ಕೆರೆಗಳ ಒಡಲು ಬರಿದಾದ
ಚಿತ್ರ, ಭೂಮಿ ಒಣಗಿ ಬಾಯ್ಬಿಟ್ಟ ಚಿತ್ರ, ಬಡ ರೈತನೊಬ್ಬ ಹತಾಶೆಯಿಂದ ಆಕಾಶವನ್ನು ದಿಟ್ಟಿಸುವ
ಚಿತ್ರ, ಇವೆಲ್ಲಾ ಇದೀಗ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ
ಕಾಣಬರುತ್ತಿವೆ. ಚಿತ್ರ ನಟ-ನಟಿಯರ ಚಿತ್ರಗಳಿಗಿಂತಲೂ ಜನಪ್ರಿಯವಾಗಿವೆ. ನಾವು ನೀರನ್ನು ಜತನದಿಂದ
ಹೇಗೆ ಬಳಸಬೇಕು, ಪ್ರಾಣಿ-ಪಕ್ಷಿಗಳಿಗೆ ಹೇಗೆ ನೀರು ಸಿಗುವಂತೆ ಮಾಡಬೇಕು ಎಂಬೆಲ್ಲಾ ಚರ್ಚೆಗಳು
ರಾಜಕೀಯ ಗಾಸಿಪ್ಪನ್ನೂ ಮೀರಿಸಿವೆ. ಅಸಲಿಗೆ ಇದೆಲ್ಲಾ ಏಕೆ? ಜನರಿಗೆ ಪರಿಸರದೆಡೆಗೆ ಭಾರೀ ಅರಿವು ಮೂಡಿದೆಯೆ?
ಕಾಳಜಿ ಹೆಚ್ಚಿದೆಯೆ?
ದ್ಯುತಿ ಸಂಶ್ಲೇಷಣೆ ಮಾಡಬಲ್ಲ
ನಮಗೆ ತಿಳಿದ ಏಕೈಕ ಗ್ರಹ ಭೂಮಿ. ಆಮ್ಲಜನಕ ಸಹಿತ ಪ್ರಾಣವಾಯುವನ್ನು ಹೊಂದಿರುವ ಏಕೈಕ ಗ್ರಹ ಭೂಮಿ.
ಜೀವಿ ಜನಕ ನೀರು ಉಪಲಬ್ಧವಿರುವ ಏಕೈಕ ಗ್ರಹ ಭೂಮಿ. ಈ ಭೂಮಿ ಹೀಗೇ ಉಳಿದರೇ ನಾವು. ಇಲ್ಲವಾದರೆ
ಸರ್ವ ಜೀವಿಗಳ ವಿನಾಶ.
ಈ ಅರಿವಿನಿಂದಲೇ ರಿಯೋ
ಶೃಂಗಸಭೆ, ಪ್ಯಾರಿಸ್ ಶೃಂಗಸಭೆಗಳಂತಹ ಸಭೆಗಳು ನಡೆದು ವಿಶ್ವದ ಎಲ್ಲಾ ಮೂಲೆಗಳಿಂದಲೂ ವಿವಿಧ
ದೇಶಗಳ ನಾಯಕರು ಒಂದೆಡೆ ಸೇರಿ ಚರ್ಚಿಸುವ ಮಹತ್ವದ ವಿಷಯವೆಂದರೆ ಹವಾಮಾನ ಬದಲಾವಣೆ. ಜಲಚಕ್ರದ
ವ್ಯತ್ಯಯ, ಏರುತ್ತಿರುವ ಜಾಗತಿಕ ತಾಪಮಾನ ಮೊದಲಾದ ಪ್ರಚಲಿತ ವಿಚಾರಗಳ ಮೇಲಿನ ಚರ್ಚೆ ಮತ್ತು
ಪರಿಹಾರಗಳ ಬಗೆಗಿನ ವಿಚಾರ ವಿನಿಮಯ ಅಲ್ಲಿ ನಡೆಯುತ್ತದೆ. ಈ ವೈಪರೀತ್ಯಗಳಿಗೆ ಮೂಲ ಕಾರಣಗಳಲ್ಲಿ
ಇಂಗಾಲದ ಬಳಕೆ, ಮಾಲಿನ್ಯ ಹಾಗು ಮಾನವನ ದುರಾಶೆಗಳು ಪ್ರಮುಖವಾದವು. ಇವುಗಳನ್ನು ಕಡಿಮೆ ಮಾಡುವುದರ
ಜೊತೆಗೆ ಕೆಲವು ಧನಾತ್ಮಕ ಕಾರ್ಯಗಳನ್ನೂ ಕೈಗೊಳ್ಳಬೇಕಿದೆ.ಅದರಲ್ಲಿ ಮೊಟ್ಟಮೊದಲನೆಯದು ಮರ
ನೆಡುವುದು.
ಸಸ್ಯಗಳಿಗೆ ಇಂಗಾಲದ
ಡೈಯಾಕ್ಸೈಡನ್ನು ಹೀರಿ ಆಹಾರವಾಗಿ ಮಾರ್ಪಡಿಸುವ ಶಕ್ತಿಯಿದೆ. ಮರಗಳಲ್ಲಿ ಈ ಶಕ್ತಿ ಅತ್ಯಧಿಕ.
ಏಕೆಂದರೆ ಎಲೆಗಳ ಬಾಹುಳ್ಯ ತನ್ಮೂಲಕ ಅಧಿಕ ದ್ಯುತಿ ಸಂಶ್ಲೇಷಿಸುವ ಕಾರ್ಯ ಕ್ಷಮತೆ. ಹಸಿರುಮನೆ
ಅನಿಲಗಳಲ್ಲಿ ಒಂದಾದ ಇಂಗಾಲದ ಡೈಯಾಕ್ಸೈಡ್ ನ ಪ್ರಮಾಣವನ್ನು ತಗ್ಗಿಸುವುದರಲ್ಲಿ ಇದು ಮುಖ್ಯ ಅಂಶ.
ದ್ಯುತಿ ಸಂಶ್ಲೇಷಣಾ ಕ್ರಿಯೆಯಲ್ಲಿ ಉತ್ಪತ್ತಿಯಾಗುವ ಆಮ್ಲಜನಕ ವಾಯುಶುದ್ಧೀಕಾರಕ. ಹೊರಬರುವ
ನೀರಾವಿ ವಾತಾವರಣವನ್ನು ತಂಪಾಗಿರಿಸುತ್ತದೆ. ಮರಗಳು ದುರ್ಗಂಧವನ್ನೂ, ಮಾಲಿನ್ಯ ಕಾರಕ
ಅನಿಲಗಳನ್ನೂ ಹೀರಿ ಗಾಳಿಯನ್ನು ಶುದ್ಧೀಕರಿಸುತ್ತದೆ. ಕಾಂಡ ಹಾಗು ಎಲೆಗಳ ಮೂಲಕ ಮಾಲಿನ್ಯ ಕಾರಕ
ಸೂಕ್ಷ್ಮ ಕಣಗಳನ್ನು ಶೋಧಿಸುತ್ತದೆ. ಅಂತರ್ಜಲವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿವೆ.
ಮಣ್ಣಿನ ಸವಕಳಿಯನ್ನು ತಡೆಯುತ್ತವೆ. ಜೀವಜಾಲಕ್ಕೆ ಜೀವನಾಧಾರವಾಗಿವೆ. ಸೂಕ್ಷ್ಮ ಜೀವಿಗಳಿಂದ ಹಿಡಿದು
ಕೀಟಗಳು, ಉಭಯಜೀವಿಗಳು, ಸರೀಸೃಪಗಳು, ಪಕ್ಷಿ ಸಂಕುಲ, ಸಸ್ತನಿಗಳು – ಹೀಗೆ ಹತ್ತು ಹಲವು
ಜೀವಿಗಳಿಗೆ ಆಹಾರ, ರಕ್ಷಣೆ , ಪೋಷಣೆ ಇತ್ಯಾದಿಗಳನ್ನು ಒದಗಿಸುತ್ತವೆ. ಮಾನವನಿಗೆ ಔಷಧಿ, ಆಹಾರ,
ಬಟ್ಟೆ, ಬಣ್ಣ, ಚೌಬೀನೆ, ಉರುವಲು ಹೀಗೆ ಸರ್ವ ಅಗತ್ಯಗಳನ್ನೂ ಪೂರೈಸುತ್ತವೆ. ಮಾನವ
ಸಮುದಾಯಕ್ಕಷ್ಟೇ ಅಲ್ಲದೆ ಎಲ್ಲಾ ಜೀವ ಸಮುದಾಯಗಳಿಗೂ ಬೇಕಾದ ನೈಸರ್ಗಿಕ ಸಂಪತ್ತು, ಮರಗಳು.
ಮಾನವನ ದುರಾಸೆಗೆ,
ದೂರದಾಸೆಗೆ ನೈಸರ್ಗಿಕ ಸಂಪತ್ತು ವಿನಾಶದತ್ತ ಸಾಗಿದೆ. ನೀರಿನ ಸೆಲೆಗಳು ಒಂದೋ ಅತಿಕ್ರಮಣಗೊಂಡಿವೆ
ಇಲ್ಲವೋ ಮಾಲಿನ್ಯಗೊಂಡಿವೆ. ಮಾನವನ ಕೈವಾಡದಿಂದ
ವಾತಾವರಣದಲ್ಲಿನ ಅಸಮತೋಲನ ಎಷ್ಟು ಹೆಚ್ಚಿದೆಯೆಂದರೆ ನದಿಯ ಉಗಮ ಸ್ಥಾನದಲ್ಲಿಯೇ ನೀರಿಗೆ ತತ್ವಾರ.
ಒಂದು ನದಿಯಲ್ಲಿನ ಹರಿವು ಎಷ್ಟಿದೆಯೋ ಅದಕ್ಕಿಂತ ಎಷ್ಟೋ ಅಧಿಕ ಪಟ್ಟು ನೀರನ್ನು ಬಯಲು ಸೀಮೆಗೆ
ಹರಿಸುವ ಪೊಳ್ಳು ಭರವಸೆಯನ್ನು ಸರ್ಕಾರವೇ ಕೊಡುತ್ತದೆ. ಪಶ್ಚಿಮ ಘಟ್ಟದಂತಹ ಸೂಕ್ಷ್ಮ
ಜೀವವಲಯದಲ್ಲಿ ನೀರಿನ ಸೆಲೆಗಳು ಬತ್ತಿಹೋದರೆ ಅರಣ್ಯಗಳಿಗೆ ಉಳಿವೆಲ್ಲಿ? ನೆಟ್ಟರೂ ಮರಗಳು ಉಳಿದಾವೆ? ಅಂತಹ ಪ್ರದೇಶದಲ್ಲಿ ಗಣಿಗಾರಿಕೆ
ನಡೆಸಲು ಪ್ರವಾನಗಿ ನೀಡಿದರೆ ಕಾಡು- ವನ್ಯ ಜೀವಿಗಳ ಪಾಡೇನು? ಅರಣ್ಯ ಇಲಾಖೆಯ ನೋಟೀಸನ್ನೂ
ಲೆಕ್ಕಿಸದೆ ಅಕ್ರಮ ಗಣಿಗಾರಿಕೆ ಈಗಾಗಲೇ ಪ್ರಚಲಿತವಿದೆ. ಇಂತಹ ಹೊತ್ತಿನಲ್ಲಿ ಇಡಿಯ ರಾಜ್ಯವೇ ಬರ
ಪರಿಸ್ಥಿತಿಯನ್ನೆದುರಿಸುತ್ತಿರುವಾಗಲೂ ನಾವು
ಎಚ್ಚೆತ್ತುಕೊಳ್ಳದಿದ್ದಲ್ಲಿ ಶಾಶ್ವತವಾದ ನಿಸರ್ಗ ವಿನಾಶ ಖಂಡಿತ.
ಉದ್ಯಾನಗಳಲ್ಲಿ, ರಸ್ತೆಬದಿಗಳಲ್ಲಿ, ಮನೆಯ ಮುಂದೆ
ನೆಟ್ಟ ಮರಗಳು ಎಲ್ಲ ಜೀವರಾಶಿಯನ್ನೂ ಸಲಹಲಾರವು. ಪ್ಲಾಂಟೇಷನ್ನುಗಳ ಏಕರೂಪದ ಮರಗಳೂ ಅದಕ್ಕೆ
ಪರ್ಯಾಯವಾಗಲಾರವು. ಕೇವಲ ನಮ್ಮ ಸ್ವಾರ್ಥಕ್ಕೆಂದು ಮನೆಯಂಗಳದಲ್ಲೋ, ಕೈತೋಟದಲ್ಲೋ ಕಲ್ಪವೃಕ್ಷ
ಬೆಳೆದರೆ ವೃಕ್ಷವನ ಸೃಷ್ಟಿಯಾಗದು. ಊರಂಚಿನ ಆಲಕ್ಕೋ , ಅರಳಿಗೋ ಸಮನಾಗಲಾರದು. ಕಾಡನ್ನು
ಕಾಡಾಗಿಯೇ ಉಳಿಯಗೊಟ್ಟರೆ ಮರಗಳು ಉಳಿದಾವು. ನೀರಿನ ಸೆಲೆಗಳ, ಕಾಡುಗಳ ಒತ್ತುವರಿ ಉಳ್ಳವರಿಂದಲೇ
ಆಗುತ್ತಿದೆ. ಅಧಿಕಾರಸ್ಥರ ಅವಜ್ನೆ , ಕುಮ್ಮಕ್ಕು ಈ ಒತ್ತುವರಿಯ ಹಿಂದಿದೆ. ಹೀಗೆಯೇ
ಮುಂದುವರಿದರೆ ಅರಣ್ಯ ನಾಶದೊಂದಿಗೆ ವನ್ಯಜೀವಿಗಳ ವಿನಾಶವೂ ಮುಂದುವರೆಯುತ್ತದೆ. ತಮ್ಮಲ್ಲಿರುವ
ಲೆಖ್ಖವಿಲ್ಲದಷ್ಟು ಹಣವನ್ನು ಇಡಲು ಜಾಗವಿಲ್ಲದ, ಇಲ್ಲದವರೊಡನೆ ಹಂಚಿಕೊಳ್ಳುವ ಮನಸ್ಸೂ ಇಲ್ಲದ ಸಿರಿವಂತರ “ನೆಲ
ಕೊಳ್ಳುಬಾಕತನ”ದ ದುರಾಶೆ ಕಡಿಮೆಯಾದರೆ ವನ ವೃಕ್ಷಗಳು ನಲನಳಿಸಿಯಾವು. ಮನೆಯ ಮುಂದೆ ,
ರಸ್ತೆಬದಿಯಲ್ಲಿ ಮರಗಳನ್ನು ಬೆಳೆಸುವುದರೊಂದಿಗೆ ಊರಿಗೊಂದು ಸಂರಕ್ಷಿತ ವನವೂ ಬೇಕು. ಬಿರುಬಿಸಿಲಿನ ಈ ಬೇಸಿಗೆಯಲ್ಲಿ
ಮರಗಳಿಂದ ನಮ್ಮ ಜೀವ ತಂಪಾದಂತೆ ಸಕಲ ಜೀವಿಗಳ ಜೀವವೂ ತಂಪಾಗಿರಲಿ. ಬನ್ನಿ, ಮರ ನೆಡೋಣ, ನೆಟ್ಟು
ನೀರೆರೆಯೋಣ, ಬೆಳೆಸಿ ಸಂರಕ್ಷಿಸೋಣ.
ಗೀತಾ. ಹೆಚ್
No comments:
Post a Comment