Thursday 25 September 2014

‘ಮೇಕ್- ಇನ್- ಇಂಡಿಯಾ’ದ ಆಜೂಬಾಜು : ನಾಗೇಶ್ ಹೆಗಡೆ


ಕೃಪೆ: ಪ್ರಜಾವಾಣಿ > ಅಂಕಣಗಳು › ವಿಜ್ಙಾನ ವಿಶೇಷ | ನಾಗೇಶ್ ಹೆಗಡೆ
Thu, 09/25/2014

ಮಂಗಳನ ಕಕ್ಷೆಗೆ ಇದೀಗ ಎರಡೆರಡು ಶೋಧನೌಕೆಗಳು ಒಟ್ಟೊಟ್ಟಿಗೆ ಪ್ರವೇಶ ಮಾಡಿವೆ. ತುಸು ಮುಂದೆ ಮುಂದೆ ಅಮೆರಿಕದ ‘ಮೇವೆನ್’; ಅದರ ಹಿಂದೆ ಹಿಂದೆ ಭಾರತದ ‘ಮಂಗಳಯಾನ’. ಈ ಎರಡರ ಯಶಸ್ಸಿನ ಹಿಂದೆಯೂ ಭಾರತೀಯ ಎಂಜಿನಿಯರ್‌­­ಗಳ ಪಾತ್ರವೇ ಮಹತ್ವದ್ದಿತ್ತೆಂದು ಹೇಳ­ಬ­ಹುದು.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ­ದಲ್ಲೂ ಶೇಕಡ ೩೬ರಷ್ಟು ಭಾರತೀಯರೇ ಇದ್ದಾ­ರೆಂದು 8 ವರ್ಷಗಳ ಹಿಂದೆಯೇ ನಮ್ಮ ಸಂಸ­ತ್ತಿನಲ್ಲಿ ಘೋಷಿಸಲಾಗಿತ್ತು. ಈಗಂತೂ ಶೇಕಡ­ವಾರು ಇನ್ನೂ ಹೆಚ್ಚಿಗೆ ಇರಲೇಬೇಕು.  ಮೇಲಾಗಿ, ಬಾಹ್ಯಾಕಾಶ ನೌಕೆಗೆ ಎಂಜಿನ್‌ಗಳು, ರಾಕೆಟ್‌ಗಳು, ಟೆಲಿಕಾಂ ಸಲಕರಣೆಗಳು ಎಷ್ಟು ಮುಖ್ಯವೋ ಅವಕ್ಕೆಲ್ಲ ಚಾಲನೆ ಕೊಡಬಲ್ಲ ಸಾಫ್ಟ್‌ವೇರ್‌ಗಳೂ ಅಷ್ಟೇ ಮುಖ್ಯವಾಗಿರುತ್ತವೆ. ಆ ಕ್ಷೇತ್ರದಲ್ಲಂತೂ ಅಮೆರಿಕದಲ್ಲೂ ಭಾರತೀ­ಯರೇ ಮುಂಚೂಣಿಯಲ್ಲಿದ್ದಾರೆ.
ಹಾಗಾಗಿ ಈ ಎರಡೂ ನೌಕೆಗಳನ್ನು ಮಂಗಳನ ಸುತ್ತ ಸುತ್ತಿಸು ವಲ್ಲಿ ಭಾರತೀಯ ಹಸ್ತಗಳೇ ಹೆಚ್ಚಿನ ಸಂಖ್ಯೆ­ಯಲ್ಲಿವೆ ಎಂದು ಹೇಳುತ್ತ, ನಮ್ಮ ಹೆಮ್ಮೆಯನ್ನು ಪ್ರಧಾನಿ ಹೇಳಿದ ಹಾಗೆ ಕ್ರಿಕೆಟ್‌ಗೆ ಹೋಲಿಸಿ ಬರೀ ನೂರು ಪಟ್ಟಲ್ಲ, ಇನ್ನೂರು ಪಟ್ಟು ಹಿಗ್ಗಿಸಿ­ಕೊಳ್ಳಲು ಅಡ್ಡಿ­ಯಿಲ್ಲ. 
ಎರಡೂ ನೌಕೆಗಳ ಉದ್ದೇಶಗಳು ಮಾತ್ರ ಭಿನ್ನವಾಗಿವೆ. ನಾಸಾದ ಮೇವೆನ್ (ಮಾರ್ಸ್ ಅಟ್ಮಾಸ್ಫಿಯರ್ ವೊಲೆಟೈಲ್ ಇವೊಲ್ಯೂಶನ್) ನೌಕೆ ಮಂಗಳನ ವಾಯುಮಂಡಲದ ಕೂಲಂಕಷ ಅಧ್ಯಯನವನ್ನು ಆರಂಭಿಸುತ್ತಿದೆ. ಅದೊಂದೇ ಅದರ ಉದ್ದೇಶ.

ಆ ಗ್ರಹದಲ್ಲಿ ಭೂಮಿಯ ಹಾಗೆ ದಟ್ಟ ವಾಯುಮಂಡಲವಿಲ್ಲ. ಓಝೋನ್ ವಲ­ಯವೂ ಇಲ್ಲ. ಮಂಗಳನ ಸುಡುಗೆಂಪು ನೆಲಕ್ಕೆ ನಿರಂತರವಾಗಿ ಅತಿನೇರಳೆ ಮತ್ತು ಸೌರಕಿರಣಗಳ ದಾಳಿ ನಡೆಯುತ್ತಿರುತ್ತದೆ. ಆ ಕೆಂಪು ನೆಲದಲ್ಲಿ ಕೆಲ­ವೆಡೆ ಘೋರ ಶೀತ, ಇನ್ನು ಕೆಲವೆಡೆ ಉರಿಸೆಕೆ ಇರುವುದರಿಂದ ಆಗಾಗ ಪ್ರಚಂಡ ಗಾಳಿ ಬೀಸುತ್ತ, ಕೆಂದೂಳನ್ನು ಆಕಾಶಕ್ಕೆ ತೂರುತ್ತಿರುತ್ತದೆ. ಅಲ್ಲಿನ ಆಕಾಶವೆಂದರೆ ದಟ್ಟ ಸೌರಕಣ ಮತ್ತು ತೆಳುವಾದ ದೂಳುಕಣಗಳ ಚಾದರ.
ಅದನ್ನು ವಿಶ್ಲೇಷಣೆ ಮಾಡಿ­ದರೆ ಮಂಗಳದ ದುರಂತ ಚರಿತ್ರೆ ಗೊತ್ತಾ­ದೀತು. ನಮ್ಮ ಭೂಮಿಯ ಹಾಗೆ ೪೫೦ ಕೋಟಿ ವರ್ಷಗಳ ಹಿಂದೆ ಅಲ್ಲೂ ವಾಯುಮಂಡಲ ಇತ್ತು. ಅಲ್ಲಿನ ಆಕಾಶದಲ್ಲಿ ಆಮ್ಲಜನಕ, ಸಾರ­ಜನಕ ಅನಿಲಗಳೂ ದಟ್ಟಣಿಸಿದ್ದುವೇನೊ. ಆದರೆ ಹಠಾತ್ತಾಗಿ ಅಥವಾ ನಿಧಾನವಾಗಿ ಇಡೀ ವಾಯು­ಕವಚವೇ ಸಡಿಲಗೊಂಡು ಮಾಯವಾ­ಗಿದ್ದು ಹೇಗೆ? ಜೀವಿಗಳ ವಿಕಾಸದ ನಂತರ ವಾಯು­­ಕವಚ ಮಾಯವಾಯಿತೆ? ನಮ್ಮ ಭೂಮಿಯ ಮೇಲಾದರೆ ಇಲ್ಲಿ ವಿಕಾಸವಾದ ಜೀವಿ­ಗಳೇ ಇಲ್ಲಿನ ವಾಯುಮಂಡಲವನ್ನು ಭದ್ರ­ವಾಗಿ ಕಚ್ಚಿಹಿಡಿದಿದ್ದವು ಅಷ್ಟೇ ಅಲ್ಲ, ತಮಗೆ ಬೇಕೆಂದಂತೆ ಅದನ್ನು ಬದಲಾಯಿಸಿಕೊಂಡವು.
ಆದರೆ ಅಲ್ಲಿ ಮಂಗಳನ ಜೀವಿಗಳಿಗೆ ಹಾಗೆ ಮಾಡಲು ಸಾಧ್ಯವಾಗಲಿಲ್ಲ ಏಕೆ? ಈ ಪ್ರಶ್ನೆಗೆ ಉತ್ತರ ಹುಡುಕುವುದು ಅಮೆರಿಕದ ನಾಸಾ ನೌಕೆಯ ಉದ್ದೇಶ. ಈಗ ಅಲ್ಲಿರುವ ತೆಳು­ವಾತಾ­ವರಣದಲ್ಲಿ ಯಾವ ಯಾವ ಅನಿಲ ಎಷ್ಟು ಪ್ರಮಾ­ಣದಲ್ಲಿ ಇದೆಯೆಂಬುದು ಗೊತ್ತಾದರೆ ಮುಂದೆ ೨೦೩೦ರ ವೇಳೆಗೆ ಮನುಷ್ಯರು ಅಲ್ಲಿ ಸೂಕ್ತ ಸಿದ್ಧತೆಯೊಂದಿಗೆ ಇಳಿಯಬಹುದು. ಇದು ಎರಡನೆಯ ಉದ್ದೇಶ.
ಭಾರತದ ನೌಕೆಗೂ ಎರಡು ಉದ್ದೇಶಗಳಿವೆ: ನಮ್ಮ ಪ್ರಜೆಗಳ ಎದೆ ಹೆಮ್ಮೆಯಿಂದ ಉಬ್ಬುವಂತೆ ಮಾಡುವ ಮೊದಲ ಉದ್ದೇಶ ನಿನ್ನೆ ಬೆಳಿಗ್ಗೆಯೇ ಈಡೇರಿದೆ. ಎರಡನೆಯ ಉದ್ದೇಶ ಏನೆಂದರೆ ಬಾಹ್ಯಾಕಾಶ ರಂಗದಲ್ಲಿ ನಾವು ದಿಟವಾಗಿ, ದಿಟ್ಟ ಹೆಜ್ಜೆ ಇಟ್ಟಿದ್ದೇವೆಂದು ಜಗತ್ತಿಗೆ ತೋರಿಸುವುದು. ಬೇರೆ ದೇಶಗಳ ಉಪಗ್ರಹಗಳನ್ನು ಕಡಿಮೆ ಶುಲ್ಕ­ದಲ್ಲಿ ಮೇಲೇರಿಸುತ್ತೇವೆಂದು ಜಾಹೀರು ಮಾಡು­ವುದು. ಬಾಹ್ಯಾಕಾಶ ‘ಉದ್ಯಮ’ದ ನಾನಾ ಬಗೆಯ ತಾಂತ್ರಿಕ ಅಗತ್ಯಗಳಿಗೆ ನಮ್ಮ ಯುವ ಜನತೆಯನ್ನು ಆಕರ್ಷಿಸುವುದು.
ಐದು ವರ್ಷಗಳ ಹಿಂದೆ ರೂಪುಗೊಂಡ ಈ ಯೋಜನೆ ಈಗ ಫಲ ಕೊಟ್ಟಿದೆ. ಈಗಿನ ಸರಕಾರದ ‘ಮೇಕ್ ಇನ್ ಇಂಡಿಯಾ’  ಘೋಷಣೆಗೆ ಸೂಕ್ತ ನೂಕುಬಲ­ವನ್ನು ಕೊಟ್ಟಿದೆ. ಮಂಗಳನೆಂಬ ಬರಡು ಜಗತ್ತನ್ನು ರೌಂಡ್ ಹೊಡೆಯುತ್ತಿರುವ ಅವೆರಡು ನೌಕೆಗಳನ್ನು ವಿಜ್ಞಾನಿ­ಗಳ ಪಾಲಿಗೆ ಬಿಟ್ಟು ನಮ್ಮ ನೆಲದ ಹಕೀಕತ್ತು ಏನೆಂಬುದನ್ನು ನೋಡಬೇಕಲ್ಲ? ಮೊನ್ನೆ ಭಾನುವಾರ ಪೃಥ್ವಿಯ ಆಕ್ರಂದನ ಜಗತ್ತಿನಾದ್ಯಂತ ಕೇಳಿಬಂತು.
ಭೂಮಿಯ ತಾಪಮಾನ ನಿರಂತರ ಏರುತ್ತಿದ್ದು, ಈ ಏರಿಕೆಗೆ ಬ್ರೇಕ್ ಹಾಕೋಣ­ವೆಂದು ಇಡೀ ಮನುಕುಲವೇ ಹಕ್ಕೊತ್ತಾಯ ಮಾಡಿದ ಹಾಗೆ, 150 ದೇಶಗಳ ಸುಮಾರು ೨,೫೦೦ ತಾಣಗಳಲ್ಲಿ ಜನರು ಮಡುಗಟ್ಟಿದರು. ನ್ಯೂಯಾರ್ಕಿನಲ್ಲಿ ಅಂದಾಜು ಮೂರುವರೆ ಲಕ್ಷ ಜನರ ಭಾರೀ ಫೇರಿಯನ್ನು ಹೊರಡಿಸಲಾಗಿತ್ತು. ಅದು, ಇದುವರೆಗಿನ ಅತಿ ದೊಡ್ಡ ಜನ ಸಮಾ­ವೇಶ ಎಂದು ಮಾಧ್ಯಮಗಳು ವರ್ಣಿಸಿದವು. ಅಲ್ಲಿ ಅಂದು ಅಮೆರಿಕದ ಸಾಹಿತ್ಯ, ಕ್ರೀಡೆ, ರಾಜ­ಕಾರಣ, ಮನರಂಜನೆ, ವಿಜ್ಞಾನ ಹೀಗೆ ಎಲ್ಲ ರಂಗ­ಗಳ ನಾಯಕರೂ ರಸ್ತೆಗಿಳಿದಿದ್ದರು.
ನ್ಯೂಯಾರ್ಕ್ ಮೇಯರ್, ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಬಾನ್‌ಕಿ ಮೂನ್, ಅಮೆರಿಕದ ಮಾಜಿ ಉಪಾ­ಧ್ಯಕ್ಷ ಅಲ್‌ಗೋರ್, ಸಿನಿಮಾ ನಟ ಡಿಕಾಪ್ರಿಯೊ, ವನ್ಯ­ಜೀವತಜ್ಞೆ ಜೇನ್ ಗೂಡಾಲ್, ನಮ್ಮ ವಂದನಾ ಶಿವ ಎಲ್ಲರೂ ಅಲ್ಲಿದ್ದರು. ಅದೇ ಹೊತ್ತಿಗೆ ಕೆನಡಾ ಮತ್ತು ಅಮೆರಿಕದ ಗಡಿಗುಂಟ ಸಹಸ್ರಾರು ಜನರು ಕೈಗೆ ಕೈ ಹಿಡಿದು ಸಾಲಾಗಿ ನಿಂತರು. ಬಿಸಿಭೂಮಿ ಸಮಸ್ಯೆಗೆ ಗಡಿಮಿತಿ ಇಲ್ಲ ಎಂದು ತೋರಿಸಿ­ಕೊಟ್ಟರು. ಬರ್ಲಿನ್, ಬೊಗೊಟಾ, ರಿಯೊ, ಕೊಲಂಬಿಯಾ, ಪ್ಯಾರಿಸ್, ಲಾಗೋಸ್, ಮೆಲ್ಬರ್ನ್, ಪಾಪುವಾ ನ್ಯೂಗಿನಿ ಮತ್ತು ಶಾಂತ­ಸಾಗರದ ಅನೇಕ ದ್ವೀಪ­ರಾಷ್ಟ್ರ­ಗಳಲ್ಲಿ ‘ಪೀಪಲ್ಸ್ ಕ್ಲೈಮೇಟ್ ಮಾರ್ಚ್’ ಹೆಸರಿನಲ್ಲಿ ಜನರು ಭೂಮಿಯಾತ್ರೆ ನಡೆಸಿದರು. 
ಈ ಜಾಗತಿಕ ಹಕ್ಕೊತ್ತಾಯ ಮೇಳವನ್ನು ಈಗಲೇ ನಡೆಸುವ ಉದ್ದೇಶ ಏನಿತ್ತೆಂದರೆ ಎರಡು ದಿನಗಳ ನಂತರ ಸೆಪ್ಟೆಂಬರ್ ೨೩ರಂದು ವಿಶ್ವ­ಸಂಸ್ಥೆಯ ಆಶ್ರಯದಲ್ಲಿ ‘ಹವಾಗುಣ ಶೃಂಗಸಭೆ’ ಆಯೋಜಿತವಾಗಿತ್ತು. ಹಿಂದೆ ೨೦೦೯ರಲ್ಲಿ ಕೊಪೆ­ನ್‌­ಹೇಗನ್‌ನಲ್ಲಿ ಎಲ್ಲ ರಾಷ್ಟ್ರಗಳೂ ಸಭೆ ಸೇರಿ, ಭೂಜ್ವರಕ್ಕೆ ಔಷಧವನ್ನು ನಿರ್ಧರಿಸಲು ವಿಫಲ­ವಾಗಿ­ದ್ದವು. ಈ ಐದು ವರ್ಷಗಳಲ್ಲಿ ಜ್ವರ ಇನ್ನೂ ಜಾಸ್ತಿಯಾಗಿದೆ. ಹವಾಗುಣ ಏರುಪೇರು ತೀವ್ರ­ವಾ­­ಗುತ್ತಿದೆ. ಬಿಸಿಲ ಬೇಗೆ, ಮಹಾಪೂರ, ಸುಂಟರ­ಗಾಳಿ, ಮಹಾಬರಗಳಿಂದ ಜನರು ಹೈರಾಣಾಗು­ತ್ತಿದ್ದಾರೆ, ಜೀವಕೋಟಿ ತತ್ತರಿಸು­ತ್ತಿದೆ.
ಕಳೆದ ವರ್ಷವಂತೂ ಭೂಮಿಯ ಒಟ್ಟಾರೆ ಕಾರ್ಬನ್ ಉತ್ಪನ್ನ ಹಿಂದಿನ ಎಲ್ಲ ವರ್ಷಗಳಿಗಿಂತ ಹೆಚ್ಚಾಗಿದೆ. ‘ನಿಂ­ನಿಮ್ಮಲ್ಲಿ ಕಚ್ಚಾಡಬೇಡಿ, ದಿಟ್ಟ ನಿಲುವು ತಗೊಳ್ಳಿ’ ಎಂದು ಎಲ್ಲ ರಾಷ್ಟ್ರಗಳ ಮುಖ್ಯಸ್ಥರನ್ನು ಒತ್ತಾಯಿಸಲೆಂದೇ ಅಷ್ಟೊಂದು ಮೇಳಗಳು ನಡೆದವು.   ಸಾವಿರಾರು ವಿಜ್ಞಾನಿಗಳೂ ಫಲಕ ಹಿಡಿದು ರಸ್ತೆಗೆ ಇಳಿದಿದ್ದು ಈ ಬಾರಿಯ ವಿಶೇಷವಾಗಿತ್ತು. ‘ಭೂಮಿಯ ಉಷ್ಣತೆ ಏರುತ್ತಿರುವ ಕುರಿತು ಕಳೆದ ೪೫ ವರ್ಷಗಳಿಂದ ಸಂಶೋಧನಾ ವರದಿಗಳ ಮೂಲಕ ಎಚ್ಚರಿಸಿದ್ದೆಲ್ಲ ವಿಫಲವಾಗಿದೆ.
ನಾವೂ ಬೀದಿಗಿಳಿಯಲೇಬೇಕಾಗಿದೆ’ ಎನ್ನುತ್ತ ದಕ್ಷಿಣ ಕ್ಯಾಲಿ­­ಫೋರ್ನಿಯಾ ವಿ.ವಿ.ಯ ಭೂವಿಜ್ಞಾನಿ ಜೇಮ್ಸ್ ಪೊವೆಲ್ ತನ್ನಂಥ ಅನೇಕ ವಿಜ್ಞಾನಿ­ಗಳನ್ನು ಸಂಘ­ಟಿಸಿ ಜಾಥಾ ಪ್ರವೇಶ ಮಾಡಿದ್ದಾರೆ. ‘ಚುನಾಯಿತ ಧುರೀಣರು ಮತ್ತು ಧನಿಕ ವ್ಯಕ್ತಿಗಳು ವೈಜ್ಞಾನಿಕ ಪ್ರವೃತ್ತಿಯ ಮೇಲೆ ದಾಳಿ ನಡೆಸಿ­ದ್ದಾರೆ. ನಮ್ಮನ್ನು ಉಗ್ರವಾದಿಗಳೆಂದು ಹಣೆಪಟ್ಟಿ ಕಟ್ಟಿ ಏನೆಲ್ಲ ನಿರ್ಬಂಧ ಹಾಕಲಾಗುತ್ತಿದೆ’ ಎಂದಿ­ದ್ದಾರೆ.
ನ್ಯೂಯಾರ್ಕ್ ವಿಜ್ಞಾನ ಅಕಾಡೆಮಿ ಮತ್ತು ಅಮೆರಿಕನ್ ಭೂಭೌತವಿಜ್ಞಾನ ಸಂಘಗ­ಳೆ­ರಡೂ ತಮ್ಮೆಲ್ಲ ಸದಸ್ಯರನ್ನು ಜಾಥಾಕ್ಕೆ ಹೊರಡಿಸಿ­ದ್ದವು. ‘ಸತ್ಯವನ್ನು ಅರಿಯುವ ಹಕ್ಕನ್ನು ಅನುಭವಿ­ಸುವ­ವರು ಕ್ರಿಯಾಶೀಲರಾಗಲೇ­ಬೇಕಾದ ಕರ್ತವ್ಯ­ವನ್ನೂ ನಿಭಾಯಿಸಬೇಕಾಗುತ್ತದೆ’ ಎಂದ ಐನ್‌­ಸ್ಟೀನ್ ಮಾತನ್ನು ಪುನರುಚ್ಚರಿಸಿ ನೋತ್ರೆದಾಮ್ ವಿ.ವಿ.ಯ ವಿಜ್ಞಾನಿಗಳು, ಎಮ್‌ಐಟಿ, ಕಾಲ್ಟೆಕ್, ಹಾರ್ವರ್ಡ್ ಮತ್ತು ಇತರ ಪ್ರತಿಷ್ಠಿತ ಸಂಶೋಧನ ಸಂಸ್ಥೆಗಳ ತಜ್ಞರೂ ಮೇಳವಿಸಿದ್ದರು.
ವಿಪರ್ಯಾಸ ಏನೆಂದರೆ ಭಾರತ ಮತ್ತು ಚೀನಾ ದೇಶಗಳ ನಾಯಕರು ಸೆ. ೨೩ರ ಶೃಂಗ­ಸಭೆ­ಯಲ್ಲಿ ಭಾಗವಹಿಸಲಿಲ್ಲ. ಅಲ್ಲಿಗೆ  ಹೋಗಿ­­­ರೆಂದು ಭಾರತದ ಪ್ರಧಾನಿಯನ್ನು ಒತ್ತಾ­ಯಿ­ಸಲೆಂದೇ ದಿಲ್ಲಿಯಲ್ಲಿ ಕಳೆದ ಶನಿವಾರ ಎರಡು ಸಾವಿರ ಜನರ ಪ್ರತಿಭಟನಾ ಮೆರವಣಿಗೆ ನಡೆ­ದಿತ್ತು. ಚೀನಾ, ಅಮೆರಿಕ, ಭಾರತ, ರಷ್ಯಾ ಮತ್ತು ಜಪಾನ್ ಈ ಐದು ದೇಶಗಳು ಕ್ರಮವಾಗಿ ಅತಿ ಹೆಚ್ಚು ಕಾರ್ಬನ್ ಉತ್ಪಾದಿಸುವ ಮೊದಲ ಐದು ಸ್ಥಾನಗ­ಳಲ್ಲಿವೆ.
ನಮ್ಮ ಪ್ರಧಾನಿ ಇಲ್ಲಿ ಬೆಂಗಳೂರಿ­ನಲ್ಲಿ ‘ಸ್ವಚ್ಛ ಭಾರತ ಅಭಿಯಾನ’ವನ್ನು ಘೋಷಿ­ಸುವ ಸಂದರ್ಭಕ್ಕೆ ಸರಿಯಾಗಿ ಅಲ್ಲಿ ನ್ಯೂಯಾರ್ಕಿ­ನಲ್ಲಿ ಹವಾಗುಣ ಶೃಂಗಸಭೆ ಆರಂಭವಾಗಿತ್ತು. ಇಡೀ ಭೂಗ್ರಹವನ್ನು ಸ್ವಚ್ಛ ಮಾಡುವ ಆ ಅಧಿ­ವೇಶನ­ದಲ್ಲಿ ಭಾರತದ ಪ್ರಧಾನ ಪ್ರತಿನಿಧಿಯೇ ಇರ­ಲಿಲ್ಲ. ನರೇಂದ್ರ ಮೋದಿ ನಾಡಿದ್ದು ವಿಶ್ವ­ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಾಜರಿರು­ತ್ತಾರೆ. ಈಗೇಕೆ ಹೋಗ­ಲಿಲ್ಲ? ಕಳೆದ ವಾರ ಚೀನೀ ಅಧ್ಯಕ್ಷರ ಜೊತೆಗೆ ಅಷ್ಟೆಲ್ಲ ಒಪ್ಪಂದಗಳಿಗೆ ಸಹಿ ಹಾಕುತ್ತಿ­ದ್ದಾಗ, ಭೂಗ್ರಹವನ್ನು ತಂಪುಗೊಳಿಸ­ಬಲ್ಲ ಬದಲೀ ತಂತ್ರಜ್ಞಾನ ಬಗ್ಗೆ ಅಥವಾ ಸುಸ್ಥಿರ ಅಭಿ­ವೃ­ದ್ಧಿಯ ಬಗ್ಗೆ ಏಕೆ ಚಕಾರ ಎತ್ತಲಿಲ್ಲ? -ಈ ಪ್ರಶ್ನೆ­ಗಳು ನಮ್ಮ ಮಾಧ್ಯಮಗಳಲ್ಲಿ ಚರ್ಚೆ­ಯಾ­ಗಲೇ ಇಲ್ಲ.
ಹವಾಗುಣ ಶೃಂಗಸಭೆಗೆ ೧೧೮ ರಾಷ್ಟ್ರಗಳ ಮುಖ್ಯ­ಸ್ಥರು ಹಾಜರಾಗಿರುವಾಗ ನಮ್ಮ ಪ್ರಧಾನಿಯೇಕೆ ಹೋಗಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಹೀಗಿ­ರಬಹುದು: ಈಗಿನ ಸಭೆಯ ಉದ್ದೇಶ ಏನೆಂದರೆ ಮುಂಬರುವ ಇನ್ನೂ ಮಹತ್ವದ ಚರ್ಚೆಗಳಿಗೆ ಚಾಲನೆ ನೀಡುವುದು. ಡಿಸೆಂಬರ್‌­ನಲ್ಲಿ ಪೆರು ದೇಶದ ರಾಜಧಾನಿ ಲಿಮಾದಲ್ಲಿ ರಾಷ್ಟ್ರ­­ನಾಯಕರ ಮತ್ತೊಂದು ಸಭೆ ನಡೆಯಲಿದೆ. ಭೂ­ತಾಪ ನಿಯಂತ್ರಣದ ವಿವಿಧ ಒಡಂಬಡಿಕೆಗಳು ಅಲ್ಲಿ ರೂಪುಗೊಳ್ಳು­ತ್ತವೆ.
ಆ  ಬಳಿಕ ಮುಂದಿನ ವರ್ಷ ಪ್ಯಾರಿಸ್‌ನಲ್ಲಿ ೨೦೧೫­ರಲ್ಲಿ ಉತ್ತುಂಗ ಶೃಂಗ­ಸಭೆ ನಡೆಯಲಿದ್ದು ಅಲ್ಲಿ ಎಲ್ಲ ರಾಷ್ಟ್ರಗಳೂ ಒಪ್ಪಂದಗಳಿಗೆ ಸಹಿ ಹಾಕುವ ನಿರೀಕ್ಷೆಯಿದೆ. ಈಗ ಪ್ರಧಾನಿ ಹೋಗಲೇ­ಬೇಕೆಂಬ ತುರ್ತೇನಿಲ್ಲ; ಇಷ್ಟಕ್ಕೂ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್ ಅಲ್ಲಿ ಈಗ ಭಾರತವನ್ನು ಪ್ರತಿನಿಧಿ­ಸುತ್ತಿದ್ದಾರೆ. ಕಾರ್ಬನ್ ಹೊರೆಯನ್ನು ತಗ್ಗಿಸುವಲ್ಲಿ ತಮ್ಮ ಹೊಸ ಸರ್ಕಾರ ಏನೇನು ಕ್ರಮ ಕೈಗೊಳ್ಳುತ್ತಿದೆ ಎಂದು ವಿವರಣೆ ನೀಡುತ್ತಿದ್ದಾರೆ. ಕಲ್ಲಿದ್ದಲ ಗಣಿ­ಗಾರಿಕೆಗೆ ಇಮ್ಮಡಿ ಮೇಲುತೆರಿಗೆ ಹಾಕಿ ೬೦೦ ಕೋಟಿ ಡಾಲರ್ ಹಣ ಸಂಗ್ರಹಿಸಿ ಅರಣ್ಯ ಬೆಳೆ­ಸುತ್ತೇವೆಂದೂ ನೀರಾವರಿ ಕಾಲುವೆ­ಗ­ಳು­ದ್ದಕ್ಕೂ ಸೌರ ಫಲಕ ಹಾಕುತ್ತೇವೆಂದೂ ಹೇಳಿದ್ದಾರೆ.
ಆದರೂ ದೊಡ್ಡ ಉದ್ಯಮಗಳಿಗೆ ಮೂಗು­ದಾಣ ಹಾಕುವ ಬದಲು ಇನ್ನಷ್ಟು ಗೋಗ್ರಾಸ ನೀಡಬೇಕೆಂಬ ಹುಮ್ಮಸ್ಸೇ ಎಲ್ಲ ಕಡೆ ಕಾಣುತ್ತಿದೆ. ಪರಿಸರ ಖಾತೆಯ ಮಹತ್ವವನ್ನು ಕಡಿಮೆ ಮಾಡುತ್ತ, ದೊಡ್ಡ ಯೋಜನೆಗಳಿಗೆ ಅಸ್ತುಪತ್ರ ಪಡೆ­ಯುವ ಮುನ್ನ ಪಾಲಿಸಬೇಕಿದ್ದ ಪರಿಸರ ನಿರ್ಬಂಧಗಳನ್ನು ಸಡಿಲಗೊಳಿಸುತ್ತ, ಅಭಿವೃದ್ಧಿಯ ರಥಕ್ಕೆ ಚೀನಾ ಅಮೆರಿಕಗಳ ಹೊಸ ಎಂಜಿನ್ ಜೋಡಿ­ಸುವ ಈ ಉತ್ಸಾಹ ಹಸುರುವಾದಿಗಳನ್ನು ಕಂಗಾಲು ಮಾಡಿದೆ.
ಮಂಗಳಲೋಕದಲ್ಲಿ ಮೀಥೇನ್ ಇದೆಯೇ ಎಂದು ಶೋಧಿಸಹೊರಟ ನಾವು ನಮ್ಮದೇ ಭೂಖಂಡಲ್ಲಿ ಮೀಥೇನನ್ನು, ಕಾರ್ಬನ್ ಡೈಆಕ್ಸೈಡನ್ನು ಹೆಚ್ಚಿಸುವ ಧಾವಂತ­ದಲ್ಲಿದ್ದೇವೆಂಬ ಆತಂಕ ಕಾಡತೊಡಗಿದೆ. ಮಂಗಳ­ಯಾನದ ಯಶಸ್ಸಿನಿಂದಾಗಿ ಭಾರತದ ಖ್ಯಾತಿ ಅಂತ­ರಿಕ್ಷಕ್ಕೇರಿದೆಯಾದರೂ ಪರಿಸರ -ಜೀವಜಾಲ ಸಂರಕ್ಷಣೆಯ ವಿಷಯದಲ್ಲಿ ಅದು ನೆಲಕಚ್ಚಿದೆ. ಅದನ್ನು ಮೇಲಕ್ಕೆತ್ತುವ ಹೊಣೆಯನ್ನು ಬರೀ ವಿಜ್ಞಾನಿಗಳ ಅಥವಾ ಕ್ರೀಡಾಳುಗಳ ಹೆಗಲ ಮೇಲಿಡಲಾದೀತೆ? 
‘ನನ್ನಂಥ ಬಾಲಕರ ಕನಸು ಏನೆಂದರೆ ಇನ್ನು ೩೦ ವರ್ಷಗಳಲ್ಲಿ ಮಂಗಳಲೋಕದಲ್ಲಿ ಭಾರತೀ­ಯರು ಮನೆ ಕಟ್ಟಬೇಕು’ ಎಂದು ನಿನ್ನೆ ಖುಷಿ­ಯಲ್ಲಿ ಯಾವುದೋ ಸುದ್ದಿವಾಹಿನಿಗೆ ವಿದ್ಯಾರ್ಥಿ­ಯೊಬ್ಬ ಹೇಳುತ್ತಿದ್ದ. ಆ ಬಾಲಕನ ಅಂಥ ಅಮಂಗಳ ಮಾತುಗಳನ್ನು ಕ್ಷಮಿಸೋಣ. ನಮ್ಮ ಈ ಸುಂದರ ಭೂಮಿಯನ್ನು ಬಿಸಿಗೋಲವನ್ನಾಗಿ ಮಾಡಿ, ಮಂಗಳನ ರುಗ್ಣಭೂಮಿಯಲ್ಲಿ ಮನೆ ಕಟ್ಟಬೇಕಾದ ದುರ್ಗತಿ ಮನುಕುಲಕ್ಕೆ ಎಂದೂ ಬಾರದಿರಲೆಂದು ಆಶಿಸೋಣ. 

No comments:

Post a Comment