ಡಾ. ರಾಘವೇಂದ್ರ ಗದಗಕರ್ |
ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ (ಐಐಎಸ್ಸಿ) ಬಂದರೆ ಅಲ್ಲಿನ ಪರಿಸರ ವಿಜ್ಞಾನ ಕೇಂದ್ರದಲ್ಲಿ ಜೇನುಪೆಟ್ಟಿಗೆಗಳಂಥ ಸಾಲು ಸಾಲು ಆಕೃತಿಗಳು ಕಾಣುತ್ತವೆ. ಕೆಲವು ಪಾರದರ್ಶಕ, ಕೆಲವಕ್ಕೆ ಕಿಟಕಿಗಳಿವೆ. ಇನ್ನು ಕೆಲವು ಪೆಟ್ಟಿಗೆಗಳಲ್ಲಿ ಬೆಳಕು ಮಿನುಗುತ್ತಿರುತ್ತದೆ. ಮತ್ತೆ ಕೆಲವು ಪೆಟ್ಟಿಗೆಗಳು ಗಣಕದ ಸಾಧನಗಳಿಗೆ ಜೋಡಣೆಗೊಂಡಿವೆ.
ಆ ಪೆಟ್ಟಿಗೆಗಳಲ್ಲಿ ಜೇನಲ್ಲ, ಕಣಜದ ಕೀಟಗಳು ಮನೆ ಮಾಡಿಕೊಂಡಿವೆ. ಅವು ಈ ಗೂಡುಗಳಲ್ಲಿ ಓಡಾಡಿಕೊಂಡೇ ನಾನಾ ದೇಶಗಳ ಖ್ಯಾತ ವಿಜ್ಞಾನಿಗಳನ್ನು ತಮ್ಮತ್ತ ಸೆಳೆಯುತ್ತಿವೆ. ಕಳೆದ 35 ವರ್ಷಗಳಲ್ಲಿ ಸಾವಿರಾರು ಸಂಶೋಧನ ಪ್ರಬಂಧ ಗಳಿಗೆ ಜನ್ಮ ಕೊಟ್ಟಿವೆ. ವಿಜ್ಞಾನದ ವಿದ್ಯಾರ್ಥಿಗಳಿಗೆ 35ಕ್ಕೂ ಹೆಚ್ಚು ಪಿಎಚ್.ಡಿ.ಗಳನ್ನು ಸಂಪಾದಿಸಿಕೊಟ್ಟಿವೆ. ಸಾಮಾಜಿಕ ಜೀವವಿಜ್ಞಾನದ ಎಲ್ಲ ಪಠ್ಯಪುಸ್ತಕಗಳಲ್ಲಿ ಜಾಗ ಗಿಟ್ಟಿಸಿಕೊಂಡಿವೆ. ಎಲ್ಲಕ್ಕಿಂತ ಮುಖ್ಯವಾಗಿ ಅವುಗಳನ್ನು ಇಲ್ಲಿ ಸ್ಥಾಪಿಸಿದ ಡಾ. ರಾಘವೇಂದ್ರ ಗದಗಕರ್ ಅವರಿಗೆ ಜಾಗತಿಕ ಮನ್ನಣೆಯನ್ನು ದೊರಕಿಸಿಕೊಟ್ಟಿವೆ. ಮೊನ್ನೆ ಮೊನ್ನೆ ಅವರಿಗೆ ಜರ್ಮನಿಯ ಸರ್ವಶ್ರೇಷ್ಠ ಪ್ರತಿಭಾ ಪ್ರಶಸ್ತಿಯನ್ನು ನೀಡಲಾಯಿತು.
ಭಾರತೀಯ ವಿಜ್ಞಾನ ರಂಗದ ಅತ್ಯುನ್ನತ ಪ್ರಶಸ್ತಿಗಳನ್ನೆಲ್ಲ ಪಡೆದಿರುವ ಗದಗಕರ್ ಅಮೆರಿಕ, ಜರ್ಮನಿ, ದಕ್ಷಿಣ ಆಫ್ರಿಕಾ ಹಾಗೂ ಥರ್ಡ್ವರ್ಲ್ಡ್ ವಿಜ್ಞಾನ ಅಕಾಡೆಮಿಯಿಂದಲೂ ಸನ್ಮಾನಿತರಾಗಿ ದ್ದಾರೆ. ಭಾರತೀಯ ವಿಜ್ಞಾನ ಅಕಾಡೆಮಿಯ ಹಾಲಿ ಅಧ್ಯಕ್ಷರಾಗಿದ್ದು, ಅವರದೇ ನೇತೃತ್ವದಲ್ಲಿ ಬರುವ ಜನವರಿಯಲ್ಲಿ ಮೈಸೂರಿನಲ್ಲಿ ಅಖಿಲ ಭಾರತ ವಿಜ್ಞಾನ ಕಾಂಗ್ರೆಸ್ (ಸಮ್ಮೇಳನ) ನಡೆಯಲಿದೆ. ಕಣಜದಂಥ ಯಃಕಶ್ಚಿತ್ ಕೀಟದ ಬೆನ್ನೇರಿ, ತನ್ನ ಕಿಟಕಿಯಲ್ಲೇ ಕೂತ ಜ್ಞಾನದ ಕಣಜವನ್ನು ಜಗತ್ತಿಗೆ ತೋರಿಸಿ ಈ ಮಟ್ಟಕ್ಕೆ ಏರಿದ ಅಪರೂಪದ ಕನ್ನಡಿಗ ಅವರು.
ಹಾಗೆ ನೋಡಿದರೆ ರಾಘವೇಂದ್ರರು ಸಂಶೋಧಕರಾಗಿ ರೂಪುಗೊಂಡಿದ್ದು ಕಣಜಕ್ಕಿಂತ ಸಾವಿರಾರು ಪಟ್ಟು ಸೂಕ್ಷ್ಮವಾದ ಕಣಜೀವ ವಿಜ್ಞಾನದಲ್ಲಿ. ಕ್ಷಯದಂಥ ಕಾಯಿಲೆಗಳಿಗೆ ಕಾರಣ ವಾಗುವ ಸೂಕ್ಷ್ಮಾಣುಗಳ ಒಳಹೊಕ್ಕು ಅವನ್ನೇ ಸಾಯಿಸಬಲ್ಲ ವೈರಸ್ಗಳ ಅಧ್ಯಯನ ಮಾಡಿದ ಇವರಿಗೆ, ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪಿಎಚ್.ಡಿ. ಆಗತಾನೆ (1979) ಲಭಿಸಿತ್ತು. ಹೆಚ್ಚಿನ ಸಂಶೋಧನೆಗೆ ಅಮೆರಿಕಕ್ಕೆ ಹೋಗುವ ಅವಕಾಶ ಬಾಗಿಲಿಗೆ ಬಂದಿತ್ತು. ಆದರೆ ಹಠಾತ್ತಾಗಿ ಅಲ್ಲೊಂದು ತಿರುವು ಕಂಡಿತು. ಅದೇ ಲ್ಯಾಬಿನಲ್ಲಿ ಇನ್ನೊಬ್ಬನ ಮೇಜಿನ ಮೇಲಿದ್ದ ‘ಕರೆಂಟ್ ಸೈನ್ಸ್’
ಎಂಬ ಪತ್ರಿಕೆ ಕಣ್ಣಿಗೆ ಬಿತ್ತು. ಅದನ್ನು ಹೀಗೇ ತಿರುವಿ ಹಾಕುತ್ತಿದ್ದಾಗ, ಕಣಜದ ಹುಳುಗಳ ವರ್ತನೆಯ ಬಗ್ಗೆ ಡಾ. ಮಾಧವ ಗಾಡ್ಗೀಳರು ಬರೆದ ಚಿಕ್ಕ ಟಿಪ್ಪಣಿಯೊಂದು ಕಾಣಿಸಿತು. ರಾಘವೇಂದ್ರರ ನೆನಪು ಹತ್ತು ವರ್ಷಗಳ ಹಿಂದಕ್ಕೆ ಹೋಯಿತು.
ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಪದವಿ ಕ್ಲಾಸಿನಲ್ಲಿ ವಿಜ್ಞಾನದ ನೀರಸ ಪಾಠಗಳನ್ನು ಕೇಳುವಾಗಲೆಲ್ಲ ರಾಘವೇಂದ್ರನ ದೃಷ್ಟಿ ಕಿಟಕಿಯ ಕಡೆಗೇ ಇರುತ್ತಿತ್ತು. ಕಣಜದ ನೊಣಗಳ ಅದೆಷ್ಟೊ ಹೊಸ, ಹಳೇ ಗೂಡುಗಳು ಅಲ್ಲಿದ್ದವು. ಹೊಸ ಗೂಡುಗಳು ಹಳತಾದಂತೆ ದಿನವೂ ಹೊಸ ಗಾತ್ರ, ಹೊಸ ರೂಪ ತಳೆಯು ತ್ತಿದ್ದವು. ಪದವಿ ಮುಗಿಸಿ, ಜೀವವಿಜ್ಞಾನದಲ್ಲಿ ಎಮ್ಎಸ್ಸಿ ಓದ ಲೆಂದು ಬೇರೆ ಕ್ಲಾಸಿನಲ್ಲಿ ಕೂತಿದ್ದರೆ ಅಲ್ಲೂ ಕಣಜದ ಗೂಡುಗಳೇ ಕಾಣಿಸುತ್ತಿದ್ದವು. ಸಣ್ಣ ಕೀಟಗಳ ಅಸಾಮಾನ್ಯ ಸಾಮಾಜಿಕ ಚಟುವಟಿಕೆಗಳ ಬಗ್ಗೆ ವಿಶ್ವಮಾನ್ಯರೆನಿಸಿದ ಇ.ಓ.ವಿಲ್ಸನ್ ಬರೆದ ಪುಸ್ತಕಗಳನ್ನೆಲ್ಲ ಓದಿದರು. ಕಾನ್ರಾಡ್ ಲಾರೆಂಝ್, ಡಾರ್ವಿನ್, ರಿಚರ್ಡ್ ಡಾವ್ಕಿನ್ಸ್ ಮುಂತಾದವರ ಕೃತಿಗಳನ್ನು ಓದುತ್ತ ತಾನೇ ಸ್ವತಃ ಪುಸ್ತಕದ ಹುಳುವಾದರು. ಮುಂದೆ ಪಿಎಚ್.ಡಿ.ಗಾಗಿ ಸೂಕ್ಷ್ಮ ಲೋಕಕ್ಕಿಳಿದರೂ ಕಣಜ ವೀಕ್ಷಣೆ ಅವರ ಹವ್ಯಾಸವಾಯಿತು.
ಈಗ ಅಕಸ್ಮಾತ್ತಾಗಿ ಅದೇ ಕಣಜಗಳ ಕುರಿತ ಗಾಡ್ಗೀಳರ ಟಿಪ್ಪಣಿಯನ್ನು ಓದಿದವರೇ ಡಾ. ಗದಗಕರ್ ಪಕ್ಕದ ಪರಿಸರ ವಿಜ್ಞಾನ ವಿಭಾಗದಲ್ಲಿದ್ದ ಗಾಡ್ಗೀಳರ ಬಳಿ ಧಾವಿಸಿ ತಮ್ಮ ಆಸಕ್ತಿಯನ್ನೆಲ್ಲ ವಿವರಿಸಿದರು. ಗಾಡ್ಗೀಳ್ ಮತ್ತು ಇ.ಓ.ವಿಲ್ಸನ್ ಇಬ್ಬರಿಗೂ ಸ್ಟ್ಯಾನ್ಫೋರ್ಡ್ ವಿ.ವಿ.ಯಲ್ಲೇ ಗೆಳೆತನವಿತ್ತು. ರಾಘವೇಂದ್ರರ ಉತ್ಸಾಹ ಎಷ್ಟಿತ್ತೆಂದರೆ ಗಾಡ್ಗೀಳರು ತಮ್ಮ ಸ್ಕೂಟರ್ ಮೇಲೆ ಅವರನ್ನು ಕೂರಿಸಿಕೊಂಡು ಸೆಂಟ್ರಲ್ ಕಾಲೇಜಿನ ಆ ಕಿಟಕಿಗಳ ಬಳಿ ಬಂದರು. ಇವರ ಬರುವಿಕೆಗೇ ಕಾದಂತಿದ್ದ ಕಣಜದ ಕೀಟಗಳು ಇವರಿಗಾಗಿ ಅಧ್ಯಯನದ ಹೊಸ ಕಿಟಕಿ ಗಳನ್ನು ತೆರೆದವು. ಅಮೆರಿಕಕ್ಕೆ ಹೋಗಲೆಂದು ಪೆಟ್ಟಿಗೆ ಕಟ್ಟಿ ನಿಂತ ಡಾ. ರಾಘವೇಂದ್ರ ಗದಗಕರ್ ಕಣಜಗಳ ಅಧ್ಯಯನಕ್ಕೆ ಪೆಟ್ಟಿಗೆ ಗಳನ್ನು ನಿರ್ಮಿಸುತ್ತ ಐಐಎಸ್ಸಿಯಲ್ಲೇ ಕೂತರು. ಕೂತಲ್ಲೇ ಏರುತ್ತ ಹೋದರು.
ಅತ್ತ ಇರುವೆಗಳೂ ಅಲ್ಲದ, ಇತ್ತ ಜೇನ್ನೊಣಗಳೂ ಅಲ್ಲದ ಕಣಜಗಳಲ್ಲಿ ನಾನಾ ವರ್ಗಗಳಿವೆ. ಅವುಗಳಲ್ಲಿ ರಾಘವೇಂದ್ರ ಅವರಿಗೆ ತೀರ ಪ್ರಿಯವಾದವು ‘ರೋಪಲಿಡಿಯಾ ಮಾರ್ಜಿನೇಟಾ’. ನೂರಾರು ಸದಸ್ಯರಿರುವ ಇವುಗಳ ಕುಟುಂಬದಲ್ಲೂ ಜೇನಿನಂತೆ ರಾಣಿ, ಗಾರೆ ಕೆಲಸದವಳು, ಕಾವಲುಗಾರ್ತಿಯರು, ದಾದಿಯರು, ಆಹಾರ ಸಂಪಾದಕಿ, ಮೈಗಳ್ಳ ಗಂಡು ಎಲ್ಲ ಇರುತ್ತವೆ. ಕನ್ನಡದ ಬಾವುಟದಂತೆ ಕೆಂಪು ಹಳದಿಯ ಪಟ್ಟೆ ಹೊದೆದು ಎಲ್ಲ ಹುಳುಗಳೂ ಒಂದೇ ಥರಾ ಕಾಣುತ್ತವೆ. ಗುರುತಿಸುವುದು ಹೇಗೆ? ಅಲ್ಲಿಂದ ಇವರ ಸಂಶೋಧನೆ ಪ್ರಾರಂಭವಾಗುತ್ತದೆ. ಒಂದೊಂದು ಕೀಟಕ್ಕೂ ಗುರುತಿನ ಬಣ್ಣ ಬಳಿಯಬೇಕು. ಅದಕ್ಕೆ ಬೇಕಾದ ವಿಶಿಷ್ಟ ಬಣ್ಣವನ್ನು ಅಮೆರಿಕದಿಂದ ತರಿಸಿಕೊಂಡು ಒಂದೊಂದು ಕೀಟದ ಚಟುವಟಿಕೆಯನ್ನೂ ಹಗಲಿಡೀ ಗ್ರಹಿಸುತ್ತ ಇವರು ಒಂದರ ಮೇಲೊಂದರಂತೆ ಅದ್ಭುತ ವಿಚಾರಗಳನ್ನು ಪತ್ತೆ ಮಾಡುತ್ತಾರೆ.
ರಾಣಿಯ ಪಟ್ಟ ಹೇಗೆ ಆಗಾಗ ಬದಲಾಗುತ್ತದೆ, ಹೊಸ ರಾಣಿಯಾಗುವವಳು ಹೇಗೆ ಅಧಿಕಾರ ಚಲಾಯಿಸುತ್ತಾಳೆ, ಮಧ್ಯೆ ಮಧ್ಯೆ ಹೊಸ ಗಂಡನ್ನು ಕೂಡುವುದರಿಂದ ಇಡೀ ಗೂಡಿಗೆ ಹೇಗೆ ಲಾಭವಾಗುತ್ತದೆ, ಮೇಲುವರ್ಗದ ಜೀವಿಗಳಲ್ಲಿ ಸ್ವಾರ್ಥ, ತ್ಯಾಗ, ಸಹಕಾರ, ಬಡಿದಾಟವೇ ಮುಂತಾದ ವರ್ತನೆಗಳಿಗೆ ಕಣಜಗಳು ಹೇಗೆ ಮೇಲ್ಪಂಕ್ತಿ ಆಗುತ್ತವೆ ಎಂಬುದನ್ನೆಲ್ಲ ವಿಜ್ಞಾನ ಲೋಕಕ್ಕೆ ತಿಳಿಸುತ್ತ, ಹೊಸ ಸಿದ್ಧಾಂತಗಳನ್ನು ಮಂಡಿಸುತ್ತ, ದೇಶ ವಿದೇಶಗಳಲ್ಲಿ ಖ್ಯಾತರಾಗುತ್ತ ಹೋಗುತ್ತಾರೆ. ಕೀಟಗಳ ಅಧ್ಯಯನ ವಿಧಾನದಲ್ಲೂ ಹೊಸ ಹೊಸ ಸರಳ ಸಾಧನಗಳನ್ನು ರೂಪಿಸುತ್ತ ತಮ್ಮ ಇಡೀ ತಂಡವನ್ನು ವಿಕಾಸದ ಮಾರ್ಗದಲ್ಲಿ ಕೊಂಡೊಯ್ಯು ತ್ತಾರೆ. ಇವರು ಬರೆದ ಪುಸ್ತಕ ಚೀನಿ, ಕೊರಿಯನ್ ಭಾಷೆಗೂ ತರ್ಜುಮೆಯಾಗುತ್ತದೆ.
ಕನ್ನಡ ಕುಟುಂಬದಿಂದಲೇ ಬಂದಿದ್ದರೂ ಸೈನ್ಯಾಧಿಕಾರಿಯ ಮಗನಾಗಿ ಕಾನಪುರದಲ್ಲಿ ಜನಿಸಿ, ವಿವಿಧ ರಾಜ್ಯಗಳಲ್ಲಿ ಬೆಳೆಯುತ್ತ, ಹದಿವಯಸ್ಸಿನಲ್ಲಿ ಬೆಂಗಳೂರಿಗೆ ಬಂದು, ಪರಭಾಷೆಯಲ್ಲೇ ಹೈಸ್ಕೂಲು ಕಾಲೇಜು ಓದುತ್ತ ಕನ್ನಡ ಓದು ಬರಹವನ್ನು ಸ್ವಂತ ಆಸಕ್ತಿಯಿಂದ ಕಲಿತವರು ಇವರು. ಕಾಲೇಜಿನಲ್ಲಿ ಕತೆಗಾರ ರಾಘವೇಂದ್ರರ ಖಾಸನೀಸರ ಖಾಸಾ ದೋಸ್ತರಾಗಿದ್ದರು. ಸೆಂಟ್ರಲ್ ಕಾಲೇಜಿನಲ್ಲೇ ಸ್ನೇಹಿತೆಯಾಗಿದ್ದ ಪತ್ನಿ ವಿಜಯಗೀತಾ ಕೂಡ ಐಐಎಸ್ಸಿಯಲ್ಲಿ ವಿಜ್ಞಾನಿಯಾಗಿದ್ದವರು; ಮಗ ವಿಕ್ರಮ್ ಕಾರ್ನೆಲ್ ವಿ.ವಿ.ಯಲ್ಲಿ ವಿಜ್ಞಾನಿಯಾಗಿ ರೂಪುಗೊಳ್ಳುತ್ತಿದ್ದಾನೆ.
ವಿಜ್ಞಾನದಾಚಿನ ಅಪರಿಮಿತ ವಿಷಯಗಳಲ್ಲೂ ಆಸಕ್ತಿ ಇಟ್ಟುಕೊಂಡು ಪುಸ್ತಕದ ಹುಳುವೆನಿಸಿದ ಇವರಿಗೆ ಈಗಿನ ವಿಜ್ಞಾನಿಗಳನ್ನು ಅವರವರ ಪೊಟರೆಗಳಿಂದ ಈಚೆ ಎಳೆಯ ಬೇಕೆಂಬ ಆಸೆ. ಅದಕ್ಕೆಂದೇ ಐಐಎಸ್ಸಿಯಲ್ಲಿ ‘ಸಮಕಾಲೀನ ಅಧ್ಯಯನ ಕೇಂದ್ರ’ವನ್ನು ಸ್ಥಾಪಿಸಿ ಅಲ್ಲಿ ಸಾಹಿತ್ಯ, ತತ್ವಶಾಸ್ತ್ರ, ಕಲೆ, ತರ್ಕಶಾಸ್ತ್ರವೇ ಮುಂತಾದ ವಿಜ್ಞಾನೇತರ ವಿಷಯ ತಜ್ಞರಿಂದ ಉಪನ್ಯಾಸ ಏರ್ಪಡಿಸುತ್ತಾರೆ. ದಶಕಗಳಿಂದ ಅದರ ಸಂಸ್ಥಾಪಕ ಅಧ್ಯಕ್ಷರಾಗಿರುವ ಇವರು ಪ್ರೊ. ಯು.ಆರ್.ಅನಂತಮೂರ್ತಿಯವರನ್ನೂ ಸಂದರ್ಶಕ ಪ್ರಾಧ್ಯಾಪಕರೆಂದು ಕರೆಸಿಕೊಂಡು ಒಡನಾಡಿದವರು.
ವಿಜ್ಞಾನಿ ಆಗಬೇಕೆಂದಿದ್ದರೆ ಸಾಧಾರಣ ಕ್ಲಾಸ್ರೂಮುಗಳೂ ಸರಳ ಸಲಕರಣೆಗಳೂ ಅವಕಾಶಗಳ ಮಹಾಬಾಗಿಲನ್ನೇ ತೆರೆಯಲು ಸಾಧ್ಯವೆಂದು ತೆರೆದು ತೋರಿಸಿದವರು ಇವರು.
Courtesy: http://www.prajavani.net/article/
No comments:
Post a Comment