ವರ್ಷವೊಂದರ ಕೊನೆಯ ಭಾಗ ಎಂದರೆ ಅದು ಮೋಜು – ಮನರಂಜನೆಯ ಮುನ್ನುಡಿ ಎನ್ನುವುದು ಮಾರುಕಟ್ಟೆ ಕೇಂದ್ರಿತ ಆಧುನಿಕ ಜಗತ್ತಿನ ಪರಿಭಾಷೆ. ಸುಖವನ್ನು ಸೂರೆಗೊಳ್ಳುವ ಧಾವಂತದಲ್ಲಿ ಬೇಕಾದ್ದು ಬೇಡವಾದ್ದು ಎಲ್ಲವನ್ನೂ ಮನೆ – ಮನಸ್ಸಿನಲ್ಲಿ ತುಂಬಿಕೊಳ್ಳುತ್ತೇವೆ. ಈ ಹೇರಿಕೆ ನಮಗೆ ತಿಳಿಯದಂತೆಯೇ ಭೂಮಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅಂದಹಾಗೆ, ನಮ್ಮ ಸುತ್ತಲಿನ ಸಮಾಜ ಹಾಗೂ ಪರಿಸರದ ಹಿತಕ್ಕೆ ಧಕ್ಕೆಯಾಗದಂತೆ ಹೊಸ ವರ್ಷವನ್ನು ಬರಮಾಡಿಕೊಳ್ಳುವುದು ಹೇಗೆ? ಹೊಸ ವರ್ಷದ ನಮ್ಮ ನಡವಳಿಕೆ, ಸಂಕಲ್ಪಗಳು ಹೇಗಿರಬೇಕು? ಇಲ್ಲಿನ ಬರಹ ರೂಪದ ‘ಅಕ್ಷರಗಳ ಉರುಳುಮಣೆ’ ಏರಿದರೆ ಉತ್ತರಗಳ ದಾರಿ ತಂತಾನೆ ತೆರೆದುಕೊಳ್ಳುತ್ತದೆ.
ಹೊವರ್‌ಬೋರ್ಡ್ ಬಂತು ದಾರಿ ಬಿಡಿ. ಅದೊಂಥರಾ ಅಡ್ಡಗಾಡಿ; ಉರುಳುಮಣೆ ಎನ್ನೋಣ. ಬ್ಯಾಟರಿಯಿಂದ ಚಲಿಸುವ, ಎರಡು ಗಾಲಿಗಳ ಈ ಮಣೆಯ ಮೇಲೆ ನಿಂತರೆ ಅದು ಉರುಳುತ್ತ ಹೋಗುತ್ತದೆ. ಕಾಲಿನಲ್ಲೇ ಅದನ್ನು ತಿರುಗಿಸಬಹುದು, ವೇಗವನ್ನು ಹೆಚ್ಚಿಸಬಹುದು ಅಥವಾ ಬ್ರೇಕ್ ಹಾಕಲೂಬಹುದು. ಬ್ಯಾಲೆನ್ಸ್ ಮಾಡುವುದನ್ನು ಕಲಿಯಲಿಕ್ಕೆ ಒಂದೆರಡು ಗಂಟೆ ಸಾಕು. ಸೈಕಲ್ ಅಥವಾ ಸ್ಕೇಟಿಂಗ್ ಕಲಿತಷ್ಟೂ ಕಷ್ಟದ್ದಲ್ಲ. ಸಪಾಟು ನೆಲದಲ್ಲಿ, ರಸ್ತೆಯಲ್ಲಿ, ಶಾಪಿಂಗ್ ಮಾಲ್‌ಗಳಲ್ಲಿ, ಸಿನೆಮಾ ಹಾಲ್‌ಗಳಲ್ಲಿ ಎಲ್ಲೆಂದರಲ್ಲಿ ಈ ಗಾಲಿಮಣೆಯ ಮೇಲೆ ನಿಂತು ಉರುಳುತ್ತ ಸಾಗಬಹುದು.
ಒಂದು ವರ್ಷದೀಚೆಗಷ್ಟೆ ಮಾರುಕಟ್ಟೆಗೆ ಬಂದ ಇದು 2015ರ ಅತ್ಯಂತ ಹುಚ್ಚು ಬೇಡಿಕೆಯುಳ್ಳ ವಸ್ತುವಾಗಿ ಅಮೆರಿಕ, ಯುರೋಪ್, ಜಪಾನ್, ತೈವಾನ್‌ಗಳ ಮಾಲ್‌ಗಳಲ್ಲಿ ಹಾವಳಿ ಎಬ್ಬಿಸಿದೆ. ರೂಪದರ್ಶಿಗಳಿಗೆ ಶೋಕಿಯ ವಸ್ತುವಾಗಿ, ಹದಿಹರಯದವರಿಗೆ ಮೋಜಿನ ವಸ್ತುವಾಗಿ, ಹಣವಿದ್ದವರಿಗೆ ಹೊಸ ಉಡುಗೊರೆಯ ಆಟಿಗೆಯಾಗಿ ಎಲ್ಲೆಂದರಲ್ಲಿ ಅದು ನುಸುಳುತ್ತಿದೆ. ಎಷ್ಟೆಂದರೆ, ಹಜ್ ಯಾತ್ರೆಗೆಂದು ಮೆಕ್ಕಾಗೆ ಹೋಗಿದ್ದ ಭೂಪನೊಬ್ಬ ಉರುಳುಮಣೆಯ ಮೇಲೆ ನಿಂತೇ ಶಾಸ್ತ್ರೋಕ್ತ ಪ್ರದಕ್ಷಿಣೆ (ತವಾಫ್) ಹಾಕಿದ್ದೂ ಜಾಹೀರಾಯಿತು. ಜನಸಂದಣಿಯಲ್ಲೂ ನುಗ್ಗುತ್ತ ನುಸುಳುತ್ತ ಸರ್ಕಸ್ ಮಾಡುವವರ ಸೆಲ್ಫಿಗಳು ವಿಜೃಂಭಿಸಿದವು.
ಕೇಳಬೇಕೆ? ನಕಲಿ, ಅಗ್ಗದ ಮಣೆಗಳೂ ಮಾರುಕಟ್ಟೆಗೆ ನುಗ್ಗಿದ್ದರಿಂದ ಅಪಾಯದ ಸರಮಾಲೆಗಳೇ ಘಟಿಸತೊಡಗಿದವು. ಚಲಿಸುತ್ತಿದ್ದಾಗಲೇ ಘರ್ಷಣೆಯಿಂದ ಬೆಂಕಿ ಹೊತ್ತಿಕೊಂಡಿದ್ದೇನು, ಮಾಲ್‌ಗಳಲ್ಲೇ ಢಮಾರ್ ಎಂದಿದ್ದೇನು, ರೀಚಾರ್ಜ್ ಮಾಡುತ್ತಿರುವಾಗ ಕಿಡಿಹಾರಿ ಮನೆಯನ್ನೇ ಸುಟ್ಟಿದ್ದೇನು; ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದ್ದೇನು; ಕೆಲವು ಕಡೆ ಇದಕ್ಕೆ ನಿಷೇಧ ಹಾಕಿದ್ದೇನು, ಅಮೆಝಾನ್ ಕಂಪನಿ ತಾನು ಮಾರಿದ್ದನ್ನೆಲ್ಲ ಮರಳಿ ಖರೀದಿಸುವುದಾಗಿ ಘೋಷಿಸಿದ್ದೇನು; ಆದರೂ ಇದರ ಕ್ರೇಝ್ ಕಮ್ಮಿಯಾಗಲಿಲ್ಲ. ಕ್ರಿಸ್‌ಮಸ್, ಹೊಸವರ್ಷದ ಉಡುಗೊರೆ ಸುಗ್ಗಿಯಲ್ಲಂತೂ ಅಪಾಯದ ಬಗ್ಗೆ ಕ್ಯಾರೇ ಎನ್ನದೇ ಕೊಳ್ಳುಬಾಕರು ಅದರ ಖರೀದಿಗೆ ನುಗ್ಗುತ್ತಿದ್ದಾರೆ.
ಹಿಂದೆಲ್ಲ ಹಬ್ಬದ ಖರೀದಿ ಎಂದರೆ ವರ್ಷಕ್ಕೆ ಒಂದೋ ಎರಡೋ ಬಾರಿ ಇರುತ್ತಿತ್ತು ಅಷ್ಟೆ. ಈಚೀಚೆಗೆ ಎಲ್ಲ ಹಬ್ಬಗಳೂ ಖರೀದಿಯ ಹಬ್ಬಗಳೇ ಆಗುತ್ತಿವೆ. ಪ್ರತಿ ತಿಂಗಳೂ ಪೃಥ್ವಿಯ ಒಂದಿಲ್ಲೊಂದು ಕಡೆ ಒಂದಲ್ಲ ಒಂದು ಹಬ್ಬ ಇದ್ದೇ ಇರುತ್ತದೆ. ನಮ್ಮಲ್ಲೇ ಸಂಕ್ರಾಂತಿ, ಯುಗಾದಿಯಿಂದ ಹಿಡಿದು ಗಣೇಶ, ಧನ್‌ತೇರಾ, ದಸರಾ, ದೀಪಾವಳಿ ಎಲ್ಲವೂ ಸಂತೆಯ, ಜಾತ್ರೆಯ ಸಡಗರವನ್ನೇ ಹೊತ್ತು ತರುತ್ತವೆ. ಮಾಲ್‌ಗಳಲ್ಲಿ, ಅಂಗಡಿಗಳಲ್ಲಿ, ಫುಟ್‌ಪಾತ್‌ಗಳಲ್ಲಿ ಶೋಕಿಸರಕುಗಳನ್ನು ಸುರಿಯಲೆಂದು, ಇಡೀ ಜಗತ್ತನ್ನು ವರ್ಷವಿಡೀ ಭೋಗದ ಮೋಜಿನಲ್ಲಿ ಮುಳುಗಿಸಿ ಇಡಲೆಂದು ಫ್ಯಾಕ್ಟರಿಗಳು ಹಗಲು ರಾತ್ರಿ ಕೆಲಸ ಮಾಡುತ್ತಿವೆ.
ಅವುಗಳಿಗೆ ಕಚ್ಚಾವಸ್ತುಗಳನ್ನು ಪೂರೈಸಲೆಂದು ತೈಲದ, ಕಲ್ಲಿದ್ದಲಿನ ಹಡಗುಗಳು, ಅನಿಲ ಕೊಳವೆ ಮಾರ್ಗಗಳು ಭೂಮಿಯನ್ನು ಸುತ್ತುತ್ತಿವೆ. ಪರ್ವತೋಪಾದಿಯಲ್ಲಿ ಪ್ಲಾಸ್ಟಿಕ್ಕು, ರಬ್ಬರು, ಗಾಜು, ಲೋಹಗಳಿಗೆ ನಾನಾ ರೂಪ, ನಾನಾ ಬಗೆಯ ಬಣ್ಣ, ಪರಿಮಳ, ಹೊಳಪು ಕೊಟ್ಟು ರಾಶಿ ಹಾಕಲೆಂದು ಎಷ್ಟೆಲ್ಲ ದೇಶಗಳಲ್ಲಿ ಎಂಜಿನಿಯರ್‌ಗಳು, ತಾಂತ್ರಿಕ ಪರಿಣತರು, ಕಂಪ್ಯೂಟರ್ ತಜ್ಞರು, ಸರಕುಸಾಗಣೆ ಏಜಂಟರು ಅಹೋರಾತ್ರಿ ಕೆಲಸ ಮಾಡುತ್ತಿದ್ದಾರೆ. ಜ್ವಾಲಾಮುಖಿ ಸಿಡಿದಾಗ ಕೆಂಡ, ದೂಳು, ಹೊಗೆ, ಕೆಸರು, ಬೂದಿ ಚಿಮ್ಮುವ ಹಾಗೆ ಈ ಭೋಗಪ್ರಳಯದಲ್ಲಿ ಕಾರು, ಫ್ರಿಜ್ಜು, ಮೊಬೈಲ್, ಏಸಿ ಯಂತ್ರ, ಮೈಕ್ರೊವೇವ್ ಅವನ್, ಉರುಳುಮಣೆ ಎಲ್ಲವೂ ಚಿಮ್ಮುತ್ತಿವೆ. ಒಂದು ವಿಲಕ್ಷಣ ಭೋಗಪ್ರಳಯದಲ್ಲಿ ನಾವಿದ್ದೇವೆ.
ಅದರ ಇನ್ನೊಂದು ಮುಖವನ್ನು ಈಗ ನೋಡೋಣ. ಭೂಮಿಯ ಎಲ್ಲ ಕಡೆ ಪ್ರತಿ ತಿಂಗಳೂ ಒಂದಲ್ಲ ಒಂದು ಹಬ್ಬವನ್ನು ಆಚರಿಸುತ್ತಿದ್ದಂತೆಯೇ ಒಂದಲ್ಲ ಒಂದು ಕಡೆ ನಿಸರ್ಗ ಪ್ರಕೋಪಗಳು ಪ್ರಳಯರೂಪದಲ್ಲೇ ಬರುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಚೆನ್ನೈಯಲ್ಲಿ ಜಲಪ್ರಳಯ, ಬೀಜಿಂಗ್‌ನಲ್ಲಿ ಹೊಂಜಿನ ಪ್ರಳಯ, ಮೊಂಗೋಲಿಯಾದಲ್ಲಿ ದೂಳಿನ ಪ್ರಕೋಪ, ಆಫ್ರಿಕದ ದಕ್ಷಿಣ ಭಾಗದಲ್ಲಿ ಸುಂಟರಗಾಳಿ ಪ್ರಕೋಪ, ಇಂಡೊನೇಶ್ಯದಲ್ಲಿ ಹೊಗೆ ಪ್ರಳಯ, ಆಸ್ಟ್ರೇಲಿಯಾದಲ್ಲಿ ಕಾಳ್ಗಿಚ್ಚಿನ ಪ್ರಳಯ; ಅಮೆರಿಕದ ಅಲ್ಲಲ್ಲಿ ಹಿಮ ಪ್ರಳಯ; ಇದೀಗ ಉತ್ತರ ಭಾರತದಲ್ಲಿ ಚಳಿಪ್ರಳಯ ಆರಂಭವಾಗಿದೆ. ರಾಜಸ್ತಾನದಲ್ಲೂ ಹಿಮ ಸುರಿಯತೊಡಗಿದೆ.
ಬೆಂಗಳೂರಿನಲ್ಲಿ? ಇಲ್ಲಿ ಕಸಪ್ರಳಯ. ಇಲ್ಲೊಂದೇ ಅಲ್ಲ, ಎಲ್ಲ ಊರುಗಳ ಸುತ್ತಲೂ ಹಳ್ಳ, ಗುಂಡಿ, ಕೆರೆ, ತಗ್ಗುಗಳನ್ನೆಲ್ಲ ಮುಚ್ಚುತ್ತ, ಗುಡ್ಡಗಳನ್ನೂ ಸೃಷ್ಟಿಸುತ್ತ ಕಸದರಾಶಿ ವಿಸ್ತರಿಸುತ್ತಿದೆ. ಗಾಳಿಗೆ ಹೊಗೆಯನ್ನೂ ನೆಲಕ್ಕೆ ಕೆಸರನ್ನೂ ನದಿಶರಧಿಗೆ ಕಚಡಾಗಳನ್ನೂ ಅಂತರ್ಜಲಕ್ಕೆ ಕೆಮಿಕಲ್ ವಿಷವನ್ನೂ ಸೂಸುತ್ತ ಗಗನದಾಚಿನ ಕಕ್ಷೆಯವರೆಗೂ ತಿಪ್ಪೆ ಸಿಡಿಯುತ್ತಿದೆ. ಅತ್ತ ಭೋಗಜ್ವಾಲಾಮುಖಿ ಜಗತ್ತಿನ ಎಲ್ಲ ಊರುಗಳಿಗೆ ಸರಕುಗಳ ಸುರಿಮಳೆಗರೆಯುತ್ತಿದ್ದಂತೆ ಇತ್ತ ನಾಗರಿಕತೆಗೇ ಆಮಶಂಕೆ ಹಿಡಿದಂತೆ ಎಲ್ಲ ಹಿತ್ತಿಲುಗಳೂ, ಜಲಮೂಲಗಳೂ ಕಡಲತೀರಗಳೂ ಕಕ್ಕಸುಗುಂಡಿಗಳಾಗಿವೆ.
ಸಮಾಜ ಸುಭಿಕ್ಷವಾಗಿದೆಯೆ? ಆಗಿದೆಯೆನ್ನೋಣ. ಈಗ ಪ್ಲೇಗು, ಸಿಡುಬಿನಂಥ ಮಹಾಮಾರಿಗಳಿಲ್ಲ. ಮಹಾಯುದ್ಧಗಳಿಲ್ಲ. ರಾಷ್ಟ್ರವ್ಯಾಪಿ ಹಸಿವೆ, ಕ್ಷಾಮಡಾಮರಗಳು ವರದಿಯಾಗುತ್ತಿಲ್ಲ. ಆದರೆ ನಮ್ಮ ಬಯಕೆಗಳೇ ಭೂಮಿಗೆ ಕಾಯಿಲೆ ಹಬ್ಬಿಸಿವೆ. ಕಣ್ಣಿಗೆ ಕಾಣುವ, ಕಾಣದ ಜೀವಲೋಕಕ್ಕೆಲ್ಲ ಕಾಯಿಲೆ ಹಬ್ಬಿಸಿದ್ದೇವೆ. ಮಾನವ ವಸತಿಯಿಂದ 2,400 ಕಿಲೊಮೀಟರ್ ಆಚೆಗೆ, ಶಾಂತ ಸಾಗರದಲ್ಲಿರುವ ಮಿಡ್ವೇ ದ್ವೀಪಗಳಲ್ಲಿ ಕಡಲಪಕ್ಷಿಗಳು ವಿಲವಿಲ ಸಾಯುತ್ತಿವೆ. ಅವುಗಳ ಹೊಟ್ಟೆಯನ್ನು ಸೀಳಿ ನೋಡಿದರೆ ಜಠರದಲ್ಲಿ ಬರೀ ಪ್ಲಾಸ್ಟಿಕ್ ಮುಚ್ಚಳ, ಕಾಂಡೊಮ್, ಮುರುಕು ಬಾಚಣಿಕೆ, ಮಾತ್ರೆಕವಚಗಳೇ ತುಂಬಿವೆ. ನಮ್ಮ ತಿಪ್ಪೆಗಳು ಅಷ್ಟು ದೂರಕ್ಕೂ ಹೋಗಿ ಮರಣ ಮೃದಂಗ ಬಾರಿಸುತ್ತಿವೆ.
ಹೊಸ ಹೊಸ ಕಾಯಿಲೆಗಳು ವನ್ಯಲೋಕಕ್ಕಷ್ಟೇ ಅಲ್ಲ; ನಮ್ಮ ಲೋಕಕ್ಕೂ ತಗುಲುತ್ತಿವೆ. ಹೃದ್ರೋಗ, ಮೂತ್ರಕೋಶ ವೈಫಲ್ಯ, ಡಯಾಬಿಟೀಸ್, ಡೆಂಗೇ ಪಂಗೇಯಂಥ ದೈಹಿಕ ಕಾಯಿಲೆಗಳನ್ನು ಬಿಡಿ; ಅವಕ್ಕೆ ಮದ್ದು ಕೊಡಲು ಹೈಸ್ಪೀಡ್ ಅಂಬುಲೆನ್ಸ್‌ಗಳು, ಹೈಟೆಕ್ ಆಸ್ಪತ್ರೆಗಳು ಸಜ್ಜಾಗಿವೆ. ಆದರೆ ಕೊಳ್ಳುಬಾಕ ಕಾಯಿಲೆಗೆ ಆಸ್ಪತ್ರೆಗಳಿಲ್ಲ. ಬದಲಿಗೆ ಈ ಕಾಯಿಲೆಯನ್ನು ಹೆಚ್ಚಿಸುವ ತಂತ್ರಗಳೇ ಎಲ್ಲ ಕಡೆ ವಿಜೃಂಭಿಸುತ್ತಿವೆ. ಕುಡಿತ, ಮಾದಕ ದ್ರವ್ಯ ಸೇವನೆ, ಜೂಜು, ಅತಿಕಾಮಾಸಕ್ತಿಯಂಥ ಮಾಮೂಲು ಮನೆಗೇಡಿ ತೆವಲಿಗೆ ಈಗ ಕೊಳ್ಳುಬಾಕತನವೂ ನಮ್ಮ ಸಮಾಜದಲ್ಲಿ ವ್ಯಾಪಕವಾಗಿ ಹಬ್ಬುತ್ತಿದೆ. ಕಿಸೆಯಲ್ಲಿ ಅಥವಾ ಖಾತೆಯಲ್ಲಿ ದುಡ್ಡಿರಲಿ, ಇಲ್ಲದಿರಲಿ, ಏನಾದರೂ ಹೊಸದನ್ನು ಖರೀದಿ ಮಾಡತ್ತಲೇ ಇರಬೇಕೆಂಬ ಖಯಾಲಿ ಈಗ ಎಲ್ಲೆಡೆ ಹೆಚ್ಚುತ್ತಿದೆ. ಅದಕ್ಕೆ ಓನಿಯೋಮೇನಿಯಾ (oniomania) ಎನ್ನುತ್ತಾರೆ. ಅಂದರೆ ಕಂಡದ್ದನ್ನೆಲ್ಲ ಖರೀದಿಸಬೇಕೆಂಬ ತೆವಲು ಅದು. ಕುಡುಕರಿಗೆ ‘ಆಲ್ಕೊಹಾಲಿಕ್ಸ್’ ಎನ್ನುವ ಹಾಗೆ ಖರೀದಿಯ ಗೀಳು ಹತ್ತಿಸಿಕೊಂಡವರಿಗೆ ‘ಶಾಪಾಹಾಲಿಕ್ಸ್’ ಎಂದು ಸಾದಾ ಇಂಗ್ಲಿಷ್‌ನಲ್ಲಿ ಹೇಳುತ್ತಾರೆ.
ಏನೋ ನೇಲ್ ಪಾಲಿಶ್‌ನಂಥ ಚಿಲ್ಲರೆ ವಸ್ತುವಿನ ಖರೀದಿಗೆಂದು ಅಂಗಡಿ ಹೊಕ್ಕರೆ ಶಾಂಪೂ, ಕ್ಲೆನ್ಸರ್, ಜೆಲ್, ಹೇರ್‌ಬ್ರಶ್, ಸ್ಕಾರ್ಫ್ ಮುಂತಾದ ಕಂಡದ್ದನ್ನೆಲ್ಲ ಬುಟ್ಟಿಯಲ್ಲಿ ತುಂಬಿಸಿಕೊಂಡು ಬರುವ ಖಯಾಲಿ ಅದು. ಮತ್ತೆ ಮನೆಗೆ ಬಂದ ಮೇಲೆ ಸಣ್ಣ ಅಪರಾಧೀ ಪ್ರಜ್ಞೆ ಬೆಳೆಯುತ್ತದೆ. ತಂದಿದ್ದನ್ನು ಬಿಚ್ಚಿ ನೋಡುತ್ತಿರುವಾಗಲೇ ‘ಎಷ್ಟೊಂದು ದುಡ್ಡು ವೇಸ್ಟು, ಇಂಥವು ಎಷ್ಟೊಂದಿವೆ ಮನೇಲಿ’ ಎಂದು ಮನೆಯ ಯಾರಾದರೂ ಹೇಳಿದರೆ ಖಿನ್ನತೆ ಆವರಿಸುತ್ತದೆ. ವಾರ ಕಳೆದ ಮೇಲೆ ಮತ್ತೆ ಮಾಲ್‌ಗಳಿಗೆ ಹೋಗುವ ಬಯಕೆ ಚಿಗುರುತ್ತದೆ. ಪಾಕೀಟು ಭರ್ತಿಯಾಗುತ್ತಲೇ ಅಥವಾ ‘ಸೇಲ್’ ಜಾಹೀರಾತು ಕಂಡಕೂಡಲೇ ಮತ್ತೆ ಖರೀದಿಗೆ ಸವಾರಿ ಹೊರಡುತ್ತದೆ. ಶಾಪ್ ಟಿಲ್ ಯೂ ಡ್ರಾಪ್! ತಲೆಸುತ್ತಿ ಬೀಳುವವರೆಗೂ ಮಾಲ್ ಸುತ್ತು...
ಕೆಲವರು ಪಾಪ ಬೀಳುತ್ತಾರೆ; ಸಾಲಕ್ಕೆ ಬೀಳುತ್ತಾರೆ. ಸಾಲದಿಂದ ಬಚಾವಾಗಲು ಕುಂಟುನೆಪ, ಸುಳ್ಳು, ಚೌರ್ಯ, ಮೋಸ, ವಂಚನೆ ಮುಂತಾದ ಸರಣಿ ಅಪಘಾತಗಳು ಸಂಭವಿಸುತ್ತ ಹೋಗುತ್ತವೆ. ಗಂಡಹೆಂಡಿರ ಮಧ್ಯೆ, ಗೆಳೆಯರ ಮಧ್ಯೆ, ಸಹೋದ್ಯೋಗಿಗಳ ಮಧ್ಯೆ ವಿರಸ, ಮನಸ್ತಾಪ, ಜಗಳ, ವಿಚಾರಣೆ, ಅವಮಾನ, ಬಲಾತ್ಕಾರ, ಕೆಲವೊಮ್ಮೆ ಕೊಲೆಯಲ್ಲೂ ಕತೆ ಮುಗಿಯುವುದಿಲ್ಲ.
ನಮ್ಮೊಳಗೆ ಅವಿತಿರುವ ಬಯಕೆಗಳಿಗೆ ನೀರೆರೆಯಲು, ಹೊಸ ಹೊಸ ಬಯಕೆಗಳನ್ನು ಹುಟ್ಟು ಹಾಕಲು ಇಡೀ ವಾಣಿಜ್ಯ ಜಗತ್ತು ನಾನಾ ಬಗೆಯ ತಂತ್ರಗಳನ್ನು ಹುಡುಕುತ್ತಲೇ ಇರುತ್ತದೆ. ಪಾಶ್ಚಾತ್ಯ ಜಗತ್ತಿನಲ್ಲಿ ಕ್ರಿಸ್‌ಮಸ್, ಹೊಸವರ್ಷಗಳಲ್ಲಿ ತಾರಕಕ್ಕೇರುತ್ತಿದ್ದ ಸೇಲ್ಸ್ ಪಿಚ್ ಈಗ ವರ್ಷವಿಡೀ ನಡೆಯುತ್ತವೆ. ಟೀವಿ, ಪತ್ರಿಕೆ, ಭಿತ್ತಿಪತ್ರಗಳಲ್ಲಿ ಜಾಹೀರಾತು, ಬ್ರ್ಯಾಂಡ್ ಅಂಬಾಸಡರ್, ಗಿಫ್ಟ್ ಹ್ಯಾಂಪರ್‌ಗಳ ಹಾವಳಿ ಬಿಡಿ; ಚಿಕ್ಕಪುಟ್ಟ ಅಂಗಡಿಗಳ ಶೋಕಿ ಸ್ಯಾಶೆಗಳ ಮಾಲೆಗಳನ್ನು ಬಿಡಿ, ದೊಡ್ಡ ಮಾಲ್‌ಗಳಂತೂ ಈಗ ಮನರಂಜನೆಯ ಮುಖ್ಯ ತಾಣವೇ ಆಗಿವೆ.
ಮಕ್ಕಳಿಗೆ ಅದೇ ಆಟದ ಅಂಗಳ, ಅದೇ ಮ್ಯೂಸಿಯಮ್ಮು, ದೊಡ್ಡವರಿಗೆ ಅದೇ ಪ್ರವಾಸೀ ಕೇಂದ್ರ; ಮನೆಯಲ್ಲಿ ಬೇಸರವಾದರೆ ನೀವು ಉದ್ಯಾನಕ್ಕೊ, ಗ್ರಂಥಾಲಯಕ್ಕೊ, ಕ್ರೀಡಾಂಗಣಕ್ಕೊ, ಬಂಧುಮಿತ್ರರ ಮನೆಗೊ ಹೋಗಬಾರದು. ಮಿತ್ರಕೂಟ, ಪ್ರೇಮ ಸಲ್ಲಾಪ ಎಲ್ಲಕ್ಕೂ ಮಾಲ್‌ಗಳಿಗೇ ಬರಬೇಕು. ಸೆಕ್ಸ್‌ಗಿಂತ ಶಾಪಿಂಗ್ ಮೇಲು; ಏಕೆಂದರೆ ಒಂದರಿಂದ ತೃಪ್ತಿ ಆಗಿಲ್ಲವೆಂದರೆ ಅದರ ಬದಲು ಬೇರೊಂದು ಪಡೆಯಬಹುದು.
ಈಗಂತೂ ಸ್ವಂತೀ (ಸೆಲ್ಫೀ) ಬಂತು. ತಾನು ಇನ್ನೂ ಚಂದ, ಇನ್ನೂ ಬಲಾಢ್ಯ, ಇನ್ನೂ ಆಕರ್ಷಕ ಆಗಬೇಕು, ಇನ್ನೂ ಫಾಸ್ಟಾಗಿ ಹೋಗಬೇಕು ಎಂಬ ರೇಸಿಗೆ ಬಿದ್ದಂತೆ ತಮ್ಮನ್ನು ತಾವೇ ಎಲ್ಲ ಮಾಧ್ಯಮಗಳಲ್ಲಿ ನಿಸ್ಸಂಕೋಚವಾಗಿ ಪ್ರದರ್ಶಿಸಿಕೊಳ್ಳುವ ತವಕ. ಅದಕ್ಕೆ ಪೂರಕವೆಂಬಂತೆ ಈಗಂತೂ ಆನ್‌ಲೈನ್ ಖರೀದಿ. ‘ತಮಗೆ ಆಗದವರನ್ನು ಮೆಚ್ಚಿಸಲೆಂದು, ತಮ್ಮಲ್ಲಿಲ್ಲದ ಹಣವನ್ನು ವ್ಯಯಿಸಿ, ತಮಗೆ ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಸುವುದೇ ಕೊಳ್ಳುಬಾಕತನ’ ಎಂದು ವಿಲ್ಲಿ ರೋಜರ್ಸ್ ಎಂಬಾತ ಈ ಹುಚ್ಚು ಏರುವ ಎಷ್ಟೋ ಮೊದಲೇ ಅದು ಹೇಗೆ ಹೇಳಿದನೊ.
ಭೂಮಿಯನ್ನೇ ಉರುಳುಮಣೆಯ ಮೇಲೆ ಏರಿಸಿ ಪ್ರಪಾತದತ್ತ ಹೊರಳಿಸಿದ ಈ ಕಾಯಿಲೆಗೆ ಮದ್ದು ಎಲ್ಲಿದೆ? ಹಿಂದೆಲ್ಲ ಸರಳತೆಯ ವಿವೇಕವನ್ನು ಬೋಧಿಸುವ ಋಷಿಮುನಿಗಳಿದ್ದರು. ‘ಎಲ್ಲರ ಆಸೆಗಳನ್ನು ಈ ಪೃಥ್ವಿ ಪೂರೈಸಬಲ್ಲದು, ಎಲ್ಲರ ದುರಾಸೆಗಳನ್ನಲ್ಲ’ ಎಂದು ಹೇಳುವ ಗಾಂಧೀಜಿ ಇದ್ದರು. ‘ನಿಮ್ಮ ಹೆಚ್ಚುವರಿ ಆಸ್ತಿಯನ್ನು ಉಚಿತ ಹಂಚಿಬಿಡಿ’ ಎನ್ನುವ ವಿನೋಬಾ ಇದ್ದರು. ‘ಒಳಸುರಿಯನ್ನು ಕಮ್ಮಿ ಮಾಡಿದಷ್ಟೂ ನಮ್ಮ ಆರೋಗ್ಯ ಮತ್ತು ಭೂಮಿಯ ಆರೋಗ್ಯ ವೃದ್ಧಿಸುತ್ತದೆ’ ಎಂದು ಹೇಳುವ ಫುಕುವೊಕ ಇದ್ದರು. ‘ಸರಳ ಬದುಕೇ ಸುಖದ ಬದುಕು’ ಎಂದು ಹೇಳುವ ಸಂತರು, ಸ್ವಾಮೀಜಿಗಳಿದ್ದರು. ಈಗಿನ ಸ್ವಾಮೀಜಿಗಳೆಲ್ಲ ಎಸ್‌ಯುವಿಗಳಲ್ಲೇ ಸಂಚರಿಸುತ್ತಾರೆ. ಯಾರತ್ತ ನೋಡುವುದು?
ಒಂದು ಸರಳ ಉಪಾಯವಿದೆ: ಈಗಿನದೆಲ್ಲ ಸ್ವಂತೀ ಯುಗ ತಾನೆ? ತನ್ನ ಹೆಚ್ಚುಗಾರಿಕೆಯನ್ನು ಪ್ರದರ್ಶಿಸುವ ಖಯಾಲಿ ಹೆಚ್ಚಿದ್ದರಿಂದಲೇ ಭೂಮಿಗೆ ಜ್ವರ ಏರುತ್ತಿದೆ ತಾನೆ? ಹೋಮಿಯೋಪಥಿಯ ತತ್ತ್ವದ ಆಧಾರದಲ್ಲೇ ಈ ಕಾಯಿಲೆಗೆ ಮದ್ದು ಮಾಡಬಹುದು. ನಮ್ಮಲ್ಲಿ ಏನೇನಿಲ್ಲ ಎಂಬುದನ್ನು ಹೆಮ್ಮೆಯಿಂದ ಹೇಳುವ ಮೂಲಕವೇ ನಮ್ಮ ಹೆಚ್ಚುಗಾರಿಕೆಯನ್ನು ಪ್ರದರ್ಶಿಸಬಹುದು. ತುಸು ಪ್ರಯತ್ನಿಸಿದರೆ ಅದೇನೂ ಕಷ್ಟದಲ್ಲ. ಹೊಸ ವರ್ಷದ ಸಂದರ್ಭದಲ್ಲಿ ನಾನಾ ಬಗೆಯ ನಿರ್ಧಾರಗಳನ್ನು ನಾವು ಸರೀಕರೆದುರು ಘೋಷಿಸುತ್ತೇವೆ.
ಏನೇನು ಖರೀದಿ ‘ಮಾಡುವುದಿಲ್ಲ’ ಎಂಬುದರ ಸಣ್ಣದಾದರೂ ಒಂದು ಪಟ್ಟಿಯನ್ನು ನಾವು ತಯಾರಿಸಬಹುದು. ‘ಇನ್ನು ಒಂದು ತಿಂಗಳ ಕಾಲ ಪೆಟ್ರೋಲ್ ಹಾಕಿಸುವುದಿಲ್ಲ’ ಎಂದು ಘೋಷಿಸಿದರಂತೂ ಇಡೀ ನಗರವೇ ತುಸು ನಿರಾಳವಾಗಿ ಉಸಿರಾಡಿಸಬಹುದು. ಬೇಕಿದ್ದರೆ ನಿಮ್ಮ ನಿರ್ಧಾರಗಳನ್ನು ವಾಟ್ಸಪ್‌ನಲ್ಲೋ ಫೇಸ್‌ಬುಕ್‌ನಲ್ಲೊ ಸೇರಿಸಿ ಹೆಮ್ಮೆಪಟ್ಟುಕೊಳ್ಳಿ. ಅನೇಕ ಪಾಶ್ಚಾತ್ಯ ದೇಶಗಳಲ್ಲಿ ‘ಫ್ರೀಮಾರ್ಕೆಟ್’ ಹೆಸರಿನ ಸೆಕೆಂಡ್ ಹ್ಯಾಂಡ್ ಸಂತೆಗಳು ನಡೆಯುತ್ತವೆ. ಒಂದು ಬಡಾವಣೆಯ ಎಲ್ಲರೂ ತಂತಮ್ಮ ಹಳೇ ಸಾಮಾನುಗಳನ್ನು ತರುತ್ತಾರೆ.
ನಿಮಗೆ ಬೇಡವಾದುದನ್ನು ಅಲ್ಲಿಟ್ಟು ಬೇಕಾದುದನ್ನು ಎತ್ತಿಕೊಳ್ಳಬಹುದು. ಒಂದು ರೀತಿಯಲ್ಲಿ ಅದು ಹಣದ ವಹಿವಾಟು ಇಲ್ಲದ ಉಚಿತ ಓಎಲ್‌ಎಕ್ಸ್ ಇದ್ದ ಹಾಗೆ. ಬೆಂಗಳೂರಿನಲ್ಲಿ ಅದೇ ಮಾದರಿಯಲ್ಲಿ ‘ಪುಸ್ತಕ ಪರಿಷೆ’ ನಡೆಯುತ್ತಿದೆ. ಬೇರೆ ವಸ್ತುಗಳ ಪರಿಷೆಯನ್ನೂ ನಡೆಸಬಹುದು. ಸಾಮಾಜಿಕ ತಾಣದಲ್ಲೂ ಪ್ರಯೋಗಿಸಿ ನೋಡಬಹುದು. ಇಂಥ ಮರುಬಳಕೆ ವಿಧಾನದಿಂದ ಕಸಪ್ರಳಯದ ಸಮಸ್ಯೆ ಪೂರ್ತಿ ನೀಗುವುದಿಲ್ಲವಾದರೂ ತುಸುಮಟ್ಟಿಗೆ ಮುಂದೂಡಬಹುದು.
ಕೊನೆಗೊಂದು ಮಾತು: ‘ಬಯಕೆಯೊಂದನ್ನು ಬಿಟ್ಟು ಉಳಿದೆಲ್ಲವನ್ನೂ ನಾನು ಹತ್ತಿಕ್ಕಬಲ್ಲೆ’ ಎಂದು ಆಸ್ಕರ್ ವೈಲ್ಡ್ ಹೇಳಿದ್ದ. ಆತನ ಮಾತೇ ನನ್ನ ಮಾತೂ ಹೌದೆಂದು ನಿಮ್ಮಲ್ಲಿ ಅನೇಕರಿಗೆ ಅನ್ನಿಸಬಹುದು. ಹಾಗೆಂದುಕೊಂಡು, ಆರಂಭದಲ್ಲಿ ವಿವರಿಸಿದ ಈ ಉರುಳುಮಣೆಯನ್ನು ಖರೀದಿಸಲು ಹೊರಟಿರಾ? ನಿಲ್ಲಿ, ಅದು ನಿಮ್ಮೂರಿನ ಮಾಲ್‌ಗಳಲ್ಲಿ ಸಿಗಲಿಕ್ಕಿಲ್ಲ. ಏಕೆಂದರೆ ಅದರಲ್ಲೊಂದು ವಿಚಿತ್ರ ವಿಪರ್ಯಾಸ ಇದೆ. ಉರುಳುಮಣೆಯನ್ನು ಬಳಸಬೇಕೆಂದರೆ ಅದಕ್ಕೆ ಸಪಾಟು ನೆಲ, ಏರುತಗ್ಗಿಲ್ಲದ ಫುಟ್‌ಪಾತ್ ಹಾಗೂ ಹೊಂಡಗುಂಡಿಗಳಿಲ್ಲದ, ದೂಳುಕಸವಿಲ್ಲದ ರಸ್ತೆ ಬೇಕು.
ನಮ್ಮಲ್ಲಿ ಅಂಥ ಮೋಜಿನ ಗಾಡಿ ಏರಿದರೆ ಹತ್ತು ಮಾರು ಕೂಡ ಸಾಗುವಂತಿಲ್ಲ. ಏಕೆಂದರೆ ಸಪಾಟು ರಸ್ತೆಗೆ ಹಾಗೂ ಕಸ ವಿಲೇವಾರಿಗೆ ಸುರಿಯುವ ಅಷ್ಟೊಂದು ಸಾವಿರ ಕೋಟಿ ರೂಪಾಯಿಗಳಲ್ಲಿ ಬಹುಪಾಲು ಹಣವೆಲ್ಲ ಸೋರಿಕೆಯಾಗಿ ಅದು ಯಾವುದೋ ಅಧಿಕಾರಿ, ಮಧ್ಯವರ್ತಿ, ಗುತ್ತಿಗೆದಾರ, ರಾಜಕಾರಣಿಯ ಹೆಂಡಿರು ಮಕ್ಕಳ ಎಂದೂ ಇಂಗದ ಹಸಿವೆಯನ್ನು, ಕೊಳ್ಳುಬಾಕ ಪ್ರವೃತ್ತಿಯನ್ನು ಪೋಷಿಸುತ್ತ ಹೋಗುತ್ತದೆ. ಉರುಳುಮಣೆ ಅಲ್ಲಿ ಓಡಲಾರದು. ಅದು ಸಪಾಟು ನೆಲವನ್ನು, ಒಂದರ್ಥದಲ್ಲಿ ಸಮತಾ ಸಮಾಜವನ್ನು ಬಯಸುತ್ತದೆ.
Courtersy: www.prajavani.net