ಸುವರ್ಣ ಗೆಡ್ಡೆ ಹೂ ಅರಳುವ ಮುನ್ನ |
ಕಳೆದಬಾರಿ
ಮೈಸೂರಿನ ಬಳಿ ಇರುವ ಗದ್ದಿಗೆಯಲ್ಲಿರುವ ಗೆಳೆಯರ ತೋಟವನ್ನು ನೋಡಲು ಹೋದಾಗ ಅನತಿ ದೂರದಿಂದಲೇ ಅದೆಂತದೋ
ವಾಸನೆ ಬರಲಾರಂಭಿಸಿತ್ತು. ಯಾವುದೋ ಪ್ರಾಣಿ ಹತ್ತಿರದಲ್ಲೇ ಸತ್ತು ಬಿದ್ದಿರಬೇಕೆಂಬ ನಮ್ಮ ತರ್ಕ ಸುಳ್ಳಾಯಿತು.
ತೋಟವನ್ನು ಪ್ರವೇಶಿಸುತ್ತಿದ್ದಂತೆಯೇ ಸ್ವಲ್ಪ ದೊಡ್ಡದೇ ಆದ ಕಂದುಗೆಂಪು ಮಿಶ್ರಿತ ಹೂವೊಂದು ಕಾಣಿಸಿತು.
ಹತ್ತಿರ ಹೋದಂತೆಯೂ ಕೊಳೆತ ಮಾಂಸದ ದುರ್ವಾಸನೆ ಹೆಚ್ಚಾಯಿತು. ಗಮನಿಸಿದರೆ ಹೂವಿನಮೇಲೆ ಕೀಟಗಳು ಪರಾಗ
ಸ್ಪರ್ಶ ಕ್ರಿಯೆಯಲ್ಲಿ ತೊಡಗಿವೆ! ಕೆಟ್ಟ ವಾಸನೆಯ ಈ ಹೂವು ಯಾವುದು ಎಂದು ವಿಚಾರಿಸಿದಾಗ ತಿಳಿದದ್ದು,
ಅದು ಸುವರ್ಣ ಗೆಡ್ಡೆ ಹೂವೆಂದು. ಗಿಡವೆಲ್ಲಿ ಎಂದು ನೋಡಿದಾಗ ಸ್ವಲ್ಪ ಹತ್ತಿರದಲ್ಲೇ ಇದ್ದ ಪುಟ್ಟ
ಮರದಂತೆ ಎಲೆ ಪಸರಿಸಿದ್ದ ಅದರ ಸಸ್ಯ ಕಾಣಬಂತು. ಆಗ ನೆನಪಾಗಿದ್ದು ನನ್ನ ಮಗಳು.
ಸುವರ್ಣ ಗೆಡ್ಡೆ ಸಸ್ಯ |
ಎಲಿಫೆಂಟ್ ಫುಟ್ ಯ್ಯಾಮ್, ವೈಟ್ ಸ್ಪಾಟ್ ಜೈಂಟ್ ಏರಮ್, ಗೋಲ್ಡನ್ ಯ್ಯಾಮ್ ಎಂದೆಲ್ಲ ಆಂಗ್ಲ ಭಾಷೆಯಲ್ಲಿ ಕರೆಯಲ್ಪಡುವ ಸುವರ್ಣ ಗೆಡ್ಡೆಯನ್ನು 'ಅಮೋರ್‌ಫೋಫಲ್ಲುಸ್ ಪೈಯಾನಿಫಲಿಯಸ್' (Amorphophallus paeoniifolius) ಎಂಬ ಸಸ್ಯಶಾಸ್ತ್ರೀಯ ನಾಮಧೇಯದಿಂದ ಕರೆಯಲಾಗುತ್ತದೆ. ಏಕದಳ ಸಸ್ಯಗಳ ವರ್ಗಕ್ಕೆ ಸೇರಿದ ಈ ಗೆಡ್ಡೆಯು ಎರೇಸೀ (Araceae
) ಕುಟುಂಬಕ್ಕೆ ಸೇರಿದೆ. ದಕ್ಷಿಣ ಆಫ್ರಿಕಾ, ದಕ್ಷಿಣ ಹಾಗೂ ಆಗ್ನೇಯ ಏಶಿಯಾ ಹಾಗೂ ಶಾಂತಸಾಗರದ ದ್ವೀಪಗಳಲ್ಲಿ ಬೆಳೆಸಲ್ಪಡುವ ಈ ಗೆಡ್ಡೆಯು ಭಾರತ, ಫಿಲಿಪೀನ್ಸ್, ಮಲೇಶಿಯಾ,ಇಂಡೊನೇಷಿಯ, ಶ್ರೀಲಂಕಾ ಮೊದಲಾದ ರಾಷ್ಟ್ರಗಳಲ್ಲಿ ಬೆಳೆಯಲಾಗುತ್ತಿದೆ.
ಶಿಲೀಂಧ್ರ ಹಾಗೂ ಲಾಡಿಹುಳುಗಳ ರೋಗಗಳನ್ನು ಹೊರತುಪಡಿಸಿದರೆ ಹೆಚ್ಚಿನ ರೋಗಬಾಧೆ ಇರುವುದಿಲ್ಲ. ತೇವದಿಂದ ಕೂಡಿದ
ಉಷ್ಣಪ್ರದೇಶದ ಬೆಳೆ ಇದಾಗಿದ್ದು ಸುಲಭವಾಗಿ ನಮ್ಮ ಮನೆಗಳ ಕೈತೋಟಗಳಲ್ಲೂ ಬೆಳೆಸಬಹುದಾಗಿದೆ. ಭೂಮಿಯೊಳಗೆ
ಹುದುಗಿ ಬೆಳೆವ ಗೆಡ್ಡೆಯು ಬಹುವಾರ್ಷಿಕ ಸಸ್ಯ. ಕಾಂಡದಂತೆ ಕಾಣುವ ತಿಳಿಹಸಿರು- ಬಿಳಿ ಮಚ್ಚೆಗಳಿಂದ
ಕೂಡಿದ ಎಲೆಯ ತೊಟ್ಟು ಸಾಕಷ್ಟು ದಪ್ಪವಾಗಿರುತ್ತದೆ. ಪುಟ್ಟಮರದಂತೆ ಕಾಣುವ ಎಲೆಯು ೩ ಕವಲೊಡೆದು ಮತ್ತೆ
ಕವಲಾಗಿ ಚೆದುರಿ ಸೊಂಪಾಗಿ ಬೆಳೆಯುತ್ತದೆ. ವಾರ್ಷಿಕವಾಗಿ ಹೂ ತಳೆಯುವುದಾದರೂ ಪ್ರತಿವರ್ಷವೂ ಹೂವರಳಿಸಬೇಕೆಂಬ
ನಿಯಮವೇನಿಲ್ಲ. ತಾಳಗುಚ್ಛದ ಹೊದಿಕೆಯುಳ್ಳ ಹೂವು ತಿಳಿಗೆಂಪು ಬಿಳಿಯ ಲಂಗ ಹಾಕಿರುವಂತೆ ಕಾಣುತ್ತದೆ.
ಮಧ್ಯೆ ಗಾಢ ಕೆಂಪಿನ ನೆರಿಗೆಯುಳ್ಳ ಗಾಳಿಹೋಗುತ್ತಿರುವ ಬಲೂನಿನಂತೆ ಕಾಣುವ ಹೂಗುಚ್ಛ ಕಂಡುಬರುತ್ತದೆ. ಈ ಹೂವು ಸಾಕಷ್ಟು ದೊಡ್ಡದು, ೨ ರಿಂದ ೩
ಅಡಿ ವ್ಯಾಸವುಳ್ಳದ್ದು. ವಿಶೇಷವೆಂದರೆ ಸುಮಾರು ೫ ದಿನಗಳ ಕಾಲ ಬಾಡದೆ ಉಳಿಯುವ ಈ ಹೂವು ಅರಳಿದ ಮೊದಲ
ಕೆಲವು ಗಂಟೆಗಳ ಕಾಲ ಕೊಳೆತ ಮಾಂಸದ ದುರ್ವಾಸನೆ ಹೊರಡಿಸುತ್ತದೆ. ಈ ಗಂಧವು ಪರಾಗಸ್ಪರ್ಶಕ್ಕೆ ಮಾಂಸಾಹಾರೀ
ಕೀಟಗಳನ್ನು ಹೂವಿನೆಡೆಗೆ ಸೆಳೆಯುವ ಸಾಧನ.
ಅರಳಿದ ಹೂ |
ವರ್ಷಗಳ ಹಿಂದಿನ ಮಾತು. ತರಕಾರಿ ತರಲೆಂದು ಮಗಳ ಜೊತೆ ಹೋದಾಗ " ಏನಮ್ಮಾ ಇದು? ಸಗಣಿ ಥರ ಇದೆಯಲ್ಲ?" ಎಂದು ಕೇಳಿದ್ದಳು. "ಅದು ಸಗಣಿ ಅಲ್ಲ ಪುಟ್ಟಿ, ಅದೊಂದು ತರಕಾರಿ" ಎಂದಾಗ, " ಕೆಮ್ಮಣ್ಣು ಮೆತ್ತಿದ್ದಾರೇನಮ್ಮ?" ಎಂದು ಕಣ್ಣರಳಿಸಿ ಕೇಳಿದ ಮಗಳಿಗಾಗಿ ಅದೇ ತರಕಾರಿಯನ್ನು ಕೊಂಡು ಮನೆಗೆ ತೆರಳಿದ್ದೆ. ನಲ್ಲಿ ನೀರಿನ ಕೆಳಗೆ ಹಿಡಿದು ತಿಕ್ಕಿ, ಉಜ್ಜಿ ತೊಳೆದದ್ದೇ ಅದರ ಸಿಪ್ಪೆ ಇರುವುದೇ ಹಾಗೆಂದು ಮಗಳಿಗೆ ಮನವರಿಕೆಯಾಗಿತ್ತು. ಹೆಚ್ಚಲು ತೊಡಗಿದ ನನಗೆ ಕೈ ಕೆರೆತ ಶುರುವಾದಾಗ ಮಗಳೆಂದಳು, " ಹೋಗಮ್ಮಾ, ಎಂಥದ್ದು ಇದು? ನೋಡೋಕು ಕಜ್ಜಿ, ಹೆಚ್ಚಿದ್ರು ಕಜ್ಜಿ, ಇನ್ನು ತಿಂದರೆ ಏನಾಗುತ್ತೋ!?" ಇಷ್ಟೆಲ್ಲ ಹೇಳಿಸಿಕೊಂಡ ತರಕಾರಿಯೇ ಸುವರ್ಣ ಗೆಡ್ಡೆ. ಇತ್ತೀಚೆಗೆ ಗದ್ದಿಗೆಯಲ್ಲಿರುವ ಗೆಳೆಯರ ತೋಟದಲ್ಲಿ ಅರಳಿದ ಹೂವನ್ನು ನೋಡಿ , ಹೀಗೆಲ್ಲಾ ಇದ್ದರೂ ಇದನ್ನು ಆಹಾರದಲ್ಲಿ ಉಪಯೋಗಿಸಲು ಕಾರಣವೇನು ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡಿತು.
ಸುವರ್ಣ ಗೆಡ್ಡೆ |
ಸುವರ್ಣ ಗೆಡ್ಡೆಯೊಂದು ಪೋಷಕಾಂಶಗಳ ಆಗರ. ಶರ್ಕರ ಪಿಷ್ಟಗಳು, ಪ್ರೋಟೀನ್, ಕೊಬ್ಬಿನಂಶ ಇರುವುದಲ್ಲದೆ ಪೊಟಾಷಿಯಂ, ಕ್ಯಾಲ್ಶಿಯಮ್, ರಂಜಕ, ಕಬ್ಬಿಣ ಮೊದಲಾದ ಖನಿಜಾಂಶಗಳು ಹೇರಳವಾಗಿವೆ. ನಾರಿನಂಶವೂ ಸೇರಿದ್ದು ಜೀರ್ಣಿಸಲು ಸಹಕಾರಿಯಾಗಿದೆ. ಹೋಳುಗಳಾಗಿ ಹೆಚ್ಚಿದಾಗ ಕೈ ಕೆರೆತ, ತಿಂದಾಗ ಬಾಯಿ, ಗಂಟಲಲ್ಲಿ ಕೆರೆತ ಉಂಟಾಗಬಹುದು. ಅದಕ್ಕೆ ಕಾರಣ ಅದರಲ್ಲಿರುವ ಕ್ಯಾಲ್ಶಿಯಮ್ ಆಕ್ಸಲೆಟ್ನ ಹರಳುಗಳು. ಉಪಯೋಗಿಸುವ ಮೊದಲು ಚೆನ್ನಾಗಿ ಶುದ್ಧ ನೀರಿನಿಂದ ತೊಳೆದು, ಅರಿಶಿನದ ನೀರಿನಲ್ಲಿ ನೆನೆಸಿಟ್ಟು ತೊಳೆದಲ್ಲಿ ಈ ತೊಂದರೆಯನ್ನು ನಿವಾರಿಸಬಹುದು.
ಫ್ಲವಾನಾಯ್ಡ್ಗಳು (flavonoids),ಟ್ಯಾನಿನ್ಗಳು (tannins), ಪ್ರೋಟೀನಿನಂತಹ ಅಂಶಗಳನ್ನು ಹೊಂದಿರುವುದರಿಂದ
ಸುವರ್ಣ ಗೆಡ್ಡೆಗೆ ಅನೇಕ ಔಷಧೀಯ ಗುಣಗಳಿವೆ. ಸಾಂಪ್ರದಾಯಿಕ ಔಷಧೀಯ ಪದ್ಧತಿಗಳಲ್ಲಿ ಸುವರ್ಣ ಗೆಡ್ಡೆಯನ್ನು
ಮೊಳೆರೋಗ, ಕಿಬ್ಬೊಟ್ಟೆಯ ತೊಂದರೆಗಳು, ದೇಹದಲ್ಲಿನ ಗೆಡ್ಡೆಗಳು, ಆಸ್ತಮ, ಸಂಧಿವಾತ, ಉರಿಯೂತ, ಮಲಬದ್ಧತೆ
ಮುಂತಾದ ರೋಗಗಳ ನಿವಾರಣೆಯಲ್ಲಿ, ನೋವು ನಿವಾರಕವಾಗಿ, ಸೆಳವು ನಿರೋಧಕವಾಗಿ, ಲಾಡಿಹುಳಗಳ ನಿವಾರಣೆಗಾಗಿ,
ಖಿನ್ನತೆಯ ನಿವಾರಣೆಯಲ್ಲಿ, ಹೀಗೆ ಹತ್ತು ಹಲವು ಪ್ರಯೋಜನಗಳನ್ನು ಕುರಿತು ಸಂಶೋಧನೆಗಳು ನಡೆಯುತ್ತಲೇ
ಇವೆ.
ಕೂಟು |
ಹೀಗೆಲ್ಲ ಇರುವ
ಸುವರ್ಣಗೆಡ್ಡೆಯನ್ನು ವಿವಿಧ ರೀತಿಯ ಅಡುಗೆ ಪದಾರ್ಥಗಳ ತಯಾರಿಕೆಯಲ್ಲಿ ಬಳಸುತ್ತಾರೆ. ಪಲ್ಯ, ಗೊಜ್ಜು,
ಸಾಂಬಾರ್, ಚಿಪ್ಸ್ ನಂತಹ ರುಚಿಕರ ತಿನಿಸುಗಳನ್ನು ತಯಾರಿಸಲಾಗುತ್ತದೆ. ಸುವರ್ಣಗೆಡ್ಡೆಯನ್ನು ಬಳಸಿ
ಮಾಡುವ ಪಾಕವಿಧಾನವೊಂದು ಹೀಗಿದೆ.
ಸುವರ್ಣಗೆಡ್ಡೆಯನ್ನು
ಚೆನ್ನಾಗಿ ತೊಳೆದು, ಸಿಪ್ಪೆ ತೆಗೆದು ೨ ಬಟ್ಟಲುಗಳಷ್ಟು ಸಣ್ಣ ಹೋಳುಗಳಾಗಿ ಮಾಡಿ ಒಂದು ಪಾತ್ರೆಯಲ್ಲಿ
೧ ಬಟ್ಟಲು ನೀರು, ರುಚಿಗೆ ತಕ್ಕಷ್ಟು ಉಪ್ಪು ಮತ್ತು ೧ ಚಮಚ ಅರಿಶಿನ ಹಾಕಿ ಬೇಯಲು ಇಡಬೇಕು. ಅರ್ಧ
ಬೆಂದ ಹೋಳುಗಳಿಗೆ ಹುಣಸೆರಸ ಸೇರಿಸಿ ಮೆತ್ತಗಾಗುವವರೆಗೂ ಚೆನ್ನಾಗಿ ಬೇಯಿಸಬೇಕು. ಒಂದು ಚಮಚ ಕೊತ್ತಂಬರಿ
ಬೀಜ, ೨ ಚಮಚ ಕಡಲೆ ಬೇಳೆ, ೪ ಬ್ಯಾಡಗಿ ಮೆಣಸಿನ ಕಾಯಿ, ೧ ಚಮಚ ಅಕ್ಕಿ - ಇವುಗಳ ಮಿಶ್ರಣವನ್ನು ಹೊಂಬಣ್ಣ
ಬರುವವರೆಗೂ ಹುರಿದು, ತೆಂಗಿನ ತುರಿ ಸೇರಿಸಿ ಬೆಚ್ಚಗೆ ಮಾಡಿ ನಯವಾಗಿ ತಿರುವಿಕೊಂಡು, ಬೆಂದ ಹೋಳುಗಳಿಗೆ
ಸೇರಿಸಬೇಕು. ಮೊದಲೇ ಬೇಯಿಸಿಟ್ಟುಕೊಂಡ ಅರ್ಧ ಬಟ್ಟಲಿನಷ್ಟು ತೊಗರಿಬೇಳೆಯನ್ನು, ಅರ್ಧ ಬಟ್ಟಲು ನೀರನ್ನು
ಸೇರಿಸಿ ಚೆನ್ನಾಗಿ ಬೆರೆಸಿ ಸಣ್ಣ ಉರಿಯಲ್ಲಿ ಬೇಯಿಸಬೇಕು. ಸಾಸಿವೆ, ಇಂಗು, ಕರಿಬೇವಿನ ಸೊಪ್ಪು ಸೇರಿಸಿ
ಒಗ್ಗರಣೆ ಹಾಕಿದಲ್ಲಿ ಬಿಸಿ ಬಿಸಿ ರುಚಿಯಾದ ಸುವರ್ಣಗೆಡ್ಡೆಯ ಕೂಟು ಸವಿಯಲು ತಯಾರು. ತಿನ್ನುವ ಮೊದಲು
ಅದರ ಗುಣಗಳನ್ನು ನೆನಪಿಟ್ಟುಕೊಳ್ಳಿ!
No comments:
Post a Comment