Tuesday, 27 January 2015

ವಿಶ್ವ ಜೌಗು ಭೂಮಿ ದಿನ - ವರ್ಲ್ಡ್ ವೆಟ್‌ಲ್ಯಾಂಡ್ ಡೇ



ಕಣ್ಣ ಮುಂದೆಯೇ ಕಳೆದುಹೋಗುತ್ತಿರುವ ಕೆರೆ - ಕಾಲುವೆಗಳ ಪತ್ತೆಗೆ ಯಾರಿಗೆ ದೂರು ಕೊಡೋಣ? ಕೊಟ್ಟರೂ ಯಾರಾದರೂ ಹುಡುಕಿಕೊಟ್ಟಾರೆಯೇ? ಹುಡುಕಿದರೂ ಅವು ಮೂಲ ಸ್ವರೂಪದಲ್ಲಿ ಸಿಕ್ಕುತ್ತವೆಯೇ?
ಕಳೆದ ಮೂರು ದಶಕಗಳಲ್ಲಿ ಮೈಸೂರಿನ ಎರಡು ಡಜನ್ನಿಗೂ ಹೆಚ್ಚು ಕೆರೆಗಳು ಕಣ್ಮರೆಯಾಗಿವೆ. ಈಗ ಅಳಿದುಳಿದಿರುವ ಮೂರು ಮತ್ತೊಂದು ಕೆರೆಗಳೂ ಹೇಳಿಕೊಳ್ಳುವಂಥ ಸುಸ್ಥಿತಿಯಲ್ಲಿಲ್ಲ. 8 - 10 ಅಡಿಯ ಆಳದಲ್ಲಿ ನೀರು ಸಿಗುತ್ತಿದ್ದ ಭಾವಿಗಳೂ ಈಗ ಬರಿದಾಗಿವೆ. ಕೊರೆಸಿ,ಕೊರೆಸಿ ಅಡಿಗಡಿಗೂ ತೆಗೆದ ಕೊಳವೆ ಭಾವಿಗಳಲ್ಲಿ ನೂರಾರು ಅಡಿ ಕೊರೆದರೂ ನೀರು ಸಿಗುತ್ತಿಲ್ಲ. ಅಂತರ್ಜಲವೂ ಬರಿದಾಗಿದೆ ಎಂದೇ ಇದರ ಅರ್ಥ.
ಭೂಗೋಲದ ಮುಕ್ಕಾಲುವಾಸಿ ನೀರೇ ಇರುವಾಗ ನೀರಿಗೇಕೆ ಈ ಹಾಹಾಕಾರ? ಜಲಯುದ್ಧ? ಮೂರನೇ ಮಹಾಯುದ್ಧವಾಗುವುದಾದರೆ ಅದು ನೀರಿಗಾಗಿಯೇ ಅಂತೆ! ಹಾಗಿರುವಾಗ ಸಿಹಿನೀರಿನ ಸೆಲೆಗಳನ್ನು ಉಳಿಸಿಕೊಳ್ಳಬೇಕು ಅಲ್ಲವೇ? ನೀರಿನ ಸೆಲೆಗಳ ಸಂರಕ್ಷಣೆ ಹಾಗೂ ವಿವೇಚನಾಯುತ ಸದ್ಬಳಕೆಗಾಗಿ ಪ್ರತಿವರ್ಷವೂ ಫೆಬ್ರವರಿ 2ನೇ ತಾರೀಕಿನಂದು ವಿಶ್ವ ತೇವ ಭೂ ದಿನ( ವರ್ಲ್ಡ್ ವೆಟ್‌ಲ್ಯಾಂಡ್ ಡೇ) ಎಂದು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ.
ಕ್ಯಾಸ್ಪಿಯನ್ ಸಮುದ್ರ ತೀರದಲ್ಲಿರುವ ಇರಾನಿನ ರಾಂಸರ್ಎಂಬಲ್ಲಿ 1971 ರ ಫೆಬ್ರವರಿ 2 ರಂದು ನಡೆದ ಸಮಾವೇಶದಲ್ಲಿ ಜೌಗು ಪ್ರದೇಶದ( ತೇವ ಪ್ರದೇಶದ) ಸಂರಕ್ಷಣೆ ಹಾಗೂ ಅದರ ವಿವೇಚನಾಯುತ ಉಪಯೋಗಕ್ಕಾಗಿ ಚರ್ಚೆ ನಡೆಯಿತು. ಅದಕ್ಕಾಗಿ ರೂಪುರೇಷೆಗಳನ್ನು ರಚಿಸಲಾಯಿತು. 1975ರಲ್ಲಿ ಆ ತೀರ್ಮಾನವನ್ನು ರಾಂಸಾರ್‌ನಲ್ಲಿ ಜಾರಿಗೆ ತರಲಾಯಿತು. ಅಂದಿನಿಂದ ಪ್ರಪಂಚದ ನಾನಾ ಭಾಗಗಳಲ್ಲಿರುವ 99ಕ್ಕೂ ಹೆಚ್ಚು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಲ್ಲಿ ಈ ದಿನವನ್ನು ಪರಿಸರ ಜಾಗೃತಿ ಮೂಡಿಸುವ ಸಲುವಾಗಿ ಆಚರಿಸಲಾಗುತ್ತಿದೆ.
"ಸ್ಥಳೀಯ ಮತ್ತು ರಾಷ್ಟ್ರೀಯ ಕಾರ್ಯ ಚಟುವಟಿಕೆಗಳಿಂದ ಹಾಗೂ ಅಂತರ್ರಾಷ್ಟ್ರೀಯ ಸಹಕಾರದ ಮೂಲಕ ತೇವ ಭೂಪ್ರದೇಶದ ಸಂರಕ್ಷಣೆ ಮತ್ತು ವಿವೇಚನಾಯುತ ಸದ್ಬಳಕೆಯಿಂದ ಸುಸ್ಥಿರ ಅಭಿವೃದ್ಧಿಯ ಸಾಧನೆಗಾಗಿ ಕೊಡುಗೆ" ಎಂಬುದು ರಾಂಸಾರ್ ಸಮಾವೇಶದ ಧ್ಯೇಯವಾಕ್ಯ.

ತೇವ ಭೂಪ್ರದೇಶಗಳು( ವೆಟ್‌ಲ್ಯಾಂಡ್) ಎಂದರೇನು?
ಕೆರೆ, ಸರೋವರ, ತಟಾಕ, ನದಿ, ಅಂತರ್ಜಲ, ಜೌಗು ಪ್ರದೇಶಗಳು, ತೇವಯುಕ್ತ ಹುಲ್ಲುಗಾವಲುಗಳು, ಕೆಸರು ನೆಲ, ಓಯಸಿಸ್ಗಳು, ನದಿ ಮುಖಜ ಭೂಮಿ, ಅಳಿವೆಗಳು, mangrooveಗಳಂತಹ ಕರಾವಳೀ ಪ್ರದೇಶಗಳು, ಹವಳದ ದಿಬ್ಬಗಳು, ಮತ್ತು ಮಾನವ ನಿರ್ಮಿತ ಪ್ರದೇಶಗಳಾದ ಮೀನುಸಾಕಣಾ ಕಟ್ಟೆಗಳು, ಭತ್ತದ ಗದ್ದೆಗಳು, ಜಲಾಶಯಗಳು ಮತ್ತು ಉಪ್ಪಿನ ಇಂಗುಗುಂಡಿಗಳನ್ನು ಒಳಗೊಂಡಿವೆ.

ತೇವ ಪ್ರದೇಶಗಳನ್ನು ಏಕೆ ಸಂರಕ್ಷಿಸಬೇಕು?
ತೇವ ಪ್ರದೇಶಗಳು ಅತ್ಯಧಿಕ ಜೈವಿಕ ವೈವಿಧ್ಯತೆಯನ್ನು ಹೊಂದಿವೆ. ಈ ಪರಿಸರ ವ್ಯವಸ್ಥೆಯ ಉತ್ಪಾದನಾ ಸಾಮರ್ಥ್ಯವೂ ಅಧಿಕ. ಅವು ನಮಗೆ ಅವಶ್ಯ ಸೇವೆಗಳನ್ನು ಒದಗಿಸುವುದರೊಂದಿಗೆ ಅತ್ಯಗತ್ಯವಿರುವ ಸಿಹಿನೀರಷ್ಟನ್ನೂ ಕೊಡುತ್ತವೆ. ಮಾನವನ ಉಳಿವಿಗೆ ಈ ತೇವ ಪ್ರದೇಶಗಳು ಅತ್ಯವಶ್ಯಕ. ಜೈವಿಕ ವೈವಿಧ್ಯತೆಯ ತೊಟ್ಟಿಲುಗಳಾಗಿದ್ದು ಲೆಕ್ಕವಿಲ್ಲದಷ್ಟು ಸಸ್ಯ-ಪ್ರಾಣಿ, ಮುಂತಾದ ಜೀವೆಪ್ರಬೇಧಗಳಿಗೆ ನೀರನ್ನುಣಿಸುತ್ತಿವೇಮಾನವನಿಗೂ ಕೂಡ ಪಾರಿಸರಿಕ ಸೇವೆಗಳೊಡನೆ ನೀರಿನ ಪೂರೈಕೆ, ಆಹಾರ, ಕಟ್ಟಡ ನಿರ್ಮಾಣ ವಸ್ತುಗಳನ್ನು ಒದಗಿಸುತ್ತವೆ. ಅಷ್ಟೇ ಅಲ್ಲದೆ, ಪ್ರವಾಹವನ್ನು ತಡೆಗಟ್ಟುತ್ತವೆ, ಅಂತರ್ಜಲವನ್ನು ಮರುಪೂರಣ ಮಾಡುತ್ತವೆ. ಹವಾಗುಣ ವೈಪರೀತ್ಯಗಳನ್ನು ಎದುರಿಸಲು ಸಹಕಾರಿಯಾಗುತ್ತವೆ. ಹೀಗಿದ್ದೂ ಅವುಗಳು ನಶಿಸುತ್ತಿವೆ ಇಲ್ಲವೇ ಬೇರೆ ಉದ್ದೇಶಗಳಿಗೆ ಬಳಕೆಯಾಗುತ್ತಿವೆ. ತೇವ ಭೂಪ್ರದೇಶಗಳ ಸಂರಕ್ಷಣೆ ಒಂದು ಜಾಗತಿಕ ಸವಾಲು ಕೂಡಾ ಹೌದು.

ಅಂತರಾಷ್ಟ್ರೀಯ ಸಹಕಾರ ಏಕೆ ಬೇಕು?
ಒಂದು ತೇವ ಪ್ರದೇಶವು ಭೌಗೋಳಿಕವಾಗಿಯೋ, ರಾಜಕೀಯವಾಗಿಯೋ ಒಂದಕ್ಕಿಂತ ಹೆಚ್ಚು ಪ್ರದೇಶಗಳಿಗೆ ಸೇರಿದ್ದಲ್ಲಿ, ಅಂತಹ ಪ್ರದೇಶದ ನಿರ್ವಹಣೆಯು ಆ ಎಲ್ಲ ಪ್ರದೇಶಗಳ ಜವಾಬ್ದಾರಿಯಾಗಿರುತ್ತದೆ. ಅಲ್ಲಿ ದೊರಕುವ ಪ್ರಾಕೃತಿಕ ಸಂಪನ್ಮೂಲಗಳಾದ ನೀರು, ಗಿಡ-ಮರಗಳು, ಪ್ರಾಣಿ-ಪಕ್ಷಿಗಳೆಲ್ಲವನ್ನೂ ಸಂರಕ್ಷಿಸುವ ಹೊಣೆ ಆ ಎಲ್ಲ ಪಕ್ಷಗಳಿಗೂ ಸೇರಿರುತ್ತದೆ. ತತ್ಸಂಬಂಧವಾಗಿ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ತೇವ ಪ್ರದೇಶಗಳ ಬಗ್ಗೆ ಚರ್ಚಿಸಲು, ಸಂರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲು, ಮಾಹಿತಿ ವಿನಿಮಯ ಮಾಡಿಕೊಳ್ಳಲು ಒಂದು ವೇದಿಕೆಯನ್ನು ಒದಗಿಸಲು ಅಂತರ್ರಾಷ್ಟ್ರೀಯ ಸಹಕಾರ ಬೇಕು. ಪರಿಸರ ಸಂರಕ್ಷಣೆಯ ಬಗ್ಗೆ ಸೌಹಾರ್ದವನ್ನು, ಸುಸಂಬಂಧವನ್ನು ಹೊಂದಿದ್ದು ಪರಸ್ಪರ ಸಹಯೋಗದೊಂದಿಗೆ ಸೀಮಾರೇಖೆಗಳನ್ನೂ ದಾಟಿ ಕಾರ್ಯೋನ್ಮುಖರಾಗಲು ಅಂತರ್ರಾಷ್ಟ್ರೀಯ ಸಹಕಾರ ಬಹುಮುಖ್ಯ.
ತೇವ ಭೂಪ್ರದೇಶಗಳ ವಿವೇಚನಾಯುಕ್ತ ಬಳಕೆಯೆಂದರೇನು?
ತೇವ ಪ್ರದೇಶಗಳ ಸಂರಕ್ಷಣೆ ಹಾಗೂ ಸುಸ್ಥಿರ ಬಳಕೆ ಮತ್ತು ಜನರಿಗೂ ಪ್ರಕೃತಿಗೂ ಅವುಗಳಿಂದ ಲಭಿಸುವ ಪಾರಿಸರಿಕ ಸೇವೆಗಳನ್ನು ವಿವೇಚನಾಯುಕ್ತ ಬಳಕೆ ಅಥವಾ ಸದ್ಬಳಕೆಎನ್ನಬಹುದು. ಈ ರೀತಿ ಪ್ರಯೋಜನಗಳನ್ನುಪಡೆಯುವಾಗ ತೇವ ಪ್ರದೇಶವು ತನ್ನ ಲಕ್ಷಣಗಳನ್ನು ಹಾಗೆಯೇ ಉಳಿಸಿಕೊಳ್ಳುವಂತೆ ಎಚ್ಚರವಹಿಸಬೇಕು.

ತೇವ ಭೂ ಪ್ರದೇಶಗಳ ಸಂರಕ್ಷಣೆ ಹೇಗೆ?
ರಾಂಸಾರ್ ಸಮಾವೇಶದ ಆಶಯವನ್ನು ಜಾರಿಗೆ ತರುವಲ್ಲಿ ಈ ಕೆಳಕಂಡ ನಿರ್ಣಯಗಳು ಪ್ರಮುಖ ಪಾತ್ರ ನಿರ್ವಹಿಸುತ್ತವೆ.
·         ತೇವ ಪ್ರದೇಶಗಳ ಸದ್ಬಳಕೆ ಹಾಗೂ ಸಂರಕ್ಷಣೆಗಾಗಿ ಕಾರ್ಯೋನ್ಮುಖರಾಗುವುದು
·         ಸೂಕ್ತ ತೇವ ಪ್ರದೇಶವನ್ನು ಗುರುತಿಸಿ ಅಂತರ್ರಾಷ್ಟ್ರೀಯ  ತೇವ ಭೂಪ್ರದೇಶದ ಪರಿಧಿಯೊಳಗೆ ಪರಿಣಾಮಕಾರೀ ನಿರ್ವಹಣೆಗಾಗಿ ತರುವುದು (" ರಾಂಸರ್ ಪಟ್ಟಿ"ಗೆ ಸೇರ್ಪಡೆ ಮಾಡುವುದು)·         ಗಡಿಯಾಚೆಗಿನ ತೇವ ಪ್ರದೇಶಗಳನ್ನೂ, ವಿವ್ಧ ದೇಶಗಳ ನಡುವೆ ಹಂಚಿಕೆಯಾದ ತೇವ ಪ್ರದೇಶಗಳನ್ನೂ ಹಾಗೂ ಜೀವ ಪ್ರಬೇಧಗಳನ್ನೂ ಅಂತರ್ರಾಷ್ಟ್ರೀಯ ಸಹಕಾರದಿಂದ ಸೌಹಾರ್ದಯುತವಾಗಿ ನಿರ್ವಹಿಸುವುದು.
ಇದಷ್ಟೇ ಅಲ್ಲದೆ, ಹೊಸ ತೇವ ಪ್ರದೇಶ ನಿಯಮಾವಳಿಗಳನ್ನು ಜಾರಿಗೊಳಿಸಿ ರಾಷ್ಟ್ರೀಯ ಪರಿಸರ ಕ್ರಿಯಾ ಯೋಜನೆಗಳನ್ನುಸಿದ್ಧಪಡಿಸುವುದು, ನೀತಿ- ನಿಯಮಾವಳಿಗಳನ್ನು ಜಾರಿಗೊಳಿಸಿ ಹಾಗೂ ಸಾರ್ವಜನಿಕ ಶಿಕ್ಷಣದ ಮೂಲಕ ಲೆಲ್ಲರಲ್ಲೂ ಅರಿವು ಮೂಡಿಸುವುದುತಎವ ಪ್ರದೇಶದ ಅಭಿವೃದ್ಧಿ ಕಾರ್ಯಕ್ರಮದ ಮೂಲಕ ತೇವ ಭೂ ಪ್ರದೇಶದ ಸಂಪನ್ಮೂಲಾಭಿವೃದ್ಧಿ, ಮೇಲ್ವಿಚಾರಣೆ, ಸಂಶೋಧನೆ, ತರಬೇತಿ, ಶಿಕ್ಷಣ ಮತ್ತು ಸಾರ್ವಜನಿಕ ಅರಿವು ಸಂರಕ್ಷಣಾ ಕಾರ್ಯದಲ್ಲಿ ಪರಿಣಾಮಕಾರಿಯಾಗಬಲ್ಲವು. ತೇವ ಪ್ರದೇಶಗಳಲ್ಲಿ ಸಮಗ್ರ ನಿರ್ವಹಣಾ ಯೋಜನೆಯನ್ನು ಅನುಷ್ಟಾನಕ್ಕೆ ತರಬೇಕು.

ವಿಶ್ವ ಜೌಗು ಭೂಮಿ ದಿನ-2015 ರ ಘೋಷವಾಕ್ಯ - " ನಮ್ಮ ಭವಿಷ್ಯಕ್ಕಾಗಿ ತೇವ ಭೂಪ್ರದೇಶಗಳು".



ಈ ಘೋಷಣೆಯು ನಮ್ಮೂರಿನ ಕೆರೆಗಳನ್ನು ಉಳಿಸಲು ಸಹಾಯವಾದೀತು ಎಂಬುದೇ ನಮ್ಮ ಆಶಯ. ಖ್ಯಾತ ಲೇಖಕಿ ಸುನಿತಾ ನಾರಾಯಣ ಹೇಳುವಂತೆ ಪ್ರಾಚೀನ ಭಾರತೀಯರ ವೈಜ್ಞಾನಿಕ ಕೊಡುಗೆಗಳೆಂದರೆ ಕೇವಲ ಗಣಿತ, ಖಗೋಳ ಭೌತ ವಿಜ್ಞಾನ, ಆಯುರ್ವೇದಗಳಷ್ಟೆ ಅಲ್ಲ, ನೀರಿನ ಸಮರ್ಪಕ ನಿರ್ವಹಣೆಯು ಅಟಾಯಂತ ವೈಜ್ಞಾನಿಕವಾಗಿತ್ತು. ಪರಿಸರ ವ್ಯವಸ್ಥೆಗೆ ತಕ್ಕಂತೆ ಒಂದೊಂದು ಹನಿ ನೀರನ್ನೂ ಸಮರ್ಪಕ ರೀತಿಯಲ್ಲಿ ಕೊಯ್ಲು ಮಾಡಲಾಗುತ್ತಿತ್ತು. ಪ್ರಾಚೀನ ಭಾರತೀಯರಿಗೆ ನಿಸರ್ಗದ ಸಂಪನ್ಮೂಲಗಳ ಸರಿಯಾದ ಯೋಜನೆ, ವಾಸ್ತು, ನಿರ್ವಹಣೆ ಮತ್ತು ಆಧಿಪತ್ಯ ತಿಳಿದಿತ್ತು. ಇತಿಹಾಸದಿಂದ ನಾವು ಕಲಿಯುವುದು ಸಾಕಷ್ಟಿದೆಯಲ್ಲವೇ?

-  ಗೀತಾ. ಎಚ್.
   ಹಸಿರು ಹೆಜ್ಜೆ.
ಮೈಸೂರು

No comments:

Post a Comment