Sunday, 24 April 2016

Summer Nature Camp - 2016


A regular annual feature of Hasiru Hejje to initiate children into Nature bound activities.  Here is a call to the nature enthusiasts.




Saturday, 23 April 2016

ವಿಶ್ವ ಭೂ ದಿನ – ೨೦೧೬ : ಭುವಿಗಾಗಿ ಮರಗಳು. ಬನ್ನಿ ನೆಡೋಣ.


ಕೆರೆಗಳ ಒಡಲು ಬರಿದಾದ ಚಿತ್ರ, ಭೂಮಿ ಒಣಗಿ ಬಾಯ್ಬಿಟ್ಟ ಚಿತ್ರ, ಬಡ ರೈತನೊಬ್ಬ ಹತಾಶೆಯಿಂದ ಆಕಾಶವನ್ನು ದಿಟ್ಟಿಸುವ ಚಿತ್ರ, ಇವೆಲ್ಲಾ ಇದೀಗ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಕಾಣಬರುತ್ತಿವೆ. ಚಿತ್ರ ನಟ-ನಟಿಯರ ಚಿತ್ರಗಳಿಗಿಂತಲೂ ಜನಪ್ರಿಯವಾಗಿವೆ. ನಾವು ನೀರನ್ನು ಜತನದಿಂದ ಹೇಗೆ ಬಳಸಬೇಕು, ಪ್ರಾಣಿ-ಪಕ್ಷಿಗಳಿಗೆ ಹೇಗೆ ನೀರು ಸಿಗುವಂತೆ ಮಾಡಬೇಕು ಎಂಬೆಲ್ಲಾ ಚರ್ಚೆಗಳು ರಾಜಕೀಯ ಗಾಸಿಪ್ಪನ್ನೂ ಮೀರಿಸಿವೆ. ಅಸಲಿಗೆ ಇದೆಲ್ಲಾ ಏಕೆ? ಜನರಿಗೆ ಪರಿಸರದೆಡೆಗೆ ಭಾರೀ ಅರಿವು ಮೂಡಿದೆಯೆ? ಕಾಳಜಿ ಹೆಚ್ಚಿದೆಯೆ?

ದ್ಯುತಿ ಸಂಶ್ಲೇಷಣೆ ಮಾಡಬಲ್ಲ ನಮಗೆ ತಿಳಿದ ಏಕೈಕ ಗ್ರಹ ಭೂಮಿ. ಆಮ್ಲಜನಕ ಸಹಿತ ಪ್ರಾಣವಾಯುವನ್ನು ಹೊಂದಿರುವ ಏಕೈಕ ಗ್ರಹ ಭೂಮಿ. ಜೀವಿ ಜನಕ ನೀರು ಉಪಲಬ್ಧವಿರುವ ಏಕೈಕ ಗ್ರಹ ಭೂಮಿ. ಈ ಭೂಮಿ ಹೀಗೇ ಉಳಿದರೇ ನಾವು. ಇಲ್ಲವಾದರೆ ಸರ್ವ ಜೀವಿಗಳ ವಿನಾಶ.
ಈ ಅರಿವಿನಿಂದಲೇ ರಿಯೋ ಶೃಂಗಸಭೆ, ಪ್ಯಾರಿಸ್ ಶೃಂಗಸಭೆಗಳಂತಹ ಸಭೆಗಳು ನಡೆದು ವಿಶ್ವದ ಎಲ್ಲಾ ಮೂಲೆಗಳಿಂದಲೂ ವಿವಿಧ ದೇಶಗಳ ನಾಯಕರು ಒಂದೆಡೆ ಸೇರಿ ಚರ್ಚಿಸುವ ಮಹತ್ವದ ವಿಷಯವೆಂದರೆ ಹವಾಮಾನ ಬದಲಾವಣೆ. ಜಲಚಕ್ರದ ವ್ಯತ್ಯಯ, ಏರುತ್ತಿರುವ ಜಾಗತಿಕ ತಾಪಮಾನ ಮೊದಲಾದ ಪ್ರಚಲಿತ ವಿಚಾರಗಳ ಮೇಲಿನ ಚರ್ಚೆ ಮತ್ತು ಪರಿಹಾರಗಳ ಬಗೆಗಿನ ವಿಚಾರ ವಿನಿಮಯ ಅಲ್ಲಿ ನಡೆಯುತ್ತದೆ. ಈ ವೈಪರೀತ್ಯಗಳಿಗೆ ಮೂಲ ಕಾರಣಗಳಲ್ಲಿ ಇಂಗಾಲದ ಬಳಕೆ, ಮಾಲಿನ್ಯ ಹಾಗು ಮಾನವನ ದುರಾಶೆಗಳು ಪ್ರಮುಖವಾದವು. ಇವುಗಳನ್ನು ಕಡಿಮೆ ಮಾಡುವುದರ ಜೊತೆಗೆ ಕೆಲವು ಧನಾತ್ಮಕ ಕಾರ್ಯಗಳನ್ನೂ ಕೈಗೊಳ್ಳಬೇಕಿದೆ.ಅದರಲ್ಲಿ ಮೊಟ್ಟಮೊದಲನೆಯದು ಮರ ನೆಡುವುದು.

ಸಸ್ಯಗಳಿಗೆ ಇಂಗಾಲದ ಡೈಯಾಕ್ಸೈಡನ್ನು ಹೀರಿ ಆಹಾರವಾಗಿ ಮಾರ್ಪಡಿಸುವ ಶಕ್ತಿಯಿದೆ. ಮರಗಳಲ್ಲಿ ಈ ಶಕ್ತಿ ಅತ್ಯಧಿಕ. ಏಕೆಂದರೆ ಎಲೆಗಳ ಬಾಹುಳ್ಯ ತನ್ಮೂಲಕ ಅಧಿಕ ದ್ಯುತಿ ಸಂಶ್ಲೇಷಿಸುವ ಕಾರ್ಯ ಕ್ಷಮತೆ. ಹಸಿರುಮನೆ ಅನಿಲಗಳಲ್ಲಿ ಒಂದಾದ ಇಂಗಾಲದ ಡೈಯಾಕ್ಸೈಡ್ ನ ಪ್ರಮಾಣವನ್ನು ತಗ್ಗಿಸುವುದರಲ್ಲಿ ಇದು ಮುಖ್ಯ ಅಂಶ. ದ್ಯುತಿ ಸಂಶ್ಲೇಷಣಾ ಕ್ರಿಯೆಯಲ್ಲಿ ಉತ್ಪತ್ತಿಯಾಗುವ ಆಮ್ಲಜನಕ ವಾಯುಶುದ್ಧೀಕಾರಕ. ಹೊರಬರುವ ನೀರಾವಿ ವಾತಾವರಣವನ್ನು ತಂಪಾಗಿರಿಸುತ್ತದೆ. ಮರಗಳು ದುರ್ಗಂಧವನ್ನೂ, ಮಾಲಿನ್ಯ ಕಾರಕ ಅನಿಲಗಳನ್ನೂ ಹೀರಿ ಗಾಳಿಯನ್ನು ಶುದ್ಧೀಕರಿಸುತ್ತದೆ. ಕಾಂಡ ಹಾಗು ಎಲೆಗಳ ಮೂಲಕ ಮಾಲಿನ್ಯ ಕಾರಕ ಸೂಕ್ಷ್ಮ ಕಣಗಳನ್ನು ಶೋಧಿಸುತ್ತದೆ. ಅಂತರ್ಜಲವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿವೆ. ಮಣ್ಣಿನ ಸವಕಳಿಯನ್ನು ತಡೆಯುತ್ತವೆ. ಜೀವಜಾಲಕ್ಕೆ ಜೀವನಾಧಾರವಾಗಿವೆ. ಸೂಕ್ಷ್ಮ ಜೀವಿಗಳಿಂದ ಹಿಡಿದು ಕೀಟಗಳು, ಉಭಯಜೀವಿಗಳು, ಸರೀಸೃಪಗಳು, ಪಕ್ಷಿ ಸಂಕುಲ, ಸಸ್ತನಿಗಳು – ಹೀಗೆ ಹತ್ತು ಹಲವು ಜೀವಿಗಳಿಗೆ ಆಹಾರ, ರಕ್ಷಣೆ , ಪೋಷಣೆ ಇತ್ಯಾದಿಗಳನ್ನು ಒದಗಿಸುತ್ತವೆ. ಮಾನವನಿಗೆ ಔಷಧಿ, ಆಹಾರ, ಬಟ್ಟೆ, ಬಣ್ಣ, ಚೌಬೀನೆ, ಉರುವಲು ಹೀಗೆ ಸರ್ವ ಅಗತ್ಯಗಳನ್ನೂ ಪೂರೈಸುತ್ತವೆ. ಮಾನವ ಸಮುದಾಯಕ್ಕಷ್ಟೇ ಅಲ್ಲದೆ ಎಲ್ಲಾ ಜೀವ ಸಮುದಾಯಗಳಿಗೂ ಬೇಕಾದ ನೈಸರ್ಗಿಕ ಸಂಪತ್ತು, ಮರಗಳು.

ಮಾನವನ ದುರಾಸೆಗೆ, ದೂರದಾಸೆಗೆ ನೈಸರ್ಗಿಕ ಸಂಪತ್ತು ವಿನಾಶದತ್ತ ಸಾಗಿದೆ. ನೀರಿನ ಸೆಲೆಗಳು ಒಂದೋ ಅತಿಕ್ರಮಣಗೊಂಡಿವೆ ಇಲ್ಲವೋ ಮಾಲಿನ್ಯಗೊಂಡಿವೆ. ಮಾನವನ  ಕೈವಾಡದಿಂದ ವಾತಾವರಣದಲ್ಲಿನ ಅಸಮತೋಲನ ಎಷ್ಟು ಹೆಚ್ಚಿದೆಯೆಂದರೆ ನದಿಯ ಉಗಮ ಸ್ಥಾನದಲ್ಲಿಯೇ ನೀರಿಗೆ ತತ್ವಾರ. ಒಂದು ನದಿಯಲ್ಲಿನ ಹರಿವು ಎಷ್ಟಿದೆಯೋ ಅದಕ್ಕಿಂತ ಎಷ್ಟೋ ಅಧಿಕ ಪಟ್ಟು ನೀರನ್ನು ಬಯಲು ಸೀಮೆಗೆ ಹರಿಸುವ ಪೊಳ್ಳು ಭರವಸೆಯನ್ನು ಸರ್ಕಾರವೇ ಕೊಡುತ್ತದೆ. ಪಶ್ಚಿಮ ಘಟ್ಟದಂತಹ ಸೂಕ್ಷ್ಮ ಜೀವವಲಯದಲ್ಲಿ ನೀರಿನ ಸೆಲೆಗಳು ಬತ್ತಿಹೋದರೆ ಅರಣ್ಯಗಳಿಗೆ ಉಳಿವೆಲ್ಲಿ? ನೆಟ್ಟರೂ  ಮರಗಳು ಉಳಿದಾವೆ? ಅಂತಹ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಪ್ರವಾನಗಿ ನೀಡಿದರೆ ಕಾಡು- ವನ್ಯ ಜೀವಿಗಳ ಪಾಡೇನು? ಅರಣ್ಯ ಇಲಾಖೆಯ ನೋಟೀಸನ್ನೂ ಲೆಕ್ಕಿಸದೆ ಅಕ್ರಮ ಗಣಿಗಾರಿಕೆ ಈಗಾಗಲೇ ಪ್ರಚಲಿತವಿದೆ. ಇಂತಹ ಹೊತ್ತಿನಲ್ಲಿ ಇಡಿಯ ರಾಜ್ಯವೇ ಬರ ಪರಿಸ್ಥಿತಿಯನ್ನೆದುರಿಸುತ್ತಿರುವಾಗಲೂ  ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ ಶಾಶ್ವತವಾದ ನಿಸರ್ಗ ವಿನಾಶ ಖಂಡಿತ.

ಉದ್ಯಾನಗಳಲ್ಲಿ, ರಸ್ತೆಬದಿಗಳಲ್ಲಿ, ಮನೆಯ ಮುಂದೆ ನೆಟ್ಟ ಮರಗಳು ಎಲ್ಲ ಜೀವರಾಶಿಯನ್ನೂ ಸಲಹಲಾರವು. ಪ್ಲಾಂಟೇಷನ್ನುಗಳ ಏಕರೂಪದ ಮರಗಳೂ ಅದಕ್ಕೆ ಪರ್ಯಾಯವಾಗಲಾರವು. ಕೇವಲ ನಮ್ಮ ಸ್ವಾರ್ಥಕ್ಕೆಂದು ಮನೆಯಂಗಳದಲ್ಲೋ, ಕೈತೋಟದಲ್ಲೋ ಕಲ್ಪವೃಕ್ಷ ಬೆಳೆದರೆ ವೃಕ್ಷವನ ಸೃಷ್ಟಿಯಾಗದು. ಊರಂಚಿನ ಆಲಕ್ಕೋ , ಅರಳಿಗೋ ಸಮನಾಗಲಾರದು. ಕಾಡನ್ನು ಕಾಡಾಗಿಯೇ ಉಳಿಯಗೊಟ್ಟರೆ ಮರಗಳು ಉಳಿದಾವು. ನೀರಿನ ಸೆಲೆಗಳ, ಕಾಡುಗಳ ಒತ್ತುವರಿ ಉಳ್ಳವರಿಂದಲೇ ಆಗುತ್ತಿದೆ. ಅಧಿಕಾರಸ್ಥರ ಅವಜ್ನೆ , ಕುಮ್ಮಕ್ಕು ಈ ಒತ್ತುವರಿಯ ಹಿಂದಿದೆ. ಹೀಗೆಯೇ ಮುಂದುವರಿದರೆ ಅರಣ್ಯ ನಾಶದೊಂದಿಗೆ ವನ್ಯಜೀವಿಗಳ ವಿನಾಶವೂ ಮುಂದುವರೆಯುತ್ತದೆ. ತಮ್ಮಲ್ಲಿರುವ ಲೆಖ್ಖವಿಲ್ಲದಷ್ಟು ಹಣವನ್ನು ಇಡಲು ಜಾಗವಿಲ್ಲದ, ಇಲ್ಲದವರೊಡನೆ  ಹಂಚಿಕೊಳ್ಳುವ ಮನಸ್ಸೂ ಇಲ್ಲದ ಸಿರಿವಂತರ “ನೆಲ ಕೊಳ್ಳುಬಾಕತನ”ದ ದುರಾಶೆ ಕಡಿಮೆಯಾದರೆ ವನ ವೃಕ್ಷಗಳು ನಲನಳಿಸಿಯಾವು. ಮನೆಯ ಮುಂದೆ , ರಸ್ತೆಬದಿಯಲ್ಲಿ ಮರಗಳನ್ನು ಬೆಳೆಸುವುದರೊಂದಿಗೆ ಊರಿಗೊಂದು  ಸಂರಕ್ಷಿತ ವನವೂ ಬೇಕು. ಬಿರುಬಿಸಿಲಿನ ಈ ಬೇಸಿಗೆಯಲ್ಲಿ ಮರಗಳಿಂದ ನಮ್ಮ ಜೀವ ತಂಪಾದಂತೆ ಸಕಲ ಜೀವಿಗಳ ಜೀವವೂ ತಂಪಾಗಿರಲಿ. ಬನ್ನಿ, ಮರ ನೆಡೋಣ, ನೆಟ್ಟು ನೀರೆರೆಯೋಣ, ಬೆಳೆಸಿ ಸಂರಕ್ಷಿಸೋಣ.


ಗೀತಾ. ಹೆಚ್

Friday, 15 April 2016

ಕಾಡಿಗೆ ರಕ್ಕಸ ರೈಲು!


An elephant crossing the railway line at Panijhora in Buxa Tiger Reserve in Dooars 

ಒಂದು ಬಲಿಷ್ಠ ಸುಂದರ ಕುದುರೆ. ಹುಟ್ಟಿನಿಂದಲೇ ಪಡೆದ ನಾಯಕತ್ವದ ಗುಣ, ವಿವೇಕ, ಸನ್ನಡತೆ ಸ್ವಾಭಾವಿಕವಾಗಿಯೇ ಕುದುರೆಗಳ ಗುಂಪಿನ ನಾಯಕನನ್ನಾಗಿಸಿತು. ಇಂತಹಾ ಕುದುರೆ ಮಾನವನ ದುರಾಸೆಗೆ ಸೆರೆಸಿಕ್ಕಿ ಇತರ ಕುದುರೆಗಳೊಡನೆ ಮರದ ದಿಮ್ಮಿಗಳನ್ನೆಳೆಯುತ್ತಾ, ಉಕ್ಕಿನ ಹಳಿಗಳನ್ನೆಳೆಯುತ್ತಾ, ಕೊನೆಗೆ ರೈಲಿನ ಎಂಜಿನನ್ನೂ ಎಳೆಯುತ್ತಾ ದುಡಿಯುವಾಗ ಅಸ್ತಂಗತನಾಗಲಿರುವ ಸೂರ್ಯನೆಡೆಗೆ ಆಕಸ್ಮಿಕವಾಗಿ ನೋಡುತ್ತದೆ. ಥಟ್ಟನೆ ಸ್ಫುರಿಸುವ ಸತ್ಯವೆಂದರೆ ಹಳಿಗಳು, ಎಂಜಿನ್ನು ತಲುಪಲಿರುವುದು ತನ್ನವರ ಆವಾಸ ಸ್ಥಾನವನ್ನು! ಎಚ್ಚೆತ್ತ ಕುದುರೆ ನಾಗಾಲೋಟದಿಂದ ಓಡಿ ಮಾನವ ನಿರ್ಮಿತವೆಲ್ಲವನ್ನೂ ಧ್ವಂಸಮಾಡಿ ತನ್ನನ್ನೂ, ತನ್ನವರನ್ನೂ ಬಿಡುಗಡೆಗೊಳಿಸಿಕೊಂಡು ಸ್ವತಂತ್ರವಾಗುವ ಕಥೆಯೇ ಡಿಸ್ನಿ ಮೂವಿಸ್ರವರ ಅನಿಮೇಷನ್ ಚಿತ್ರ ಸ್ಪಿರಿಟ್: ಸ್ಟಾಲಿಯನ್ ಆಫ಼್ ಸಿಮರನ್. ಇದರಲ್ಲಿ ಸ್ಪಿರಿಟ್ ಮತ್ತಿತರ ಕುದುರೆಗಳನ್ನು ಮಾನವನು ಕೈವಶ ಮಾಡಿಕೊಳ್ಳುವುದು, ಅವುಗಳ ಬದುಕನ್ನೇ ತಲ್ಲಣಗೊಳಿಸುವುದು ಅಭಿವೃದ್ಧಿ ಎಂಬ ಮರೀಚಿಕೆಗಾಗಿ. ೮೦ರ ದಶಕದ ಚಿತ್ರವು ಸುಮಾರು ೨೦೦ ವರ್ಷಗಳ ಹಿಂದಿನ ಅಮೆರಿಕದ ವಸಾಹತು ನೀತಿಗಳನ್ನೂ, ತನ್ಮೂಲಕ ಅಭಿವೃದ್ಧಿ ಪಥವೆನಿಸಿರುವ ರೈಲ್ವೆ ಸಂಪರ್ಕವನ್ನೂ ಹೇಗೆ ಜೀವಿಮಾರಕವಾಗಿದ್ದುವೆಂಬುದನ್ನು ಹೃದಯಸ್ಪರ್ಷಿಯಾಗಿ ಕಟ್ಟಿಕೊಡುತ್ತದೆ. ಸ್ಪಿರಿಟ್ ಸ್ವಾತಂತ್ರ್ಯ ಪ್ರೇಮಕ್ಕೆ ಮರುಳಾಗುವ ಮಕ್ಕಳ ಅಚ್ಚುಮೆಚ್ಚಿನ ಚಿತ್ರವನ್ನು ಎಷ್ಟೇ ಬಾರಿ ನೋಡಿದ್ದರೂ ಮತ್ತೆ ಮತ್ತೆ ನೋಡಬೇಕೆನಿಸುತ್ತದೆ. ಮಾನವರ ದೇಹಭಾಷೆ, ಹಾವ-ಭಾವದಷ್ಟೇ ಪರಿಣಾಮಕಾರಿಯಾಗಿ ಕುದುರೆಗಳೂ ವ್ಯಕ್ತಪಡಿಸಿವೆ.

ರೈಲ್ವೆ ಮಾರ್ಗಕ್ಕಾಗಿ ಹಳಿಗಳನ್ನು ಹಾಕುವಾಗ ಆಗುವ ಅರಣ್ಯ ನಾಶ, ವನ್ಯಜೀವಿಗಳ ಆವಾಸ ಪಲ್ಲಟ ಮೊದಲಾದುವನ್ನು ಕಣ್ಣಿಗೆ ಕಟ್ಟಿಕೊಡುವ ಚಿತ್ರವು, ಕೇಂದ್ರ ಸರ್ಕಾರದ ರೈಲ್ವೆ ಬಜೆಟ್ ಮಂಡನೆಯ ಸುದ್ದಿಗಳ ಮೂಲಕ ಮತ್ತೊಮ್ಮೆ ನೆನಪಾಯಿತು. ಬ್ರಿಟಿಷರ ಆಳ್ವಿಕೆಯ ಮುಂದುವರೆದ ಭಾಗವೋ ಎಂಬಂತೆ ಹೊಸ ಮಾರ್ಗಗಳನ್ನು ಕಲ್ಪಿಸಲಾಗುತ್ತಿದೆ. ಸೂಕ್ಷ್ಮ ಅರಣ್ಯ ಪ್ರದೇಶಗಳನ್ನು ಹಾದುಹೋಗಲಿರುವ ರೈಲ್ವೆ ಮಾರ್ಗಗಳನ್ನು ಅರಣ್ಯಗಳಿವೆಯೆಂದೇ ಹಿಂದಿನ ಸರ್ಕಾರಗಳು ಹಾಕಿರಲಿಲ್ಲ. ಮೈಸೂರು- ಕುಶಾಲನಗರ, ಮೈಸೂರು - ಸತ್ಯಮಂಗಲ, ನಂಜನಗೂಡು- ನೀಲಂಬೂರು ಇತ್ಯಾದಿ ಮಾರ್ಗಗಳ ಪ್ರಸ್ತಾವನೆಯಲ್ಲಿ ಎಷ್ಟು ಹೆಕ್ಟೇರ್ ಅರಣ್ಯ ಪ್ರದೇಶ ಯಾರು ಯಾರ ಪಾಲಾಗಲಿದೆ ಎಂಬುದನ್ನು ಆಲೋಚಿಸಬಹುದು. ಈಗಾಗಲೇ ರಸ್ತೆ ಮೂಲಕ ಸಂಪರ್ಕಗಳನ್ನು ಹೊಂದಿರುವ ಪ್ರದೇಶಗಳು ಸಾಕಷ್ಟು ಮುಂದುವರೆದಿವೆ. ರೈಲ್ವೆ ಸಂಪರ್ಕದ ಅವಶ್ಯಕತೆಯನ್ನೊಮ್ಮೆ ಪುನರಾವಲೋಕಿಸಬೇಕಿದೆ.
ಸಂರಕ್ಷಿತಾರಣ್ಯಗಳ ಮೂಲಕ ಹಾದು ಹೋಗುವ ಹೆದ್ದಾರಿಗಳಲ್ಲಿ ರಾತ್ರಿ ಸಂಚಾರದಿಂದ ಆಗುತ್ತಿರುವ ವನ್ಯಜೀವಿಗಳ ಹನನವನ್ನು ತಡೆಯುವುದೇ ದುಸ್ತರವಾಗಿರುವಾಗ ಯಾವುದೇ ಅಡೆತಡೆಗಳಿಲ್ಲದೆ, ವಿಶೇಷ ನಿಯಮಾವಳಿಗಳನ್ನುಳ್ಳ ರೈಲ್ವೆ ಸಂಚಾರ ಎಷ್ಟು ಮಾರಕ ಎಂಬ ಸತ್ಯವನ್ನು ಮನಗಾಣಬೇಕಿದೆ. ಒಮ್ಮೆಲೇ ಬೊಬ್ಬಿರಿವ ರೈಲಿನ ಹಾರನ್ಗಳಿಂದ   ಎಷ್ಟು ವನ್ಯಜೀವಿಗಳು ಕಂಗೆಟ್ಟಾವೋ, ಅವುಗಳ ಸಂತಾನೋತ್ಪತ್ತಿಯ ಮೇಲೆಂಥಾ ದುಷ್ಪರಿಣಾಮವು ಬೀರೀತೋ! ಅವುಗಳ ಜೀವನ ಪದ್ಧತಿಯಲ್ಲಿ ಎಂತೆಂತಹ ಮಾರ್ಪಾಡುಗಳು ಬಂದು ಅವುಗಳ ಸ್ವಾಭಾವಿಕ ವಿಕಸನಕ್ಕೆ ಮಾರಕವಾದಾವೋ! ಇದ್ಯಾವುದರ ಬಗ್ಗೆಯೂ ಯಾವುದೇ ಅಧ್ಯಯನ ನಡೆಸದೆ ಮನವ ಕೇಂದ್ರಿತ ಅಭಿವೃದ್ಧಿಗಾಗಿ ತೀರ್ಮಾನ ಕೈಗೊಳ್ಳುವುದು ಎಷ್ತು ಸೂಕ್ತವೆಂಬುದಕ್ಕೆ ಪಶ್ಚಿಮ ಬಂಗಾಳದಲ್ಲಿ ಸಿಲಿಗುರಿ ಬಳಿಯ ರೈಲ್ವೆ ಪಥವೇ ನಿದರ್ಶನ.
Guwahati-bound Somporkkranti Express, hit the elephant a few miles from Alipurduar in West Bengal.

ಇಂಟೆರ್ನ್ಯಾಷನಲ್ ಎಲೆಫ಼ೆಂಟ್ ಫ಼ೌಂಡೇಷನ್ ಸಂಸ್ಥೆಯು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗದೊಂದಿಗೆ ನಡೆಸಿದ ವೈಜ್ಞಾನಿಕ ಸಮೀಕ್ಷೆಯ ವರದಿಯ ಪ್ರಕಾರ ಕಳೆದ ೪೦ ವರ್ಷಗಳಲ್ಲಿ( ೧೯೭೪- ೨೦೧೩ ರವರೆಗೆ) ವಯಸ್ಕ, ಬಾಲ ಹಾಗೂ ಮರಿಯಾನೆಗಳೂ ಸೇರಿದಂತೆ ೮೨ ಆನೆಗಳು ಅತಿವೇಗದಿಂದ, ಅಂದರೆ ಗಂಟೆಗೆ ೮೦ ಕಿ.ಮೀ. ವೇಗದಲ್ಲಿ ಚಲಿಸುವ ರೈಲಿಗೆ ಸಿಕ್ಕಿ ಸತ್ತಿವೆ. ಬ್ರಾಡ್ಗೇಜು ನಿರ್ಮಾಣವಾದಮೇಲಂತೂ ಆನೆಗಳ ಸಾವಿನ ಸಂಖ್ಯೆಯು ಹೆಚ್ಚಳವಾಗಿದೆ. ಗುಲ್ಮ- ಸಿವೊಕ್, ಸಿವೊಕ್ - ಬಗರಕೋಟೆ, ಊಡ್ಲಬಾರಿ - ಡಂಡಿಂ, ಮಾಲ್- ಚಾಲ್ಸಾ, ಬನಾರ್ಹತ್, ದಲಗಾಂವ್, ಹಸಿಮಾರ ಮೊದಲಾದ ಸ್ಥಳಗಳಲ್ಲಿನ ರೈಲ್ವೆ ಹಳಿಗಳ ನಡುವೆ ರೈಲಿಗೆ ಸಿಕ್ಕಿ ಪ್ರಾಣ ತೆತ್ತ ಪ್ರಾಣಿಗಳು ಆನೆಗಳಷ್ಟೇ ಅಲ್ಲ, ಕಾಟಿಗಳು, ಕಡವೆ ಇತ್ಯಾದಿ ವನ್ಯಜೀವಿಗಳೂ ಸೇರಿವೆ. ೨೦೧೩ರ ನವೆಂಬರ್ ೧೩ರಂದು ಒಂದೇ ಅವಘಡದಲ್ಲಿ ೪೦-೫೦ ಆನೆಗಳು ರೈಲಿಗೆ ಸಿಕ್ಕಿ ವಯಸ್ಕ, ಮರಿಯಾನೆಗಳು ಸಾವನ್ನಪ್ಪಿ, ಹತ್ತು ಆನೆಗಳು ತೀವ್ರ ಗಾಯಗೊಂಡಿವೆ. ಪೂರ್ಬಶಾಯರ್ಬರಿ ಎಂಬಲ್ಲಿ ಆನೆಗಳು ರೈಲಿಗೆ ಸಿಕ್ಕಿ ೨೦೧೫ರ ಮೇ ೮ರಂದು ಒಂದು ಆನೆ ಸತ್ತಿದೆ. ೨೦೧೪ರ ಜುಲೈ ೨ರಂದು ಅಲಿಪುರ್ದುವರ್ ಬಳಿ ಎರಡು ವಯಸ್ಕ ಆನೆಗಳು ರೈಲಿನಿಂದ ಜಜ್ಜಿಹೋಗಿವೆ. ಲೆಖ್ಖ ಬರೆಯಲು ತೊಡಗಿದರೆ ಅದರದೇ ವರದಿಯಾದೀತು! ಮಹಾರಾಷ್ಟ್ರ ರಾಜ್ಯದಲ್ಲೂ ಆನೆ, ಚಿರತೆ ಮತ್ತಿತರ ಪ್ರಾಣಿಗಳು ರೈಲಿಗೆ ಸಿಕ್ಕಿ ಸಾವನ್ನಪ್ಪಿವೆ. ರಾಜಾಸ್ಥಾನದ ಕೋಟಾ ಬಳಿ ರಾಜಧಾನಿ ಎಕ್ಸ್ಪ್ರೆಸ್ಸ್ ರೈಲಿಗೆ ಸಿಲುಕಿ ಸತ್ತ ಬ್ರೋಕನ್ ಟೈಲ್ ಹುಲಿ ರಣತಂಬೂರು ರಾಷ್ಟ್ರೀಯ ಉದ್ಯಾನದಿಂದ ಸುಮಾರು ೨೦೦ ಕಿ.ಮೀ. ದೂರ ಕ್ರಮಿಸಿತ್ತು!
Leopard hit near Pench tiger reserve at Madhya Pradesh

ಇಷ್ಟೆಲ್ಲಾ ಚರ್ಚಿಸುವಾಗ ರೈಲ್ವೆ ಮಾರ್ಗಗಳ ಅವಶ್ಯಕತೆಯೇನು ಎಂಬ ಪ್ರಶ್ನೆ ಎದುರಾಗುತ್ತದೆ.ಮೇಲ್ನೋಟಕ್ಕೆ ಜನಸಾಮಾನ್ಯರ ಸಂಚಾರಕ್ಕಾಗಿ ಕೈಗೆಟುಕುವ ದರದ ಸಂಪರ್ಕ ಸಾಧನವೆನ್ನಿಸುವ  ರೈಲು ಹೆಚ್ಚಾಗಿ ಉಪಯೋಗವಾಗುವುದು ಸರಕು ಸಾಗಣೆಗಾಗಿ. ಸರಕುಗಳು ಸಾಗಣೆಯಾಗುವುದು ಕಚ್ಚಾವಸ್ತುಗಳು ದೊರಕುವ ಪ್ರದೇಶಗಳಿಂದ ಕೈಗಾರಿಕಾ ಪ್ರದೇಶಗಳಿಗೆ ಮತ್ತು ಒಂದು ಕೈಗಾರಿಕಾ ಪ್ರದೇಶದಿಂದ (ಕಚ್ಚಾ ವಸ್ತು) ಮತ್ತೊಂದು ಕೈಗಾರಿಕಾ ಪ್ರದೇಶಕ್ಕೆ (ಸಿದ್ಧವಸ್ತು).
 
MahanadaExpress passenger hit near Kolkata
 ಎನ್.ಸಿ.ಎಫ಼್. ಡಾ. ಸಂಜಯ ಗುಬ್ಬಿಯವರು ಹೇಳುವಂತೆ ಕೊಡಗು, ಕೇರಳದಂತಹ ಸ್ಥಳಗಳ ಕಾಫ಼ಿ, ಟೀ ಎಸ್ಟೇಟುಗಳ ಮಾಲೀಕರಿಗೆ ಸವಾಲಾಗಿರುವ ಕೂಲಿ ಕಾರ್ಮಿಕರ ಸಮಸ್ಯೆ ಮತ್ತೊಂದು ಸಂಭವನೀಯತೆ. ಸ್ಥಳೀಯವಾಗಿ ತುಟ್ಟಿಯಾಗಿರುವ ಅಥವಾ ಬಹುತೇಕ ಅಲಭ್ಯವಿರುವ ಕೂಲಿ ಕಾರ್ಮಿಕರ ಸೇವೆಯು ಬಲುದೂರದ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ರೈಲ್ವೆ ಮಾರ್ಗಗಳ ಮೂಲಕ ಬಿಹಾರ, ಉತ್ತರ ಪ್ರದೇಶ ಮೊದಲಾದ ರಾಜ್ಯಗಳಿಂದ ವಲಸೆ ಬರುವ ಕಾರ್ಮಿಕರಿಂದ ಅಗ್ಗದ ಸೇವೆಯು ಲಭ್ಯವಾಗುವುದು. ಕಾರಣವೇನೇ ಇರಲಿ, ಕಾಡಿನ ಮಧ್ಯೆಯೇ ಏಕೆ ರೈಲು ಮಾರ್ಗವೆಂಬ ಪ್ರಶ್ನೆಗೆ ಅವರ ಉತ್ತರ , ನೇರ ದಾರಿ, ಸರಳ ಭೂಸ್ವಾಧೀನ ಪ್ರಕ್ರಿಯೆ ಮತ್ತು ಕಡಿಮೆ ವೆಚ್ಚ ಮೊದಲಾದ ಕಾರಣಗಳು. ಉತ್ತರ ಕೇರಳದಲ್ಲಿ ಅಂತರರಾಷ್ಟ್ರೀಯ ವಾಯುಸಂಪರ್ಕವಿಲ್ಲದಿರುವುದರಿಂದ ಮೈಸೂರಿನಲ್ಲಿ ಅಂತಹ ಸೌಲಭ್ಯ ದೊರಕಿದ್ದೇ ಆದಲ್ಲಿ ರಾಷ್ಟ್ರೀಯ ಉದ್ಯಾನದ ಮೂಲಕ ಓಡಾಟ ಸುಲಭವಾಗಬಹುದೆಂಬ ಕಾರಣವೂ ಇರಬಹುದು. ಏನೇ ಇರಲಿ, ಅಭಿವೃದ್ಧಿ , ಸಂಪರ್ಕಗಳನ್ನು ಬಯಸುವವರು ಕಾಡಿನೊಳಗೆ ತೂರಿಸಾಗುವಬದಲು, ಹೊರಗಿನಿಂದಲೇ ಮಾರ್ಗಗಳನ್ನು ನಿರ್ಮಿಸಿಕೊಂಡರೆ ಒಳಿತು. ಕೆಲವೇ ಮಂದಿಯ ಹಿತಕಾಯುವ ಮಾರ್ಗಗಳು ನಾಡಿನ ಜೀವಾಳವಾಗಿರುವ ಶುದ್ಧ ಗಾಳಿ, ಮಳೆ - ಇವುಗಳನ್ನು ಒದಗಿಸುತ್ತಿರುವ ದೇಶದ ವಿಸ್ತೀರ್ಣದ ಕೇವಲ ಶೇಕಡ ಭಾಗ ಮಾತ್ರವಿರುವ ಸಂರಕ್ಷಿತಾರಣ್ಯಗಳನ್ನು ಹೊರತುಪಡಿಸಿದರೆ ಸಾಕು. ಲಾಭಕರ ಉದ್ಯಮವಾಗಿ ಮಾರ್ಪಾಡಾಗಿರುವ ರೈಲ್ವೆ ಇಲಾಖೆಯು ಅಂಶಗಳನ್ನು ಗಮನಿಸಿ ನಾಗರಿಕ ಸೇವಾ ಇಲಾಖೆಯಾಗಿಯೇ ಉಳಿಯಲಿ ಎಂಬುದೇ ವನ್ಯಜೀವಿಗಳ ಹಿತಪರವಿರುವವರ ಕಾಳಜಿ. ಅಭಿವೃದ್ಧಿ ಬೇಕು, ಆದರೆ ವನ್ಯಜೀವಿಗಳ, ಕಾಡಿನ ಬೆಲೆ ತೆತ್ತು ಆಗುವುದು ಬೇಡ.ಪರಿಸರ, ಅರಣ್ಯ ಹಾಗು ಹವಾಮಾನ ಬದಲಾವಣಾ ಸಚಿವಾಲಯವು ಇಂತಹ ಹಾನಿಕಾರಕ ಯೋಜನೆಗಳಿಗೆ ಸಮ್ಮತಿಸದಿರಲಿ
Another hit by train

ಮೈಸೂರು ಅಮೆಚೂರ್ ನ್ಯಾಚುರಲಿಸ್ಟ್ ಸಂಸ್ಥೆಯ ಮನು. ಕೆ ಅವರು ಹೇಳುವಂತೆ, ಒಂದೆಡೆ ಆಂಧ್ರ ಪ್ರದೇಶದ ನೂತನ ರಾಜಧಾನಿ ಅಮರಾವತಿಯನ್ನು ನಿರ್ಮಿಸಲು ಸರ್ಕಾರಗಳು ೪೦೦ ಹೆಕ್ಟೇರ್ ಅರಣ್ಯ ಪ್ರದೇಶ್ವನ್ನೇ ಡೀನೋಟಿಫ಼ೈ ಮಾಡಿದರೆ, ಮತ್ತೊಂದೆಡೆವನ್ಯಜೀವಿಗಳಿಗೆ ಕಾರಿಡಾರ್ ಕಲ್ಪಿಸಲು ಮತ್ತು ಪರಿಸರ ಪ್ರವಾಸೋದ್ಯಮ( ಈಕೋ ಟೂರಿಸಂ) ಕ್ಕಾಗಿ ವಿದೇಶಿ ನೇರ ಹೂಡಿಕೆ (ಎಫ಼್,ಡಿ.) ಯನ್ನು ಆಹ್ವಾನಿಸುತ್ತಿವೆ. ದ್ವಂದ್ವ ತಾಕಲಾಟಗಳ ಮಧ್ಯೆ ನಲುಗುವುದು ಲಕ್ಷಾಂತರ ವರ್ಷಗಳಿಂದ ಬಾಳಿದ ಪರಿಸರ ಮತ್ತು ಅಲ್ಲಿನ ಜೀವಿಗಳು.ಸುಮಾರು ೧೫ ವರ್ಷಗಳಷ್ಟು ಹಿಂದೆ ಶ್ರೀಶೈಲಂನಲ್ಲಿಒಂದು ಸಣ್ಣ ಸಂರಕ್ಷಿತಾರಣ್ಯವನ್ನು ಸೃಷ್ಟಿಸಿ, ಕಾಣೆಯಾಗಿದ್ದ ಹುಲಿ, ಆನೆ ಮೊದಲಾದ ವನ್ಯಜೀವಿಗಳನ್ನು ಆಹ್ವಾನಿಸಿದ್ದ ಅದೇ ಆಂಧ್ರ ರಾಜ್ಯ ಇಂದು ಅದೇ ಜೀವಿಗಳ ಆವಾಸವನ್ನು ದೊಡ್ಡ ಪ್ರಮಾಣದಲ್ಲಿ ವಿನಾಶಪಡಿಸುತ್ತಿರುವುದೊಂದು ವಿಪರ್ಯಾಸವೇ ಸರಿ.
An elephant killed in Assam

 ಅರಣ್ಯದ ಕಾನೂನುಗಳ ಪರಿಧಿಗೇ ಬರದ ಸುವರ್ಣ ಚತುಷ್ಪಥ ಈಗಾಗಲೇ ರಾಷ್ಟ್ರೀಯ ಉದ್ಯಾನಗಳನ್ನು ಹೊಕ್ಕು ಬಳಸಿದ್ದಗಿದೆ. ಕಾಡಿನಲ್ಲಿ ಇಷ್ಟೆಲ್ಲಾ ಕೈಯಾಡಿಸುವ ಮಾನವ, ರೈಲಿನಲ್ಲಿ ಸರಕು ತುಂಬಿ ಕಾಡಿನ ಮಧ್ಯೆ ಸಂಚರಿಸುವಾಗ ಇನ್ನೇನೆಲ್ಲಾ ಮಾಡಬಹುದು ಎಂಬ ಆತಂಕ ಎದುರಾದರೆ ಸೂಕ್ತ ಪರಿಹಾರ ಮಾರ್ಗಗಳೂ ಕಾಣದಾಗಿವೆ.
A tiger hit by train in Madhya Pradesh
Elephant family crossing railway track in West Bengal

ಅಮೆರಿಕೆಯ ಬುಡಕಟ್ಟೂ ಮೂಲ ನಿವಾಸಿಗಳಲ್ಲಿ ಕೊನೆಯವನಾದ ಯಾಹಿ ಸಂಸ್ಕೃತಿಯ ಇಶಿ ಹೇಳುವಂತೆ ನಿರ್ಮಲ, ಪ್ರಶಾಂತ ಕಾಡಿನ ನಡುವೆ ಸಂಚರಿಸುವ ದೈತ್ಯ ರಾಕ್ಷಸ( ಮಾನ್ಸ್ಟರ್) ರೈಲು!

-   ಗೀತಾ. ಎಚ್.    
ಹಸಿರು ಹೆಜ್ಜೆ
ಮೈಸೂರು      
Chittals on the railway track
         
Lion on the railway track at Gir
(All Photo credits: Various sources from Google search)