Cruelty against animals |
ಇತ್ತೀಚೆಗೆ ಚೆನ್ನೈನಲ್ಲಿ ವೈದ್ಯಕೀಯ ವಿದ್ಯಾರ್ಥಿಗಳಿಬ್ಬರು ಎರಡನೆಯ ಮಹಡಿಯಿಂದ ತಮ್ಮನ್ನು
ನಂಬಿ ಬಂದ ನಾಯಿಯನ್ನು ಎಸೆದು ಖುಷಿಪಟ್ಟ ಹಿನ್ನೆಲೆಯಲ್ಲಿ ಅವರ ಮಾನಸಿಕ ಸ್ಥಿತಿಯನ್ನುಕುರಿತು
ಆಲೋಚಿಸುವಂತಾಗಿದೆ.
being cruel to a dog |
ಅಮೆರಿಕದ ಬೋಸ್ಟನ್ ನಗರದ ನ್ಯಾಯಾಲಯವೊಂದರಲ್ಲಿ ಆರೋಪಿಯಾಗಿ ನಿಂತಿದ್ದ
ಆಲ್ಬರ್ಟ್ ಡಿಸಾಲ್ಟೋನ ಮೇಲಿದ್ದ ಆಪಾದನೆಗಳ ಪಟ್ಟಿ ಸಾಕಷ್ಟು ಉದ್ದವಿತ್ತು. ೧೩ ಜನ ಮಹಿಳೆಯರ
ಕೊಲೆಯ ಆರೋಪಗಳಿದ್ದವು. ಸೀರಿಯಲ್ ಕಿಲ್ಲರ್ ಆಗಿದ್ದ ಆತ ಹುಡುಗುತನದಲ್ಲಿ ನಾಯಿ ಮತ್ತು
ಬೆಕ್ಕುಗಳನ್ನು ಡಬ್ಬಗಳಲ್ಲಿ ಕೂಡಿಟ್ಟು ಬಾಣಬಿಟ್ಟು ಕೊಲ್ಲುತ್ತಿದ್ದ. ಜೆಫ಼ರಿ ದಾಮರ್ ಎಂಬ ಸರಣಿ
ಹಂತಕ ಮೊದಲು ಕಪ್ಪೆ,ನಾಯಿ ಹಾಗು ಬೆಕ್ಕುಗಳನ್ನು ಕೊಂದು ಕೋಲಿಗೆ ಅವುಗಳ ತಲೆಗಳನ್ನು
ನೇತುಹಾಕುತ್ತಿದ್ದ. ಅಮೆರಿಕೆಯ ಬಹುತೇಕ ಶಾಲೆಗಳಲ್ಲಿಕ್ರೌರ್ಯವನ್ನು ಮೆರೆದು , ಶಾಲೆಯ ಇತರ
ಮಕ್ಕಳನ್ನೂ , ಸಿಬ್ಬಂದಿಯನ್ನೂ ಗುಂಡಿಟ್ಟು ಕೊಂದ ಬಾಲಕರು ಮೊದಲಿಗೆ ಬೆಕ್ಕುಗಳನ್ನೋ,
ನಾಯಿಗಳನ್ನೋ ಕ್ರೂರವಾಗಿ ಹಿಂಸಿಸಿ ಕೊಂದಿರುತ್ತಾರೆನ್ನುವುದನ್ನುಮನೋವಿಜ್ಞಾನಿಗಳು
ಧೃಡಪಡಿಸಿದ್ದಾರೆ.ಕಿಪ್ ಕಿಂಕೆಲ್, ಲೂಕ್ ವುಢ್ ಹಾಮ್ ನಂತಹ ಪ್ರೌಢಶಾಲಾ ಬಾಲಕರು ತಮ್ಮ ಗುಂಡಿನ
ಮಳೆಗರೆವ ಮುನ್ನ ಪ್ರಾಣಿಗಳನ್ನು ಹಿಂಸಿಸಿದ್ದಾಗಿ ಹೇಳಿಕೊಂಡಿದ್ದಾರೆ.ತಮ್ಮ
ಸಹಪಾಠಿಗಳನ್ನುಕೊಲ್ಲುವ ಮೊದಲುಎರಿಕ್ ಹ್ಯಾರಿಸ್ ಮತ್ತು ಡೈಲನ್ ಕ್ಲೆಬೋಲ್ಡ್ ತಾವು
ಪ್ರಾಣಿಗಳನ್ನು ಹೇಗೆ ತುಂಡರಿಸಿದ್ದೇವೆಂದು ಕೊಚ್ಚಿಕೊಂಡಿದ್ದಾರೆ. ಶಾಲಾ ಕಾಲೇಜು ಹಂತದಲ್ಲೂ ಅನಂತರವೂ
ಕ್ರೂರ ಧಾಳಿಗಳನ್ನೂ , ಕೊಲೆಗಳನ್ನೂ, ಹಿಂಸಾ ಕೃತ್ಯಗಳನ್ನೂ ಮಾಡಿರುವ ವ್ಯಕ್ತಿಗಳು ಈ ಘಟನೆಗಳಿಗೂ
ಮೊದಲು ಬೆಕ್ಕು, ನಾಯಿಗಳಂತಹ ಸಾಕುಪ್ರಾಣಿಗಳನ್ನು ವಿನಾಕಾರಣ ಹಿಂಸಿಸಿ , ಇಲ್ಲವೇ ಕೊಂದು ವಿಕೃತ
ಆನಂದವನ್ನು ಅನುಭವಿಸಿರುತ್ತಾರೆಂಬುದು ಧೃಡಪಟ್ಟಿದೆ.
Neglect is also abuse |
ಮಾನಸಿಕ ರೋಗಿಗಳಾದ ಇಂಥವರು ಪದೇ ಪದೇ ನಾಯಿಗಳನ್ನೂ ಬೆಕ್ಕುಗಳನ್ನೂ
ಹಿಂಸಿಸುವುದರೊಂದಿಗೆ ಜನರೆಡೆಗೂ ಆಕ್ರಮಣಶೀಲರಾಗಿ ನಡೆದುಕೊಳ್ಳುತ್ತಾರೆ.ಹಿಂಸೆ, ಕ್ರೌರ್ಯ,
ವ್ಯಗ್ರತೆಗಳೇ ವೈಭವಿತವಾಗಿ ಅವರಿಗೊಂದು ರೀತಿಯ ಆನಂದ ಉಂಟಾಗುತ್ತದೆ. ಮತ್ತೊಬ್ಬರಿಗೆ
ನೋವುಕೊಡುವುದಾಗಲೀ , ಹಿಂಸಿಸುವುದಾಗಲೀ , ದೈಹಿಕ ಹಾಗೂ ಮಾನಸಿಕ ಆಘಾತವೀಯುವುದಾಗಲೀ ಅಷ್ಟೇ ಏಕೆ,
ಕೊಲ್ಲುವುದು ಕೂಡಾ ಇವರಿಗೆ ಅಪರಾಧವೆನಿಸುವುದೇ ಇಲ್ಲ. ರಾಬರ್ಟ್. ಕೆ. ರೆಸ್ಲರ್ ಎಂಬ
ಮನೋವಿಜ್ಞಾನಿಯು ಅಮೆರಿಕದ ಎಫ಼್.ಬಿ. ಐ ಗಾಗಿ ಸರಣಿ ಹಂತಕರ ಹಿನ್ನೆಲೆಯನ್ನೊದಗಿಸುತ್ತಾರೆ. ಅವರು
ಹೇಳುವಂತೆ ನರಹತ್ಯೆಗೈಯುವ ಅಪರಾಧಿಗಳಲ್ಲಿ ಪ್ರಾಣಿಕ್ರೌರ್ಯದ ಚರಿತ್ರೆಯಿರುತ್ತದೆ. ಸರಣಿ ಹಂತಕರು ಮತ್ತು ಅತ್ಯಾಚಾರಿಗಳಲ್ಲಿ ಮೊದಲಿಗೆ
ಪ್ರಾಣಿಹಿಂಸಾನಂದ ಕಾಣಿಸಿಕೊಂಡಿರುತ್ತದೆ. ಸುಲಭವಾಗಿ ಹೇಳಬೇಕೆಂದರೆ, ಇಂಥವರು ಮಕ್ಕಳಾಗಿದ್ದಾಗ
ನಾಯಿಯ ಕಣ್ಣಿಗೆ ತಿವಿಯುವುದು ತಪ್ಪು ಎಂದು ಎಂದಿಗೂ ಕಲಿಯದಿರುವವರು. ರೆಸ್ಲರ್ “ ಕೊಲೆಗಾರರು
ಕೊಲ್ಲಲಾರಂಭಿಸುವುದು ಮೊದಲು ಪ್ರಾಣಿಗಳನ್ನು ಹಿಂಸಿಸುವುದರ ಮೂಲಕ” ಎನ್ನುತ್ತಾನೆ. ಅಪರಾಧ
ವಿಜ್ಞಾನ ಮತ್ತು ಮನೋವಿಜ್ಞಾನದ ಸಂಶೋಧನೆಗಳ ಪ್ರಕಾರ ಪ್ರಾಣಿಗಳೆಡೆಗೆ ಕ್ರೌರ್ಯವೆಸಗುವ
ವ್ಯಕ್ತಿಗಳು ಅಲ್ಲಿಗೆ ನಿಲ್ಲುವುದಿಲ್ಲ. ತಮ್ಮ ಜೊತೆಗಾರ ಮಾನವರಿಗೂ ಕ್ರೌರ್ಯವೆಸಗುವರು. ತಮ್ಮ
ಸಹಪಾಠಿಗಳಿಗೆ , ತಮ್ಮ ಪತ್ನಿ ಅಥವಾ ಪ್ರೇಯಸಿಗೆ, ತಮ್ಮ ಸ್ವಂತ ಮಕ್ಕಳಿಗೇ ಅಸಹನೀಯವೆನಿಸುವ ಬದುಕನ್ನು
ಕೊಡುವವರಾಗಿರುತ್ತಾರೆ. ಕೆಲವೊಮ್ಮೆ ದೈಹಿಕ ಹಿಂಸೆಯಿರಬಹುದು, ಮತ್ತೆ ಕೆಲವು ಸಲ ನಿಂದನೆಯಿರಬಹುದು
ಅಥವ ಅಗಾಧ ಉದಾಸೀನತೆಯಿಂದ ಅವರ ಸ್ಥಿತಿಯನ್ನು ಹೀನಾಯಗೊಳಿಸಬಹುದು. ಕ್ರೌರ್ಯವೇನೇ ಇರಲಿ, ಅದರ
ಹಿಂದೆ ಅಸ್ವಸ್ಥ ಮನಃಸ್ಥಿತಿಯಂತೂ ಇದ್ದೇ ಇರುತ್ತದೆ.
Chennai based animal abuser |
ಸಾಮಾಜಿಕ ಜಾಲ ತಾಣಗಳಲ್ಲಿ ತೀವ್ರ ಖಂಡನೆಗೊಳಗಾದ ಚೆನ್ನೈನಲ್ಲಿ
ಮಹಡಿಯಿಂದ ನಾಯಿಯನ್ನು ಎಸೆದ ವಿಡಿಯೋಚಿತ್ರೀಕರಣವು , ಆ ಇಬ್ಬರು ವಿದ್ಯಾರ್ಥಿಗಳವಿರುದ್ಧ ಕಾನೂನು
ಕ್ರಮ ಕೈಗೊಳ್ಳುವಷ್ಟು ಶಕ್ತವಾಯಿತು. ಆ ಕ್ರೂರ ವಿಡಿಯೋ ತುಣುಕನ್ನು ವೀಕ್ಷಿಸಿದವರೆಲ್ಲರೂ ಅತ್ಯಂತ
ಕಟುಮಾತುಗಳಲ್ಲಿ ಆ ಹೀನ ಕೃತ್ಯವನ್ನು ಖಂಡಿಸಿದರು. ಬಂಧನದ ವಾರಂಟ್ ಮೂಲಕ ಪೋಲಿಸರು ಅವರನ್ನು ಬೆನ್ನಟ್ಟಿ
ಹುಡುಕಿದ್ದೂ ಆಯಿತು. ಮ್ಯಾಜಿಸ್ಟ್ರೇಟರ ಮುಂದೆ ಹಾಜರುಪಡಿಸಿದ್ದೂ ಆಯಿತು. ಆದರೆ ನಮ್ಮ ದೇಶದ
ಓಬೀರಾಯನ ಕಾಲದ ಕಾನೂನು – ಕಟ್ಟಳೆಗಳಲ್ಲಿರುವ ದೌರ್ಬಲ್ಯದಿಂದಾಗಿ ಕೇವಲ ೫೦ ರೂ ಗಳನ್ನು
ದಂಡವಿಧಿಸಿ ಬಿಟ್ಟಿದ್ದೂ ಆಯಿತು. ಈ ಬಿಡಿಗಾಸಿನ ದಂಡ ಪಾವತಿಯ ಬಗ್ಗೆ ಹಲವರು ಆಕ್ರೋಶ
ವ್ಯಕ್ತಪಡಿಸಿದ್ದಾರೆ. ಕಠಿಣ ಶಿಕ್ಷೆ ವಿಧಿಸಬೇಕಿತ್ತು ಎಂದು ಕಿಡಿಕಾರಿದ್ದಾರೆ. ಕೆಲವು
ಅಂತರ್ಜಾಲೀಯ ಪತ್ರಿಕೆಗಳ ವರದಿಯಂತೆ ಆ ಇಬ್ಬರು ವಿದ್ಯಾರ್ಥಿಗಳನ್ನು ಅವರು ಓದುತ್ತಿದ್ದ
ವೈದ್ಯಕೀಯ ಕಾಲೇಜು ಅಮಾನತುಗೊಳಿಸಿದೆ. ಇದೆಲ್ಲಾ ಶಿಕ್ಷೆಯ ವಿಚಾರವಾಯಿತು. ಆ ಇಬ್ಬರ ಮನೋವೈಜ್ಞಾನಿಕ ಪರೀಕ್ಷೆಯನ್ನು ಅಗತ್ಯವೆಂದು ಯಾರೂ
ಏಕೆ ಪರಿಗಣಿಸುತ್ತಿಲ್ಲ? ಇದೊಂದು ಗಂಭೀರ ವಿಚಾರ. ಆ ಯುವಕರು ಇದೇ ಮನಃಸ್ಥಿತಿಯನ್ನು
ಹೊಂದಿದ್ದರೆ, ಮುಂದೊಮ್ಮೆ ತಮ್ಮ ಮಡದಿಯರನ್ನೋ, ಮಕ್ಕಳನ್ನೋ ಹಿಂಸಿಸಲಾರರೆಂಬುದನ್ನು
ನಂಬುವಂತಿಲ್ಲ. ಆ ನಾಯಿಯಂತೆಯೇ ತಮ್ಮನ್ನು ನಂಬಿ ಬಂದವರಿಗೆ ಕ್ರೌರ್ಯವೆಸಗುವುದನ್ನು
ಅಲ್ಲಗಳೆಯುವಂತಿಲ್ಲ. ನರಹತ್ಯೆ ಮಾಡುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಅವರನ್ನು
ಮನೋವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಬೇಕು. ಅದಕ್ಕೆ ತಕ್ಕ ಚಿಕಿತ್ಸೆಯನ್ನೂ , ಆಪ್ತ ಸಲಹೆಯನ್ನೂ
ನೀಡಬೇಕು.
"Bhadra" in safe hands |
ಈಗ “ಭದ್ರ” ಎಂದು ನಾಮಕರಣ ಮಾಡಲಾದ ಆ ನಾಯಿಯು ವಾತ್ಸಲ್ಯಭರಿತ
ಕೈಗಳಲ್ಲಿ ಶುಶ್ರೂಶೆ ಪಡೆಯುತ್ತಿದೆ. ಬಾಲ ಅಲ್ಲಾಡಿಸುತ್ತಲೇ ಚೇತರಿಸಿಕೊಳ್ಳುತ್ತಿದೆ. ಪ್ರೀತಿ- ವಿಶ್ವಾಸಗಳನ್ನು
ಕಾಣುತ್ತಿದೆ. ಮರಳಿ ಆಶ್ರಯವನ್ನು ಪಡೆಯುತ್ತಿದೆ. ಇದು ಸಂತಸದ ಸುದ್ದಿ. ಅದೇ ಚಿಕಿತ್ಸೆಯು
ನಾಯಿಯನ್ನು ತಳ್ಳಿದವರಿಗೂ ಅಗತ್ಯ. ಕ್ರೂರ ಮನಸ್ಸನ್ನು ಪರಿವರ್ತಿಸಿದಲ್ಲಿ ಇನ್ನೆಂದೂ
ಇನ್ನಾರಿಗೂಅಂತಹ ಹಿಂಸಾತ್ಮಕ ಅನುಭವ ಕೊಡಲಾರರು. ನಾಯಿಯನ್ನು ಮಹಡಿಯಿಂದ ಎಸೆದ ವ್ಯಕ್ತಿಗಳಿಗೆ ಮನೋಚಿಕಿತ್ಸೆ ಅತ್ಯವಶ್ಯ.
Care can heal all wounds |
ಮಾನವ – ಮಾನವ ಸಂಬಂಧಗಳಷ್ಟೇ ಮುಖ್ಯ ಮಾನವ – ಪರಿಸರ ಸಂಬಂಧ. ನಮ್ಮ
ಸುತ್ತಲಿನ ಪ್ರಾಣಿ – ಪಕ್ಷಿಗಳನ್ನು ಪ್ರೀತಿ ವಿಶ್ವಾಸದಿಂದ ನಡೆಸಿಕೊಳ್ಳುವುದೂ , ವನ್ಯ ಜೀವಿಗಳ
ಆವಾಸಕ್ಕಾಗಲೀ, ಆಹಾರಕ್ಕಾಗಲೀ ಕುಂದು ಉಂಟಾಗದಂತೆ ನಡೆದುಕೊಳ್ಳುವುದೂ ಅಷ್ಟೇ ಮುಖ್ಯ. ವಿನಾ ಕಾರಣ
ಗಿಡಗಳ ಎಲೆ, ಹೂ, ಹೀಚು ಕೀಳುವುದು, ಕಾಂಡಕ್ಕೆ ಘಾಸಿಗೆಳಿಸುವುದು, ಮರಗಳ ರೆಂಬೆ ಮುರಿಯುವುದು –
ಇಂತಹ ಕ್ರಿಯೆಗಳನ್ನು ತಪ್ಪೆಂದು ಮಕ್ಕಳಿಗೆ ಚಿಕ್ಕಂದಿನಿಂದಲೇ ತಿಳಿಹೇಳುವುದು ಮುಖ್ಯ.
ಒಟ್ಟಿನಲ್ಲಿ ನಮ್ಮಂತೆಯೇ ಸಕಲ ಜೀವಿಗಳನ್ನೂ ನೋಯಿಸದಂತೆ ನಡೆದುಕೊಳ್ಳಬೇಕೆಂಬ ಶಿಕ್ಷಣ ಅತ್ಯಗತ್ಯ.
ಗೀತಾ. ಎಚ್
ಹಸಿರು ಹೆಜ್ಜೆ
ಮೈಸೂರು
No comments:
Post a Comment