಫೇರಿಯನ್ನು ಹೊರಡಿಸಲಾಗಿತ್ತು. ಅದು, ಇದುವರೆಗಿನ ಅತಿ ದೊಡ್ಡ ಜನ ಸಮಾವೇಶ ಎಂದು ಮಾಧ್ಯಮಗಳು ವರ್ಣಿಸಿದವು. ಅಲ್ಲಿ ಅಂದು ಅಮೆರಿಕದ ಸಾಹಿತ್ಯ, ಕ್ರೀಡೆ, ರಾಜಕಾರಣ, ಮನರಂಜನೆ, ವಿಜ್ಞಾನ ಹೀಗೆ ಎಲ್ಲ ರಂಗಗಳ ನಾಯಕರೂ ರಸ್ತೆಗಿಳಿದಿದ್ದರು.
ನ್ಯೂಯಾರ್ಕ್ ಮೇಯರ್, ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್‌ಕಿ ಮೂನ್, ಅಮೆರಿಕದ ಮಾಜಿ ಉಪಾಧ್ಯಕ್ಷ ಅಲ್‌ಗೋರ್, ಸಿನಿಮಾ ನಟ ಡಿಕಾಪ್ರಿಯೊ, ವನ್ಯಜೀವತಜ್ಞೆ ಜೇನ್ ಗೂಡಾಲ್, ನಮ್ಮ ವಂದನಾ ಶಿವ ಎಲ್ಲರೂ ಅಲ್ಲಿದ್ದರು. ಅದೇ ಹೊತ್ತಿಗೆ ಕೆನಡಾ ಮತ್ತು ಅಮೆರಿಕದ ಗಡಿಗುಂಟ ಸಹಸ್ರಾರು ಜನರು ಕೈಗೆ ಕೈ ಹಿಡಿದು ಸಾಲಾಗಿ ನಿಂತರು. ಬಿಸಿಭೂಮಿ ಸಮಸ್ಯೆಗೆ ಗಡಿಮಿತಿ ಇಲ್ಲ ಎಂದು ತೋರಿಸಿಕೊಟ್ಟರು. ಬರ್ಲಿನ್, ಬೊಗೊಟಾ, ರಿಯೊ, ಕೊಲಂಬಿಯಾ, ಪ್ಯಾರಿಸ್, ಲಾಗೋಸ್, ಮೆಲ್ಬರ್ನ್, ಪಾಪುವಾ ನ್ಯೂಗಿನಿ ಮತ್ತು ಶಾಂತಸಾಗರದ ಅನೇಕ ದ್ವೀಪರಾಷ್ಟ್ರಗಳಲ್ಲಿ ‘ಪೀಪಲ್ಸ್ ಕ್ಲೈಮೇಟ್ ಮಾರ್ಚ್’ ಹೆಸರಿನಲ್ಲಿ ಜನರು ಭೂಮಿಯಾತ್ರೆ ನಡೆಸಿದರು.
ಈ ಜಾಗತಿಕ ಹಕ್ಕೊತ್ತಾಯ ಮೇಳವನ್ನು ಈಗಲೇ ನಡೆಸುವ ಉದ್ದೇಶ ಏನಿತ್ತೆಂದರೆ ಎರಡು ದಿನಗಳ ನಂತರ ಸೆಪ್ಟೆಂಬರ್ ೨೩ರಂದು ವಿಶ್ವಸಂಸ್ಥೆಯ ಆಶ್ರಯದಲ್ಲಿ ‘ಹವಾಗುಣ ಶೃಂಗಸಭೆ’ ಆಯೋಜಿತವಾಗಿತ್ತು. ಹಿಂದೆ ೨೦೦೯ರಲ್ಲಿ ಕೊಪೆನ್ಹೇಗನ್ನಲ್ಲಿ ಎಲ್ಲ ರಾಷ್ಟ್ರಗಳೂ ಸಭೆ ಸೇರಿ, ಭೂಜ್ವರಕ್ಕೆ ಔಷಧವನ್ನು ನಿರ್ಧರಿಸಲು ವಿಫಲವಾಗಿದ್ದವು. ಈ ಐದು ವರ್ಷಗಳಲ್ಲಿ ಜ್ವರ ಇನ್ನೂ ಜಾಸ್ತಿಯಾಗಿದೆ. ಹವಾಗುಣ ಏರುಪೇರು ತೀವ್ರವಾಗುತ್ತಿದೆ. ಬಿಸಿಲ ಬೇಗೆ, ಮಹಾಪೂರ, ಸುಂಟರಗಾಳಿ, ಮಹಾಬರಗಳಿಂದ ಜನರು ಹೈರಾಣಾಗುತ್ತಿದ್ದಾರೆ, ಜೀವಕೋಟಿ ತತ್ತರಿಸುತ್ತಿದೆ.
ಕಳೆದ ವರ್ಷವಂತೂ ಭೂಮಿಯ ಒಟ್ಟಾರೆ ಕಾರ್ಬನ್ ಉತ್ಪನ್ನ ಹಿಂದಿನ ಎಲ್ಲ ವರ್ಷಗಳಿಗಿಂತ ಹೆಚ್ಚಾಗಿದೆ. ‘ನಿಂನಿಮ್ಮಲ್ಲಿ ಕಚ್ಚಾಡಬೇಡಿ, ದಿಟ್ಟ ನಿಲುವು ತಗೊಳ್ಳಿ’ ಎಂದು ಎಲ್ಲ ರಾಷ್ಟ್ರಗಳ ಮುಖ್ಯಸ್ಥರನ್ನು ಒತ್ತಾಯಿಸಲೆಂದೇ ಅಷ್ಟೊಂದು ಮೇಳಗಳು ನಡೆದವು. ಸಾವಿರಾರು ವಿಜ್ಞಾನಿಗಳೂ ಫಲಕ ಹಿಡಿದು ರಸ್ತೆಗೆ ಇಳಿದಿದ್ದು ಈ ಬಾರಿಯ ವಿಶೇಷವಾಗಿತ್ತು. ‘ಭೂಮಿಯ ಉಷ್ಣತೆ ಏರುತ್ತಿರುವ ಕುರಿತು ಕಳೆದ ೪೫ ವರ್ಷಗಳಿಂದ ಸಂಶೋಧನಾ ವರದಿಗಳ ಮೂಲಕ ಎಚ್ಚರಿಸಿದ್ದೆಲ್ಲ ವಿಫಲವಾಗಿದೆ.
ನಾವೂ ಬೀದಿಗಿಳಿಯಲೇಬೇಕಾಗಿದೆ’ ಎನ್ನುತ್ತ ದಕ್ಷಿಣ ಕ್ಯಾಲಿಫೋರ್ನಿಯಾ ವಿ.ವಿ.ಯ ಭೂವಿಜ್ಞಾನಿ ಜೇಮ್ಸ್ ಪೊವೆಲ್ ತನ್ನಂಥ ಅನೇಕ ವಿಜ್ಞಾನಿಗಳನ್ನು ಸಂಘಟಿಸಿ ಜಾಥಾ ಪ್ರವೇಶ ಮಾಡಿದ್ದಾರೆ. ‘ಚುನಾಯಿತ ಧುರೀಣರು ಮತ್ತು ಧನಿಕ ವ್ಯಕ್ತಿಗಳು ವೈಜ್ಞಾನಿಕ ಪ್ರವೃತ್ತಿಯ ಮೇಲೆ ದಾಳಿ ನಡೆಸಿದ್ದಾರೆ. ನಮ್ಮನ್ನು ಉಗ್ರವಾದಿಗಳೆಂದು ಹಣೆಪಟ್ಟಿ ಕಟ್ಟಿ ಏನೆಲ್ಲ ನಿರ್ಬಂಧ ಹಾಕಲಾಗುತ್ತಿದೆ’ ಎಂದಿದ್ದಾರೆ.
ನ್ಯೂಯಾರ್ಕ್ ವಿಜ್ಞಾನ ಅಕಾಡೆಮಿ ಮತ್ತು ಅಮೆರಿಕನ್ ಭೂಭೌತವಿಜ್ಞಾನ ಸಂಘಗಳೆರಡೂ ತಮ್ಮೆಲ್ಲ ಸದಸ್ಯರನ್ನು ಜಾಥಾಕ್ಕೆ ಹೊರಡಿಸಿದ್ದವು. ‘ಸತ್ಯವನ್ನು ಅರಿಯುವ ಹಕ್ಕನ್ನು ಅನುಭವಿಸುವವರು ಕ್ರಿಯಾಶೀಲರಾಗಲೇಬೇಕಾದ ಕರ್ತವ್ಯವನ್ನೂ ನಿಭಾಯಿಸಬೇಕಾಗುತ್ತದೆ’ ಎಂದ ಐನ್ಸ್ಟೀನ್ ಮಾತನ್ನು ಪುನರುಚ್ಚರಿಸಿ ನೋತ್ರೆದಾಮ್ ವಿ.ವಿ.ಯ ವಿಜ್ಞಾನಿಗಳು, ಎಮ್‌ಐಟಿ, ಕಾಲ್ಟೆಕ್, ಹಾರ್ವರ್ಡ್ ಮತ್ತು ಇತರ ಪ್ರತಿಷ್ಠಿತ ಸಂಶೋಧನ ಸಂಸ್ಥೆಗಳ ತಜ್ಞರೂ ಮೇಳವಿಸಿದ್ದರು.
ವಿಪರ್ಯಾಸ ಏನೆಂದರೆ ಭಾರತ ಮತ್ತು ಚೀನಾ ದೇಶಗಳ ನಾಯಕರು ಸೆ. ೨೩ರ ಶೃಂಗಸಭೆಯಲ್ಲಿ ಭಾಗವಹಿಸಲಿಲ್ಲ. ಅಲ್ಲಿಗೆ ಹೋಗಿರೆಂದು ಭಾರತದ ಪ್ರಧಾನಿಯನ್ನು ಒತ್ತಾಯಿಸಲೆಂದೇ ದಿಲ್ಲಿಯಲ್ಲಿ ಕಳೆದ ಶನಿವಾರ ಎರಡು ಸಾವಿರ ಜನರ ಪ್ರತಿಭಟನಾ ಮೆರವಣಿಗೆ ನಡೆದಿತ್ತು. ಚೀನಾ, ಅಮೆರಿಕ, ಭಾರತ, ರಷ್ಯಾ ಮತ್ತು ಜಪಾನ್ ಈ ಐದು ದೇಶಗಳು ಕ್ರಮವಾಗಿ ಅತಿ ಹೆಚ್ಚು ಕಾರ್ಬನ್ ಉತ್ಪಾದಿಸುವ ಮೊದಲ ಐದು ಸ್ಥಾನಗಳಲ್ಲಿವೆ.
ನಮ್ಮ ಪ್ರಧಾನಿ ಇಲ್ಲಿ ಬೆಂಗಳೂರಿನಲ್ಲಿ ‘ಸ್ವಚ್ಛ ಭಾರತ ಅಭಿಯಾನ’ವನ್ನು ಘೋಷಿಸುವ ಸಂದರ್ಭಕ್ಕೆ ಸರಿಯಾಗಿ ಅಲ್ಲಿ ನ್ಯೂಯಾರ್ಕಿನಲ್ಲಿ ಹವಾಗುಣ ಶೃಂಗಸಭೆ ಆರಂಭವಾಗಿತ್ತು. ಇಡೀ ಭೂಗ್ರಹವನ್ನು ಸ್ವಚ್ಛ ಮಾಡುವ ಆ ಅಧಿವೇಶನದಲ್ಲಿ ಭಾರತದ ಪ್ರಧಾನ ಪ್ರತಿನಿಧಿಯೇ ಇರಲಿಲ್ಲ. ನರೇಂದ್ರ ಮೋದಿ ನಾಡಿದ್ದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಾಜರಿರುತ್ತಾರೆ. ಈಗೇಕೆ ಹೋಗಲಿಲ್ಲ? ಕಳೆದ ವಾರ ಚೀನೀ ಅಧ್ಯಕ್ಷರ ಜೊತೆಗೆ ಅಷ್ಟೆಲ್ಲ ಒಪ್ಪಂದಗಳಿಗೆ ಸಹಿ ಹಾಕುತ್ತಿದ್ದಾಗ, ಭೂಗ್ರಹವನ್ನು ತಂಪುಗೊಳಿಸಬಲ್ಲ ಬದಲೀ ತಂತ್ರಜ್ಞಾನ ಬಗ್ಗೆ ಅಥವಾ ಸುಸ್ಥಿರ ಅಭಿವೃದ್ಧಿಯ ಬಗ್ಗೆ ಏಕೆ ಚಕಾರ ಎತ್ತಲಿಲ್ಲ? -ಈ ಪ್ರಶ್ನೆಗಳು ನಮ್ಮ ಮಾಧ್ಯಮಗಳಲ್ಲಿ ಚರ್ಚೆಯಾಗಲೇ ಇಲ್ಲ.
ಹವಾಗುಣ ಶೃಂಗಸಭೆಗೆ ೧೧೮ ರಾಷ್ಟ್ರಗಳ ಮುಖ್ಯಸ್ಥರು ಹಾಜರಾಗಿರುವಾಗ ನಮ್ಮ ಪ್ರಧಾನಿಯೇಕೆ ಹೋಗಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಹೀಗಿರಬಹುದು: ಈಗಿನ ಸಭೆಯ ಉದ್ದೇಶ ಏನೆಂದರೆ ಮುಂಬರುವ ಇನ್ನೂ ಮಹತ್ವದ ಚರ್ಚೆಗಳಿಗೆ ಚಾಲನೆ ನೀಡುವುದು. ಡಿಸೆಂಬರ್ನಲ್ಲಿ ಪೆರು ದೇಶದ ರಾಜಧಾನಿ ಲಿಮಾದಲ್ಲಿ ರಾಷ್ಟ್ರನಾಯಕರ ಮತ್ತೊಂದು ಸಭೆ ನಡೆಯಲಿದೆ. ಭೂತಾಪ ನಿಯಂತ್ರಣದ ವಿವಿಧ ಒಡಂಬಡಿಕೆಗಳು ಅಲ್ಲಿ ರೂಪುಗೊಳ್ಳುತ್ತವೆ.
ಆ ಬಳಿಕ ಮುಂದಿನ ವರ್ಷ ಪ್ಯಾರಿಸ್‌ನಲ್ಲಿ ೨೦೧೫ರಲ್ಲಿ ಉತ್ತುಂಗ ಶೃಂಗಸಭೆ ನಡೆಯಲಿದ್ದು ಅಲ್ಲಿ ಎಲ್ಲ ರಾಷ್ಟ್ರಗಳೂ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ಈಗ ಪ್ರಧಾನಿ ಹೋಗಲೇಬೇಕೆಂಬ ತುರ್ತೇನಿಲ್ಲ; ಇಷ್ಟಕ್ಕೂ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅಲ್ಲಿ ಈಗ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಕಾರ್ಬನ್ ಹೊರೆಯನ್ನು ತಗ್ಗಿಸುವಲ್ಲಿ ತಮ್ಮ ಹೊಸ ಸರ್ಕಾರ ಏನೇನು ಕ್ರಮ ಕೈಗೊಳ್ಳುತ್ತಿದೆ ಎಂದು ವಿವರಣೆ ನೀಡುತ್ತಿದ್ದಾರೆ. ಕಲ್ಲಿದ್ದಲ ಗಣಿಗಾರಿಕೆಗೆ ಇಮ್ಮಡಿ ಮೇಲುತೆರಿಗೆ ಹಾಕಿ ೬೦೦ ಕೋಟಿ ಡಾಲರ್ ಹಣ ಸಂಗ್ರಹಿಸಿ ಅರಣ್ಯ ಬೆಳೆಸುತ್ತೇವೆಂದೂ ನೀರಾವರಿ ಕಾಲುವೆಗಳುದ್ದಕ್ಕೂ ಸೌರ ಫಲಕ ಹಾಕುತ್ತೇವೆಂದೂ ಹೇಳಿದ್ದಾರೆ.
ಆದರೂ ದೊಡ್ಡ ಉದ್ಯಮಗಳಿಗೆ ಮೂಗುದಾಣ ಹಾಕುವ ಬದಲು ಇನ್ನಷ್ಟು ಗೋಗ್ರಾಸ ನೀಡಬೇಕೆಂಬ ಹುಮ್ಮಸ್ಸೇ ಎಲ್ಲ ಕಡೆ ಕಾಣುತ್ತಿದೆ. ಪರಿಸರ ಖಾತೆಯ ಮಹತ್ವವನ್ನು ಕಡಿಮೆ ಮಾಡುತ್ತ, ದೊಡ್ಡ ಯೋಜನೆಗಳಿಗೆ ಅಸ್ತುಪತ್ರ ಪಡೆಯುವ ಮುನ್ನ ಪಾಲಿಸಬೇಕಿದ್ದ ಪರಿಸರ ನಿರ್ಬಂಧಗಳನ್ನು ಸಡಿಲಗೊಳಿಸುತ್ತ, ಅಭಿವೃದ್ಧಿಯ ರಥಕ್ಕೆ ಚೀನಾ ಅಮೆರಿಕಗಳ ಹೊಸ ಎಂಜಿನ್ ಜೋಡಿಸುವ ಈ ಉತ್ಸಾಹ ಹಸುರುವಾದಿಗಳನ್ನು ಕಂಗಾಲು ಮಾಡಿದೆ.
ಮಂಗಳಲೋಕದಲ್ಲಿ ಮೀಥೇನ್ ಇದೆಯೇ ಎಂದು ಶೋಧಿಸಹೊರಟ ನಾವು ನಮ್ಮದೇ ಭೂಖಂಡಲ್ಲಿ ಮೀಥೇನನ್ನು, ಕಾರ್ಬನ್ ಡೈಆಕ್ಸೈಡನ್ನು ಹೆಚ್ಚಿಸುವ ಧಾವಂತದಲ್ಲಿದ್ದೇವೆಂಬ ಆತಂಕ ಕಾಡತೊಡಗಿದೆ. ಮಂಗಳಯಾನದ ಯಶಸ್ಸಿನಿಂದಾಗಿ ಭಾರತದ ಖ್ಯಾತಿ ಅಂತರಿಕ್ಷಕ್ಕೇರಿದೆಯಾದರೂ ಪರಿಸರ -ಜೀವಜಾಲ ಸಂರಕ್ಷಣೆಯ ವಿಷಯದಲ್ಲಿ ಅದು ನೆಲಕಚ್ಚಿದೆ. ಅದನ್ನು ಮೇಲಕ್ಕೆತ್ತುವ ಹೊಣೆಯನ್ನು ಬರೀ ವಿಜ್ಞಾನಿಗಳ ಅಥವಾ ಕ್ರೀಡಾಳುಗಳ ಹೆಗಲ ಮೇಲಿಡಲಾದೀತೆ?
‘ನನ್ನಂಥ ಬಾಲಕರ ಕನಸು ಏನೆಂದರೆ ಇನ್ನು ೩೦ ವರ್ಷಗಳಲ್ಲಿ ಮಂಗಳಲೋಕದಲ್ಲಿ ಭಾರತೀಯರು ಮನೆ ಕಟ್ಟಬೇಕು’ ಎಂದು ನಿನ್ನೆ ಖುಷಿಯಲ್ಲಿ ಯಾವುದೋ ಸುದ್ದಿವಾಹಿನಿಗೆ ವಿದ್ಯಾರ್ಥಿಯೊಬ್ಬ ಹೇಳುತ್ತಿದ್ದ. ಆ ಬಾಲಕನ ಅಂಥ ಅಮಂಗಳ ಮಾತುಗಳನ್ನು ಕ್ಷಮಿಸೋಣ. ನಮ್ಮ ಈ ಸುಂದರ ಭೂಮಿಯನ್ನು ಬಿಸಿಗೋಲವನ್ನಾಗಿ ಮಾಡಿ, ಮಂಗಳನ ರುಗ್ಣಭೂಮಿಯಲ್ಲಿ ಮನೆ ಕಟ್ಟಬೇಕಾದ ದುರ್ಗತಿ ಮನುಕುಲಕ್ಕೆ ಎಂದೂ ಬಾರದಿರಲೆಂದು ಆಶಿಸೋಣ.